ಮಡಿಕೇರಿ, ಅ. ೧೩: ಎಲ್ಲಿ ನೋಡಿದರೂ ಜನರೋ ಜನ..ಜನ ಸಾಗರ, ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಮಡಿಕೇರಿಯಲ್ಲಿ ಸ್ವರ್ಗವೇ ಸೃಷ್ಟಿಯಾದಂತ ಸನ್ನಿವೇಶ, ಕಗ್ಗತ್ತಲ ನಡುವೆ ಕೃತಕ ಬೆಳಕಿನ ವೈಭವ, ಸಂಭ್ರಮ, ಸಡಗರದೊಂದಿಗೆ ಈ ವರ್ಷದ ಮಡಿಕೇರಿ ದಸರಾ ಜನೋತ್ಸವಕ್ಕೆ ವರ್ಣರಂಜಿತ ತೆರೆ.

ಹೌದು..ಐತಿಹಾಸಿಕ ಮಡಿಕೇರಿ ದಸರಾಗೆ ದಶಮಂಟಪ ಶೋಭಾ ಯಾತ್ರೆಯ ವೈಭವದೊಂದಿಗೆ ಮುಕ್ತಾಯದ ಪರದೆಯನ್ನು ಎಳೆಯಲಾಯಿತು. ಕಳೆದ ೧೦ ದಿನಗಳಿಂದ ಮಡಿಕೇರಿಯಲ್ಲಿ ಜನೋತ್ಸವದ ಮೆರುಗು ಕಳೆಕಟ್ಟಿತ್ತು. ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಲರವಗಳ ಮೂಲಕ ಮನರಂಜನೆ ದೊರೆಯುತಿತ್ತು. ದಸರಾದ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ದಶಮಂಟಪ ಶೋಭಾಯಾತ್ರೆಯ ಆಕರ್ಷಣೆಯ ಅದ್ದೂರಿತನ ಕಣ್ತುಂಬಿಕೊಳ್ಳಲು ಜಿಲ್ಲೆ ಅಲ್ಲದೆ ವಿವಿಧ ರಾಜ್ಯಗಳಿಂದ ಮಡಿಕೇರಿಗೆ ಜನಸಾಗರವೇ ಹರಿದು ಬಂದಿತ್ತು.

ಬೆಳಿಗ್ಗೆ ಸುರಿದ ಮಳೆ

ಜನತೆಯ ನಿರೀಕ್ಷೆ-ಸಂಭ್ರಮಕ್ಕೆ ಯಾವುದೇ ಅಡಚಣೆಯಾಗಲಿಲ್ಲ. ಶನಿವಾರದಂದು ಬೆಳಿಗ್ಗೆಯಿಂದ ಸಂಜೆಯ ತನಕ ಮಡಿಕೇರಿಯಲ್ಲಿ ಧೋ ಎಂದು ಸುರಿದ ಮಳೆಯಿಂದಾಗಿ ರಾತ್ರಿ ಜರುಗುವ ವೈಭವದ ದಸರಾ ಆಚರಣೆಗೆ ಎಲ್ಲಿ ತೊಡಕಾಗುತ್ತದೋ ಎಂಬ ಆತಂಕ ಈ ತನಕ ದಸರಾಕ್ಕಾಗಿ ದುಡಿದ ಪ್ರತಿಯೊಬ್ಬರಲ್ಲೂ ಮನೆ ಮಾಡಿತ್ತು.

ಆದರೆ, ರಾತ್ರಿ ಆಗುತ್ತಿದ್ದಂತೆ ಆಗಸ ಶುಭ್ರಗೊಂಡು ನಕ್ಷತ್ರಗಳು ಇಣುಕಿ ಮಳೆಯ ವಾತಾವರಣ ದೂರ ಮಾಡಿತು. ಬೆಳಿಗ್ಗೆ ತನಕ ಬಿಡುವು ನೀಡಿದ್ದ ಮಳೆರಾಯ ಬೆಳಿಗ್ಗೆ ೪.೪೫ ರಿಂದ ಅರ್ಧ ಗಂಟೆಗಳ ಕಾಲ ಸುರಿದು ಮರೆಯಾಯಿತು. ಇದರಿಂದ ಕೆಲಕಾಲ ವ್ಯತಿರಿಕ್ತ ಪರಿಣಾಮ ಎದುರಾದರೂ ಅನಂತರ ಸಹಜ ಸ್ಥಿತಿಯತ್ತ ಮರಳಿತು.

ಸ್ವರ್ಗ ಲೋಕ ಸೃಷ್ಟಿ

ಮಂಜಿನಗರಿ ಮಡಿಕೇರಿ ಅಕ್ಷರಶಃ ಸ್ವರ್ಗಲೋಕದಂತೆ ಭಾಸವಾಗುತಿತ್ತು. ಸೂರ್ಯ ಮರೆಯಾಗಿ ಬಾನಂಗಳದಲ್ಲಿ ಕಾರ್ಮೋಡ ಆವರಿಸಿ, ನಕ್ಷತ್ರಗಳು ಮಿರಮಿರ ಮಿಂಚುವ ಹೊತ್ತಿನಲ್ಲಿ ಭೂಲೋಕದಲ್ಲಿ ಹೊಸ ಲೋಕ ಉದಯವಾಗಿತ್ತು. ದಶಮಂಟಪಗಳಲ್ಲಿ ಅಳವಡಿಸಲಾಗಿದ್ದ ಬೆಳಕಿನ ಚಿತ್ತಾರ ಬಾನಂಗಳದಲ್ಲಿ ದೃಶ್ಯಕಾವ್ಯ ಬರೆಯುವ ರೀತಿಯಲ್ಲಿ ಕಂಗೊಳಿಸುತಿತ್ತು. ಅಲ್ಲದೆ ನಗರದಲ್ಲಿ ಅಳವಡಿಸಲಾಗಿದ್ದ ಲೈಟಿಂಗ್‌ಗಳಿAದ ನಗರ ಮತ್ತಷ್ಟು ಕಳೆಯಿಂದ ತುಂಬಿತ್ತು. ದೇವಾಲಯಗಳು ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದವು.

ಮಂಜಿನ ನಗರಿಯಲ್ಲಿ ಜನಸಾಗರ

ದಸರಾದ ಕೊನೆ ದಿನ ವಿಜಯದಶಮಿಯ ವೈಭವಕ್ಕೆ ಸಹಸ್ರ ಸಂಖ್ಯೆಯಲ್ಲಿ ಜನಸಾಗರ ಆಗಮಿಸಿ ಸಾಕ್ಷೀಕರಿಸಿದರು. ಮೈಸೂರು ದಸರಾವನ್ನು ಮುಗಿಸಿಕೊಂಡು ಸಾಗರೋಪಾದಿಯಲ್ಲಿ ಜನರು ಸಂಜೆ ಹೊತ್ತಿನಲ್ಲಿ ಮಡಿಕೇರಿಗೆ ಬಂದರು.

ಬೆಳಿಗ್ಗಿನಿಂದಲೇ ಮಡಿಕೇರಿಯಲ್ಲಿ ಜನದಟ್ಟಣೆ ಸೃಷ್ಟಿಯಾಗಿತ್ತು. ಹೊತ್ತು ಕಳೆದರೂ ಜನಸಂಖ್ಯೆ ಮಾತ್ರ ಕಡಿಮೆಯಾಗುತ್ತಿರಲಿಲ್ಲ. ಸೂರ್ಯ ಉದಯವಾಗುವ ತನಕವೂ ನಗರದಲ್ಲಿ ಕಿಕ್ಕಿರಿದು ಜನ ಸೇರಿದ್ದರು.

ಸಂಜೆ ೫ ಗಂಟೆಯ ಬಳಿಕ ನಗರದಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದರು. ಮೈಸೂರು ರಸ್ತೆಯ ಚೈನ್‌ಗೇಟ್ ಬಳಿ, ಮಂಗಳೂರು ರಸ್ತೆ ಮೂಲಕ ಬರುವ ವಾಹನಗಳನ್ನು ತಾಳತ್ತಮನೆಯಲ್ಲಿ, ವೀರಾಜಪೇಟೆ ರಸ್ತೆ ಕಡೆಯಿಂದ ಬರುವ ವಾಹನಗಳನ್ನು ಮೇಕೇರಿಯಲ್ಲಿ ತಡೆಹಿಡಿದು ಅಲ್ಲಲ್ಲಿ ಪೊಲೀಸ್ ಇಲಾಖೆಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ನಿಗದಿತ ದರದಲ್ಲಿ ಮಡಿಕೇರಿಗೆ ಬರಲು ಆಟೋ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿತ್ತು.

ನಗರದ ರಸ್ತೆಗಳ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿತ್ತು. ಪೊಲೀಸರು ಮಡಿಕೇರಿ ಪ್ರವೇಶವಾಗುವ ಜಾಗಗಳಲ್ಲಿ ನಾಕಾಬಂದಿ ಹಾಕಿ ವಾಹನಗಳ ನಗರ ಪ್ರವೇಶವನ್ನು ತಡೆದರು.

ರಾತ್ರಿ ವೇಳೆಗೆ ಜನರ ಸಂಖ್ಯೆ ನಿರೀಕ್ಷೆಗೂ ಹೆಚ್ಚು ಕಂಡುಬAತು. ಇದರಿಂದ ನಡೆದಾಡಲು ಪರದಾಡಬೇಕಾಯಿತು. ನಗರದ ಮುಖ್ಯರಸ್ತೆಗಳಲ್ಲಿ ಕಿಕ್ಕಿರಿದು ಸೇರಿದ್ದ ಜನರು ಶಿಳ್ಳೆ, ಕೇಕೆ ಹಾಕುತ್ತ ದಸರಾ ಕಣ್ತುಂಬಿಕೊAಡರು. ರಾಜಾಸೀಟ್ ರಸ್ತೆ, ಮಂಗೇರಿರ ಮುತ್ತಣ್ಣ ವೃತ್ತದಿಂದ ಸರಕಾರಿ ಬಸ್ ನಿಲ್ದಾಣದ ತನಕ ಹಾಗೂ ರಾಜಾಸೀಟ್ ರಸ್ತೆಯಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಜನರೇ ಕಂಡು ಬರುತ್ತಿದ್ದರು.

ಬೀದಿ ಬದಿಗಳಲ್ಲಿ ನಿರ್ಮಾಣಗೊಂಡಿದ್ದ ಅಂಗಡಿಗಳಲ್ಲಿ ವಿವಿಧ ಬಗೆಯ ಆಟಿಕೆಗಳು, ಅಲಂಕಾರಿಕ ವಸ್ತುಗಳು, ಬಟ್ಟೆ ಸೇರಿದಂತೆ ಇನ್ನಿತರ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ನಡೆದರೆ, ಕ್ಯಾಂಟೀನ್, ಹೊಟೇಲ್‌ಗಳಲ್ಲಿ ಊಟಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.

ಕುಣಿದು ಕುಪ್ಪಳಿಸಿದ ಜನತೆ

ನಿಯಮಿತ ಧ್ವನಿವರ್ಧಕ ಬಳಕೆಯ ಎಚ್ಚರಿಕೆ ನಡುವೆ ಜನತೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಬಹುತೇಕ ಮಂಟಪಗಳು ಧ್ವನಿವರ್ಧಕದೊಂದಿಗೆ ಸಾಂಪ್ರದಾಯಕ ವಾಲಗ, ಬ್ಯಾಂಡ್ ಸೆಟ್‌ಗಳನ್ನು ಮನರಂಜನೆಯ ಭಾಗವಾಗಿ ಮಾಡಿಕೊಂಡಿದ್ದವು.

ಪ್ರತಿಮಂಟಪಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳ ಮೂಲಕ ಬರುತ್ತಿದ್ದ ಹಾಡಿಗೆ ಜನರು ಮಂಟಪದ ಎದುರು ಕುಣಿಯುತ್ತ ಸಾಗಿ ಸಂಭ್ರಮಿಸಿದರು. ನಗರದ ಹೃದಯ ಭಾಗಗಳಲ್ಲಿ ಕಾಲಿಡಲು ಜಾಗವಿಲ್ಲದಂತಾಗಿತ್ತು. ದಶಮಂಟಪ ಶೋಭಾಯಾತ್ರೆ ವೀಕ್ಷಣೆಗೆ ಕಾವೇರಿ ಕಲಾಕ್ಷೇತ್ರ ಎದುರು, ಕೋಟೆ ಎದುರು ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ಕಟ್ಟಡ ಮೇಲೆ, ರಸ್ತೆ ಬದಿ ನಿಂತು ದಶಮಂಟಪ ದೃಶ್ಯವೈಭವ ಕಂಡು ಜನರು ಪುಳಕಿತರಾದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿಗಳು ‘ಡೆಸಿಬಲ್ ಮೀಟರ್’ ಹಿಡಿದು ಧ್ವನಿವರ್ಧಕಗಳ ಬಳಕೆಯ ಕುರಿತು ದಾಖಲೆ ಮಾಡಿಕೊಂಡರು.