ಮಡಿಕೇರಿ, ಅ. ೧೩: ಮಡಿಕೇರಿ ದಸರಾದಲ್ಲಿ ದಶಮಂಟಪಗಳು ಈ ಬಾರಿಯೂ ಕಾನೂನು ಉಲ್ಲಂಘನೆ ಮಾಡಿವೆ. ಈ ಬಗ್ಗೆ ಮತ್ತೆ ಹೈಕೋರ್ಟ್ನಲ್ಲಿ ರಿಟ್ ಹಾಕಿ ಪ್ರಶ್ನಿಸುವುದು ಖಡಾಖಂಡಿತ ಎಂದು ವಕೀಲ ಅಮೃತೇಶ್ ಅವರು ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು ಡಿ.ಜೆ, ಲೇಸರ್ ಬಳಕೆ ಬಗ್ಗೆ ನಿಯಂತ್ರಣ ಕೈಗೊಳ್ಳುವುದಾಗಿ ಕೆಲದಿನಗಳ ಹಿಂದೆ ನಡೆದ ಸಭೆಯಲ್ಲಿ ದಶಮಂಟಪದವರು ಮಾತು ಕೊಟ್ಟಿದ್ದರು. ಆದರೆ ಇದೆಲ್ಲವನ್ನೂ ಮತ್ತೆ ಉಲ್ಲಂಘನೆ ಮಾಡಲಾಗಿದೆ. ತಾವು ನಿನ್ನೆ ದಸರಾ ಸಂದರ್ಭ ಎಲ್ಲವನ್ನೂ ಅವಲೋಕಿ ಸಿರುವುದಾಗಿ ಅಮೃತೇಶ್ ಹೇಳಿದರು.

ಕಳೆದ ಬಾರಿ ಕೇವಲ ನ್ಯಾಯಾಲಯದಿಂದ ದಂಡ ವಿಧಿಸಲ್ಪಟ್ಟಿತ್ತು. ಈ ಬಾರಿ ಅದು ಕೇವಲ ದಂಡವಾಗಿರುವುದಿಲ್ಲ. ಅದಕ್ಕಿಂತ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುತ್ತೇನೆ. ರವಿಶಂಕರ್ ಗುರೂಜಿ ಪ್ರಕರಣದಲ್ಲಿ ಭಾರೀ ಮೊತ್ತದ ದಂಡ ವಿಧಿಸಿರುವುದನ್ನು ಉಲ್ಲೇಖಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದ ಅವರು, ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಿದಂತಿದೆ. ಕಾನೂನು ಏನು ತೋರಿಸುತ್ತೆ ಎಂಬುದು ಅರಿವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನದ ಬಗ್ಗೆಯೂ ತಮ್ಮ ಆಕ್ಷೇಪವಿದೆ. ಅಲ್ಲಿ ಇರುವ ಷರತ್ತೂ ಕೂಡ ಉಲ್ಲಂಘಿಸಲಾಗಿದೆ. ಕಳೆದ ಬಾರಿಯ ಲೆಕ್ಕಪತ್ರದ ಬಗ್ಗೆಯೂ ಗೊಂದಲವಿತ್ತು ಎಂದು ಅವರು ಹೇಳಿದರು.

೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಡಿ.ಜೆ. ಅಬ್ಬರ ಲೇಸರ್ ಬಗ್ಗೆ ತಡರಾತ್ರಿಯೇ ಎಸ್.ಪಿ. ಅವರ ಗಮನಕ್ಕೂ ತಂದಿದ್ದಾಗಿ ತಿಳಿಸಿದ ಅಮೃತೇಶ್, ಎಲ್ಲವನ್ನೂ ಕೂಲಂಕುಶವಾಗಿ ಉಲ್ಲೇಖಿಸಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇನೆ. ಕಳೆದ ಬಾರಿಯ ಅರ್ಜಿ ಇನ್ನೂ ಬಾಕಿ ಇದೆ. ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿರುವುದನ್ನು ಮತ್ತೆ ಪ್ರಶ್ನಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.