ಶ್ರೀಮಂಗಲ, ಅ. ೧೩: ಹುಲಿ ಸೆರೆ ಕಾರ್ಯಾಚರಣೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ ಸ್ಥಳಗಳಿಗೆ ಶಾಸಕರು ಶನಿವಾರ ಭೇಟಿ ನೀಡಿ, ಸ್ಥಳದಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ನಿರ್ದೇಶನ ನೀಡಿದರು.

ಜೀವಂತವಾಗಿ ಸೆರೆ ಹಿಡಿಯುವುದೇ ಉತ್ತಮ ಎಂದು ಇಲ್ಲಿನ ಸ್ಥಳೀಯರು ನಿಲುವು ವ್ಯಕ್ತಪಡಿಸಿದ ಹಿನೆÀ್ನಲೆ ಅನುಮತಿ ಸಿದ್ದ ಮಾಡಿಕೊಂಡು ಸೆರೆ ಹಿಡಿಯಲು ಪೊನ್ನಣ್ಣ ಸೂಚಿಸಿದರು.

ವನ್ಯಜೀವಿ ಪಿ.ಸಿ.ಸಿ.ಎಫ್ ಪುಷ್ಕರ್ ಅವರೊಂದಿಗೆ ಶಾಸಕ ಪೊನ್ನಣ್ಣ ದೂರವಾಣಿ ಮೂಲಕ ಪ್ರಕರಣದ ಗಂಭೀರತೆ ಹಿನ್ನಲೆ ಹುಲಿ ಸೆರೆ ಅನುಮತಿ ಅನಿವಾರ್ಯ ಎಂದು ತಿಳಿಸಿದರು.

ಸ್ಥಳದಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದ ಡಿ.ಎಫ್.ಓ. ನೆಹರು ಅವರು ಶಾಸಕರ ನಿರ್ದೇಶನದಂತೆ ವನ್ಯಜೀವಿ ಅರವಳಿಕೆ ತಜ್ಞ, ಶಾರ್ಪ್ ಶೂಟರ್, ಮತ್ತಿಗೋಡು ಸಾಕಾನೆ ಶಿಬಿರದಿಂದ ಸಾಕಾನೆಗಳನ್ನು ಸ್ಥಳಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಹೆಚ್ಚುವರಿ ಪರಿಹಾರ : ಹುಲಿ ದಾಳಿಗೆ ಹಸು ಕಳೆದುಕೊಂಡ ಮಾಣೀರ ಕಿಶನ್ ಅವರಿಗೆ ಈಗಾಗಲೇ ರೂ. ೩೦ ಸಾವಿರ ಪರಿಹಾರವನ್ನು ಅರಣ್ಯ ಇಲಾಖೆ ನೀಡಿದೆ, ವಿಶೇಷ ಪ್ರಕರಣದಡಿ ಹೆಚ್ಚುವರಿ ಪರಿಹಾರವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಸಿ.ಎಫ್. ನೆಹರು ಅವರಿಗೆ ಶಾಸಕ ಪೊನ್ನಣ್ಣ ಸೂಚಿಸಿದರು.

ಈ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಶ್ರೀಮಂಗಲ ವನ್ಯಜೀವಿ ವಿಭಾಗದ ಆರ್.ಎಫ್.ಓ. ಅರವಿಂದ್, ಕೊಡಗು ಬೆಳೆಗಾರರ ಒಕ್ಕೂಟದ ಮಾಣೀರ ವಿಜಯ ನಂಜಪ್ಪ, ಸ್ಥಳೀಯ ಪ್ರಮುಖರಾದ ಚೊಟ್ಟೆಯಂಡಮಾಡ ವಿಶು, ಉದಯ, ಬೋಸು ವಿಶ್ವನಾಥ್, ತೀತಿರ ಪ್ರಭು, ಮಾಣೀರ ಉಮೇಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಸೂರಜ್ ಹೊಸೂರು, ನರೇಂದ್ರ ಕಾಮತ್, ಹುಲಿ ದಾಳಿಗೆ ಹಸು ಕಳೆದುಕೊಂಡ ಬೆಳೆಗಾರ ಮಾಣೀರ ಕಿಸಾನ್ ಮತ್ತಿತರರು ಇದ್ದರು.