ಮಡಿಕೇರಿ, ಅ. ೧೩: ಮಡಿಕೇರಿ ದಸರಾ ಆಚರಣೆಯ ಸಂದರ್ಭದಲ್ಲಿ ಈ ಬಾರಿ ವಿಶೇಷವಾದ ಕಾರ್ಯಕ್ರಮವೊಂದು ಅರ್ಥ ಪೂರ್ಣವಾಗಿ ಜರುಗಿತು. ಕಾನೂನು ಸುವ್ಯವಸ್ಥೆಯನ್ನು ಪಾಲಿಸುವ ಮೂಲಕ ಜನರಕ್ಷಕರಾಗಿ ಕೆಲಸ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿರುವ ಸಾಧನೆಯ ಪರಿಗಣಿಸಿ ಆಯುಧಪೂಜಾ ದಿನದ ಕಾರ್ಯಕ್ರಮದಂದು ಮಡಿಕೇರಿ ದಸರಾ ಸಮಿತಿ ಜಿಲ್ಲೆಯ ಜನತೆಯ ಪರವಾಗಿ ಇವರನ್ನು ಗೌರವಿಸಿ ಸನ್ಮಾನಿಸಿದ್ದು, ಇವರು ಭವಿಷ್ಯದಲ್ಲಿ ಮತ್ತಷ್ಟು ಉತ್ತಮ ಕೆಲಸ ನಿರ್ವಹಿಸಲು ಉತ್ತೇಜನ ನೀಡಿದಂತಾಗಿದೆ. ಕೆಲ ದಿನಗಳ ಹಿಂದೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ರಾಮರಾಜನ್ ಹಾಗೂ ತಂಡ ಅಂತರರಾಷ್ಟಿçÃಯ ಮಾದಕ ವಸ್ತು ಮಾರಾಟ ಜಾಲವೊಂದನ್ನು ಭೇದಿಸಿತ್ತು. ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿಯಾಗುತ್ತಿದ್ದುದ್ದನ್ನು ವ್ಯವಸ್ಥಿತ ಪ್ರಯತ್ನದ ಮೂಲಕ ಹೆಡಿಮುರಿ ಕಟ್ಟಿದ್ದಲ್ಲದೆ ಇತರ ೯ ಆರೋಪಿಗಳನ್ನು ಬಂಧಿಸಿ ರೂ. ೩ ಕೋಟಿ ಮೌಲ್ಯದ ಹೈಡ್ರೋ ಗಾಂಜಾವನ್ನು ಕೊಡಗು ಪೊಲೀಸ್ ತಂಡ ವಶಪಡಿಸಿಕೊಂಡ ಮಹತ್ವದ ಕಾರ್ಯಾಚರಣೆ ಇದಾಗಿತ್ತು. ಇದಲ್ಲದೆ ೧೬೫ ಅಪರಾಧ ಪ್ರಕರಣ ಪತ್ತೆಹಚ್ಚಿ ೩೫೫ ಆರೋಪಿಗಳನ್ನು ಒಂದು ವರ್ಷದ ಅವಧಿಯಲ್ಲಿ ಬಂಧಿಸಿದ ಸಾಧನೆ ಹಿನ್ನೆಲೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಸೇರಿದಂತೆ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಡಿವೈಎಸ್‌ಪಿ ವೃತ್ತ ನಿರೀಕ್ಷಕರು, ಉಪ ನಿರೀಕ್ಷಕರು ಹಾಗೂ ಇನ್ನಿತರ ಸಿಬ್ಬಂದಿ ಸೇರಿ ೩೫ ಮಂದಿಯನ್ನು ದಸರಾ ಸಮಿತಿ ಗುರುತಿಸಿ ಜಿಲ್ಲೆಯ ಜನರ ಪರವಾಗಿ ಸನ್ಮಾನಿಸಿದ್ದು, ಈ ವರ್ಷದ ವಿಶೇಷತೆಗಳಲ್ಲಿ ಒಂದಾಗಿತ್ತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಪೊಲೀಸರು ಸಾಮಾನ್ಯರೇ ಹೊರತು ಸಿನಿಮಾದಲ್ಲಿ ತೋರಿಸುವಂತೆ ಹುಲಿ, ಸಿಂಹಗಳಲ್ಲ. ನಮಗೂ ಕುಟುಂಬವಿದೆ. ಮಾನವೀಯತೆ ಇದೆ ಎಂದ ಅವರು, ಥೈಲ್ಯಾಂಡ್‌ನಿAದ ಭಾರತಕ್ಕೆ ನಂತರ ದುಬೈಗೆ ಸಿಂಥೇಟಿಕ್ ಡ್ರಗ್ಸ್ಗಳನ್ನು ಕೊಂಡೊಯ್ದು ಮಾರಾಟ ಮಾಡಿ ಅದರಲ್ಲಿ ಬಂದ ಹಣವನ್ನು ಭಯೋತ್ಪಾದನಾ, ಅಕ್ರಮ ಚಟುವಟಿಕೆಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಈ ಡ್ರಗ್ಸ್ನಿಂದ ಯುವಜನತೆ ಹಾಳಾಗುತ್ತದೆ. ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಹೋರಾಟ ಮಾಡುತ್ತಿದೆ.

ನಮ್ಮ ಸಿಬ್ಬಂದಿಗಳು ಕೊಚ್ಚಿನ್‌ಗೆ ತೆರಳಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಇದನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದು ಹೆಮ್ಮೆ ತಂದಿದೆ. ಉತ್ತಮ ಸಮಾಜ ಕಟ್ಟಲು ಪ್ರತಿಯೊಬ್ಬರು ಕೈಜೋಡಿಸುವಂತೆ ಕರೆ ನೀಡಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಖಜಾಂಚಿ ಅರುಣ್‌ಶೆಟ್ಟಿ, ಕಿರಿಕೊಡ್ಲಿ ಸ್ವಾಮೀಜಿ, ನಗರಸಭೆ ಪೌರಾಯುಕ್ತ ರಮೇಶ್, ಹಿಂದೂ ಮಲೆಯಾಳಿ ಸಮಾಜ ಅಧ್ಯಕ್ಷ ಧರ್ಮೇಂದ್ರ, ದಸರಾ ಸಮಿತಿ ಗೌರವ ಸಲಹೆಗಾರ ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು. ಸಂಧ್ಯಾ ಚಿದ್ವಿಲಾಸ್, ಚಿತ್ರಾನಂಜಪ್ಪ, ವಂದನಾ ಪೊನ್ನಪ್ಪ ಪ್ರಾರ್ಥಿಸಿ, ಜಿ. ಚಿದ್ವಿಲಾಸ್ ನಿರೂಪಿಸಿ, ರಾಜೇಶ್ ಯಲ್ಲಪ್ಪ ಸ್ವಾಗತಿಸಿ, ಅರುಣ್ ಶೆಟ್ಟಿ ವಂದಿಸಿದರು.