ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ

ನವದೆಹಲಿ, ಅ. ೧೩: ಮಹಾರಾಷ್ಟçದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣದ ಸದಸ್ಯ ಬಾಬಾ ಸಿದ್ದಿಕಿ ಅವರನ್ನು ಶನಿವಾರ ಸಂಜೆ ಮುಂಬೈನ ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಾಂದ್ರಾ(ಪಶ್ಚಿಮ)ದಿAದ ಮೂರು ಬಾರಿ ಶಾಸಕರಾಗಿರುವ ಸಿದ್ದಿಕಿ ಅವರ ಪುತ್ರ ಬಾಂದ್ರಾ (ಪೂರ್ವ) ಶಾಸಕ ಜೀಶಾನ್ ಅವರ ಕಚೇರಿಯಲ್ಲಿ ಹತ್ತಿರದಿಂದ ಮೂರು ಬಾರಿ ಗುಂಡು ಹಾರಿಸಲಾಗಿತ್ತು. ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತರು ತಾವು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿ ಸಂಬAಧ ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಮೂರನೆಯವ ಪರಾರಿಯಾಗಿದ್ದಾನೆ.

ಕೋರ್ಟ್ ಅನುಮತಿ ನೀಡಿದರಷ್ಟೇ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್: ಸಿದ್ದರಾಮಯ್ಯ

ಬೆಂಗಳೂರು, ಅ. ೧೩: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂದಕ್ಕೆ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕೋರ್ಟ್ ಅನುಮತಿ ನೀಡಿದರಷ್ಟೇ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಭಾನುವಾರ ನಗರದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ಅಗತ್ಯವಾಗಿದೆ. ಕೋರ್ಟ್ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಆಗುತ್ತದೆ. ಇಲ್ಲದಿದ್ದರೆ ಸಾಧ್ಯವಿಲ್ಲ’ ಎಂದು ಹೇಳಿದರು. ಸುಳ್ಳು ಪ್ರಕರಣಗಳು ದಾಖಲಾಗಿದ್ದರೆ, ಉದ್ದೇಶಪೂರ್ವಕವಾಗಿ ಪ್ರಕಣಗಳನ್ನು ದಾಖಲಿಸಿದ್ದರೆ ಅಥವಾ ಹೋರಾಟಗಳಿಗೆ ಸಂಬAಧಿಸಿ ಪ್ರಕರಣಗಳನ್ನು ದಾಖಲಿಸಿದ್ದರೆ, ಅವುಗಳನ್ನು ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಇದು ಎಲ್ಲ ಸರ್ಕಾರದಲ್ಲೂ ಅಸ್ತಿತ್ವದಲ್ಲಿರುತ್ತದೆ. ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಪರಿಶೀಲಿಸಿದ ಸಮಿತಿ, ಅದು ಸುಳ್ಳು ಪ್ರಕರಣ ಎಂದು ತಿಳಿಸಿತ್ತು. ಆ ವರದಿ ಸಚಿವ ಸಂಪುಟಕ್ಕೆ ಬಂದಿದ್ದು, ನಾವು ಒಪ್ಪಿಕೊಂಡಿದ್ದೇವೆ. ಬಿಜೆಪಿ ಆಡಳಿತವಿದ್ದಾಗಲೂ ಅನೇಕ ಅಪರೂಪದ ಪ್ರಕರಣಗಳನ್ನು ಹಿಂಪಡೆದಿತ್ತು ಎಂದರು.

ಪತ್ರಕರ್ತೆ ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ

ವಿಜಯಪುರ, ಅ. ೧೩: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಡವೆಗೆ ವಿಶೇಷ ನ್ಯಾಯಾಲಯ ಅಕ್ಟೋಬರ್ ೯ ರಂದು ಜಾಮೀನು ನೀಡಿದ್ದು ಜೈಲಿನಿಂದ ಹೊರಬಂದ ಆರೋಪಿಗಳನ್ನು ಹಿಂದೂಪರ ಸಂಘಟನೆಗಳು ಸನ್ಮಾನಿಸಿವೆ. ಶನಿವಾರ ಸಂಜೆ ಬಿಡುಗಡೆಯಾದ ಪರಶುರಾಮ್ ಮತ್ತು ಮನೋಹರ್ ಅವರನ್ನು ಹಿಂದುತ್ವವಾದಿ ಸಂಘಟನೆಗಳ ಸದಸ್ಯರು ಸ್ವಾಗತಿಸಿ ಗೌರವಿಸಿದರು. ಅಷ್ಟೇ ಅಲ್ಲದೆ ಫ್ರಿಂಜ್ ಗ್ರೂಪ್ ಸದಸ್ಯರು ಸನಾತನ ಧರ್ಮ ಹಾಗೂ 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆಗಳನ್ನು ಕೂಗಿದರು. ಆರೋಪಿಗಳು ಮೊದಲಿಗೆ ಕಾಳಿಕಾದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡು ನಂತರ ಶಿವಾಜಿ ವೃತ್ತದಲ್ಲಿರುವ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಸನ್ಮಾನ ಕಾರ್ಯಕ್ರಮದಲ್ಲಿ ಹಿಂದುತ್ವದ ಮುಖಂಡ ಉಮೇಶ್ ವಂದಾಲ್ ಆರೋಪಿಗಳಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸುತ್ತಿದ್ದು ಈ ವೀಡಿಯೋ ವೈರಲ್ ಆಗಿದೆ.

ಬೆಂಕಿ ಹೊತ್ತಿಕೊಂಡಿರುವಾಗಲೇ ರಸ್ತೆ ಮೇಲೆ ಚಲಿಸಿದ ಕಾರು

ಜೈಪುರ, ಅ. ೧೩: ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿದ್ದ ಕಾರೊಂದು ನೋಡ ನೋಡುತ್ತಲೇ ರಸ್ತೆ ಮೇಲೆ ವೇಗವಾಗಿ ಚಲಿಸಿದ ಘಟನೆ ನಡೆದಿದೆ. ರಾಜಸ್ತಾನದ ಜೈಪುರ ಜಿಲ್ಲೆಯ ಅಜ್ಮೀರ್ ರಸ್ತೆಯ ಸುದರ್ಶನಪುರ ಪುಲಿಯಾ ಕಡೆಗೆ ಚಾಲಕರಹಿತ ಕಾರು ಶನಿವಾರ ಎಲಿವೇಟೆಡ್ ರಸ್ತೆಯಲ್ಲಿ ವೇಗವಾಗಿ ಚಲಿಸಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ದಾರಿಹೋಕ ಪ್ರಯಾಣಿಕರು ಅದನ್ನು ನಿಂತು ನೋಡುತ್ತಿದ್ದಾಗಲೇ ಕಾರು ವೇಗವಾಗಿ ಚಲಿಸಿದೆ. ಪರಿಣಾಮ ವಾಹನ ಚಾಲಕರು ತಮ್ಮ ವಾಹನಗಳನ್ನು ಮತ್ತು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡಿದರು. ಕಾರು ರಸ್ತೆ ಮೇಲೆ ಚಲಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಕಾರು ವೇಗವಾಗಿ ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಬಳಿಕ ಕಾರು ಬೆಂಕಿ ಹತ್ತಿಕೊಂಡು ಸಂಪೂರ್ಣ ಉರಿದು ಹೋಗಿದೆ.

ಕೋವಿಡ್-೧೯:ಹೃದಯಾಘಾತ ಅಪಾಯ ಹೆಚ್ಚು

ನವದೆಹಲಿ, ಅ. ೧೩: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಮಹಾಮಾರಿ ಕೋವಿಡ್ ಆತಂಕ ಇನ್ನೂ ಕಡಿಮೆಯಾಗಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಮಾನುಷ್ಯರನ್ನು ಕೋವಿಡ್ ವೈರಸ್ ಕಾಡುತ್ತಲೇ ಇದ್ದು, ಇದೀಗ ಹಾರ್ಟ್ ಅಟ್ಯಾಕ್ ರೂಪದಲ್ಲಿ ಕೋವಿಡ್ ಭೀತಿ ಹೆಚ್ಚಿಸಿದೆ. ಹೊಸ ಅಧ್ಯಯನದ ಪ್ರಕಾರ, ಕೋವಿಡ್ ಸಾಂಕ್ರಾಮಿಕ ರೋಗದ ಆರಂಭಿಕ ಅಂದರೆ ಮೊದಲ ಅಲೆಯಲ್ಲಿ ತೀವ್ರವಾದ ಕೋವಿಡ್-೧೯ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಗಳು ಹೃದಯಾಘಾತ ಮತ್ತು ಪಾರ್ಶ್ವವಾಯುಗಳನ್ನು ಅನುಭವಿಸುವ ಅಪಾಯ ಎರಡು ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಆರ್ಟೆರಿಯೊಸ್ಕ್ಲೆರೋಸಿಸ್, ಥ್ರಂಬೋಸಿಸ್ ಮತ್ತು ನಾಳೀಯ ಜೀವಶಾಸ್ತ್ರದ ಜರ್ನಲ್‌ನಲ್ಲಿ ಈ ವಾರ ಪ್ರಕಟವಾದ ಸಂಶೋಧನೆ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಈ ಕುರಿತು ಮಾಹಿತಿ ನೀಡಿದ್ದು, ಹೆಚ್ಚಿದ ಅಪಾಯವು ಮೂರು ವರ್ಷಗಳವರೆಗೆ ಇರುತ್ತದೆ ಎಂದು ಬಹಿರಂಗಪಡಿಸಿದೆ. ಕೋವಿಡ್ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದರೆ ಕೋವಿಡ್ -೧೯ ಸೋಂಕಿಗೆ ಒಳಗಾದವರು ಹೃದಯಾಘಾತ, ಪಾರ್ಶ್ವವಾಯು ಮತ್ತು ಮರಣವನ್ನು ಅನುಭವಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚು ಎಂದು ಅಧ್ಯಯನವು ಕಂಡುಹಿಡಿದಿದೆ. ಹೃದಯರಕ್ತನಾಳದ ಸಮಸ್ಯೆ ಅಥವಾ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಾ ಸಾಗಿದೆ ಎಂದು ಹೇಳಿದ್ದಾರೆ. ತೀವ್ರವಾದ ಕೋವಿಡ್-೧೯ ಸೋಂಕು ಹೊಂದಿದ್ದ ವ್ಯಕ್ತಿಗಳು, ವಿಶೇಷವಾಗಿ ಆಸ್ಪತ್ರೆಗೆ ದಾಖಲಾದವರು, ವೈರಸ್‌ನ ಸಂಭಾವ್ಯ ದೀರ್ಘಕಾಲೀನ ಆರೋಗ್ಯ ಪರಿಣಾಮಗಳ ಬಗ್ಗೆ ತಮ್ಮ ವೈದ್ಯರನ್ನು ಸಂಪರ್ಕಿಸಲು ಒತ್ತಾಯಿಸಲಾಗುತ್ತದೆ.