ಮಡಿಕೇರಿ, ಅ. ೧೩ : ಈ ಬಾರಿಯ ದಸಾರದಲ್ಲಿ ಹಲವು ವಿಶೇಷತೆಗಳನ್ನು ಜನತೆಗೆ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್‌ಗೌಡ ಅವರ ಕಾರ್ಯಶೈಲಿಯ ಬಗ್ಗೆ ಜನತೆ ಶ್ಲಾಘನೀಯ ಅಭಿಪ್ರಾಯ ವ್ಯಕ್ತಪಡಿಸಿದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನ ಮಾಡಬೇಕೆಂಬ ಅವರ ಆಶಯ ಸಮರ್ಥನೀಯವಾಗಿತ್ತು.

ಕಳೆದ ಬಾರಿ ರೂ. ೧ ಕೋಟಿ ಅನುದಾನವನ್ನು ಸರ್ಕಾರದಿಂದ ತಂದಿದ್ದರೆ, ಈ ಬಾರಿ ೫೦ ಲಕ್ಷ ಹೆಚ್ಚುವರಿ ಹಣ ಒದಗಿಸಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಶಾಸಕರು ಒದಗಿಸಿದರು. ಕಳೆದ ವರ್ಷ ವಿಜಯಪ್ರಕಾಶ್ ಅವರ ಗಾಯನ ಕಾರ್ಯಕ್ರಮ ಆಯೋಜಿಸಿದ್ದು, ಈ ಬಾರಿ ಪುಟ್ಟ ೭ ವರ್ಷದ ಬಾಲಕ ಆವಿರ್ಭವ್ ಹಾಗೂ ಅರ್ಜುನ್ ಜನ್ಯ - ರಾಜೇಶ್ ಕೃಷ್ಣನ್ - ಶಮಿತಾ ಮಲ್ನಾಡ್ - ಸಾಧು ಕೋಕಿಲ ಇವರುಗಳ ಗಾನಸುಧೆಯನ್ನು ಕಲಾಭಿಮಾನಿಗಳಿಗೆ ಉಣಬಡಿಸಿದರು. ದಸರಾ ವಿಶೇಷ ಸಂದರ್ಭದಲ್ಲಿ ೫ ನೂತನ ಬಸ್‌ಗಳ ಪ್ರವೇಶ, ದೇವಾಲಯಗಳಿಗೆ ವೈಯಕ್ತಿಕ ಅನುದಾನ ನೀಡಿಕೆ, ವಿಜಯದಶಮಿ ರಾತ್ರಿ ಬೈಕ್‌ನಲ್ಲೇ ನಗರ ಸಂಚರಿಸಿ ೧೦ ಮಂಟಪಗಳ ವೀಕ್ಷಣೆಯೊಂದಿಗೆ ಅಲ್ಲಿನ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದುದು, ತಡರಾತ್ರಿವರೆಗೂ ಕುಟುಂಬ ಸಹಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಗಾಯನ ಕಾರ್ಯಕ್ರಮಗಳಲ್ಲಿ ಹಾಡುಗಳಿಗೆ ಶಾಸಕರು ಹಾಕಿದ ಹೆಜ್ಜೆ ಗಮನ ಸೆಳೆಯಿತು.

ಐತಿಹಾಸಿಕ ನಾಡಹಬ್ಬಕ್ಕೆ ಹೊಸತನದ ಸ್ಪರ್ಶ ನೀಡಬೇಕು ದಸರಾದಲ್ಲಿ ಪಾಲ್ಗೊಳ್ಳುವ ಜನರಿಗೆ ಉತ್ತಮ ಮನರಂಜನೆ ನೀಡಬೇಕು, ಎಂಬುದು ತನ್ನ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿಯೇ ಕಳೆದ ಬಾರಿ ಗಾಯಕ ವಿಜಯಪ್ರಕಾಶ್, ಈ ಬಾರಿ ಗಾಯಕರಾದ ಆವಿರ್ಭವ್, ರಾಜೇಶ್ ಕೃಷ್ಣನ್, ಅರ್ಜುನ್‌ಜನ್ಯಾರಂತಹ ಕಲಾವಿದರನ್ನು ದಸರಾಕ್ಕೆ ಕರೆಸಲಾಯಿತು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.

‘ಶಕ್ತಿ’ಯೊಂದಿಗೆ ಮಾತನಾಡಿದ ಅವರು, ಈ ಬಾರಿ ಒಂದೂವರೆ ಕೋಟಿಯಷ್ಟು ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿರುವ ನಿಟ್ಟಿನಲ್ಲಿ ಶಾಸಕನಾಗಿ ತಾನು ತನ್ನ ಕರ್ತವ್ಯವನ್ನು ಮಾಡಿದ್ದೇನೆ ಅಷ್ಟೆ. ಮಡಿಕೇರಿ ದಸರಾದ ಹಿನ್ನೆಲೆ, ಮಹತ್ವ ಸರ್ಕಾರಕ್ಕೂ ಮನದಟ್ಟಾಗಬೇಕು ಎಂಬ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಯುಧ ಪೂಜೆಯಂದು ಮಡಿಕೇರಿಗೆ ಕರೆಸಲಾಯಿತು ಎಂದು ಅವರು ತಿಳಿಸಿದರು.

ನವರಾತ್ರಿ ಕಾರ್ಯಕ್ರಮದಲ್ಲಿ ಹಲವಾರು ದಿನಗಳ ಕಾಲ ತಾನು ತನ್ನ ಕುಟುಂಬದೊAದಿಗೆ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿದ್ದೇನೆ. ಅದಕ್ಕೆ ಕಾರಣ ತನ್ನಂತೆ ನಾಡಿನ ಜನರು ಕೂಡ ದಸರಾ ಕಾರ್ಯಕ್ರಮಗಳಲ್ಲಿ ಕುಟುಂಬ ಸಹಿತ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸುವಂತಾಗಬೇಕು ಎಂಬುದಾಗಿತ್ತು. ದಶಮಂಟಪಗಳಿಗೆ ವೈಯಕ್ತಿಕವಾಗಿ ತಾನು ಆರ್ಥಿಕ ನೆರವು ನೀಡಿದ್ದೇನೆ; ಇದು ದೇವರ ಮೇಲಿನ ಭಕ್ತಿಗಾಗಿಯೇ ಹೊರತು ಪ್ರಚಾರಕ್ಕಾಗಿ ಅಲ್ಲ ಎಂದು ನುಡಿದ ಮಂತರ್‌ಗೌಡ, ಕೊಡಗು ನೋಂದಣಿಯ ೫ ಸರ್ಕಾರಿ ಬಸ್‌ಗಳಿಗೆ ಜಿಲ್ಲೆಯಲ್ಲಿ ಚಾಲನೆ ನೀಡುವ ಮೂಲಕ ಕೊಡಗಿನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುವುದು ತನ್ನ ಬಯಕೆಯಾಗಿತ್ತು ಎಂದು ಮಾಹಿತಿ ನೀಡಿದರು.