x

ಮಡಿಕೇರಿ, ಅ. ೧೩: ಸಮಾಜದ ಸ್ವಾಸ್ಥö್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಧರ್ಮದವರು ಪರಸ್ಪರ ಸ್ನೇಹ ಹಾಗೂ ಸಾಮರಸ್ಯದಿಂದ ಬದುಕಬೇಕೆಂದು ಧರ್ಮಗುರುಗಳಾದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಅಬ್ದುಲ್ ಹಮೀದ್ ಮೌಲ್ವಿ ಮಡಿಕೇರಿ ದಸರಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆದ ಆಯುಧಪೂಜೆ ಕಾರ್ಯಕ್ರಮದಲ್ಲಿ ಕರೆ ನೀಡಿದರು.

ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ ಸಾಹಿತ್ಯ, ಸಂಸ್ಕೃತಿ, ನಾಡಿನ ನಡೆ ನುಡಿ, ಗ್ರಾಮೀಣ ಸೊಗಡು ಪರಿಚಯಿಸುವ ಕೆಲಸ ದಸರಾ ಆಚರಣೆಯಿಂದ ನಡೆದಿದೆ. ೯ ದಿನಗಳ ನಿರಂತರ ಕಾರ್ಯಕ್ರಮ ಜನರಿಗೆ ಮುದ ನೀಡಿದೆ ಎಂದ ಅವರು, ಆಂತರಿಕವಾಗಿ ಬದಲಾವಣೆ ತರಲು ದಸರಾ ಪೂರಕವಾಗಿದೆ. ಕೊಡಗು ಸಂಸ್ಕಾರ, ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಧರ್ಮದ ಆಂತರಿಕ ತಿರುಳು ಅರಿತುಕೊಂಡು ಶಾಂತಿ, ಸಾಮರಸ್ಯದಿಂದ ಬದುಕಬೇಕು. ಪರಸ್ಪರ ಸ್ನೇಹ, ಪ್ರೀತಿ ವಿಶ್ವಾಸದಿಂದ ಬದುಕಿದರೆ ಸಮಾಜ ಸದೃಢ ವಾಗಿರುತ್ತದೆ. ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗುವುದಿಲ್ಲ. ಬದಲಾವಣೆಗಳು ಅಂತರAಗದಲ್ಲಾಗಬೇಕು. ಮನಸ್ಸು ಗಳನ್ನು ಕಟ್ಟುವಂತಾಗಬೇಕು. ಜಾತಿ ಭಾವನೆ ಹೋಗಿ, ಪ್ರೀತಿ ಭಾವನೆ ಅರಳಬೇಕೆಂದು ಆಶಿಸಿದರು.

ಮುಸ್ಲಿಂ ಧರ್ಮಗುರು ಅಬ್ದುಲ್ ಹಮೀದ್ ಮೌಲ್ವಿ ಮಾತನಾಡಿ, ಭಾರತೀಯ ಸಂಸ್ಕೃತಿ ಸಮಾನತೆ ಸಾರುತ್ತದೆ. ಹಾಗಾಗಿ ಮನುಕುಲವನ್ನು ಗೌರವಿಸಬೇಕು. ಎಲ್ಲಾ ಧರ್ಮಗಳು ಒಗ್ಗಟ್ಟಿನ ಮಂತ್ರ ಪಠಿಸುತ್ತವೆ. ಇದನ್ನು ನಾವುಗಳು ಪಾಲಿಸಿ ಧರ್ಮದ ಪಾವಿತ್ರ‍್ಯತೆ ಉಳಿಸಬೇಕು. ಈ ದೇಶದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.