ಸೋಮವಾರಪೇಟೆ, ಅ. ೧೩: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪಟ್ಟಣದ ಜೇಸೀ ವೇದಿಕೆ ಮುಂಭಾಗವಿರುವ ಅಟಲ್‌ಜೀ ಕನ್ನಡ ಭವನದಲ್ಲಿ ಆಯೋಜಿಸಿರುವ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಇಂದು ತೆರೆ ಬೀಳಲಿದೆ.

ನವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ‘ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ’ ಕಾರ್ಯಕ್ರಮವನ್ನು ಕಳೆದ ತಾ.೭ರಿಂದ ಆಯೋಜಿಸಿದ್ದು, ತಾ. ೧೪ರಂದು (ಇಂದು) ತೆರೆ ಬೀಳಲಿದೆ. ಪ್ರತಿದಿನ ನೂರಾರು ಮಂದಿ ಆಸ್ತಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದು, ಆಧ್ಯಾತ್ಮಿಕ ಜ್ಞಾನ ಪಡೆಯುತ್ತಿದ್ದಾರೆ.

ಇತಿಹಾಸ ಪ್ರಸಿದ್ಧ ೧೨ ದೇವಾಲಯಗಳ ಗರ್ಭಗುಡಿಯಲ್ಲಿರುವ ಶಿವಲಿಂಗದ ಮಾದರಿಯನ್ನು, ಗರ್ಭಗುಡಿಯ ರೂಪದಲ್ಲಿಯೇ ವಿನ್ಯಾಸಗೊಳಿಸಲಾಗಿದೆ.

ಗುಜರಾತ್‌ನಲ್ಲಿರುವ ಸೋಮನಾಥ, ಆಂದ್ರಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ, ಮಧ್ಯಪ್ರದೇಶ ಉಜ್ಜೆöÊನಿಯಲ್ಲಿರುವ ಮಹಾಕಾಳೇಶ್ವರ, ನರ್ಮದಾ ನದಿ ತೀರದಲ್ಲಿರುವ ಓಂಕಾರೇಶ್ವರ, ಬಿಹಾರದಲ್ಲಿರುವ ವೈದ್ಯನಾಥೇಶ್ವರ, ಮಹಾರಾಷ್ಟç ಭೀಮಾ ನದಿ ತೀರದ ಭೀಮಾಶಂಕರ, ತಮಿಳುನಾಡಿನ ರಾಮೇಶ್ವರ, ಸೌರಾಷ್ಟç ಕಡಲ ತೀರದ ದ್ವಾರಕೆಯಲ್ಲಿರುವ ನಾಗೇಶ್ವರ, ವಾರಣಾಸಿಯಲ್ಲಿನ ವಿಶ್ವನಾಥ, ನಾಸಿಕ್‌ನಲ್ಲಿರುವ ತ್ರಯಂಬಕೇಶ್ವರ, ಉತ್ತರಾಖಂಡದ ಕೇದಾರನಾಥ, ಔರಂಗಾಬಾದ್‌ನಲ್ಲಿರುವ ಗ್ರೀಶನೇಶ್ವರ ಶಿವಲಿಂಗಗಳ ಮಾದರಿಯನ್ನು ನಿರ್ಮಿಸಿದ್ದು, ಆಸ್ತಿಕರನ್ನು ಸೆಳೆಯುತ್ತಿವೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆದು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆ ಗಳ ಮಾಹಿತಿ ಪಡೆದಿದ್ದಾರೆ.

ಈ ಸಂದರ್ಭ ಮಾತನಾಡಿದ ಅವರು, ಸಮಾಜದಲ್ಲಿ ನಕಾರಾತ್ಮಕ ಭಾವನೆಗಳು ಮಿತಿಮೀರಿ ಬೆಳೆಯುತ್ತಿದ್ದು, ಅನಾರೋಗ್ಯ, ಮೂಢನಂಬಿಕೆಗಳು, ಅಜ್ಞಾನವು ಹೆಚ್ಚುತ್ತಿದೆ. ಯುವ ಜನಾಂಗವು ಹಾದಿ ತಪ್ಪುತ್ತಿದೆ. ದಿನದ ಒಂದು ಗಂಟೆಯಾದರೂ ಪ್ರವಚನ ಕೇಳುವುದು ಮತ್ತು ರಾಜಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು. ಇಂತಹ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದ ಜೊತೆಗೆ ವ್ಯಸನಮುಕ್ತ ಆಂದೋಲನ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾ. ೧೪ರಂದು ದ್ವಾದಶ ಜ್ಯೋತಿರ್ಲಿಂಗಗಳ ದರ್ಶನಕ್ಕೆ ತೆರೆ ಬೀಳಲಿದೆ ಎಂದು ಸಂಯೋಜಕರಾದ ಬಿ.ಕೆ. ಕೋಮಲ ತಿಳಿಸಿದ್ದಾರೆ.