ಸೋಮವಾರಪೇಟೆ, ಅ. ೧೫: ೨೦೨೩-೨೪ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಪಿ.ಎಂ. ಜನ್‌ಮನ್ ಯೋಜನೆಯಡಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಗೆ ೩ ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, ಇವುಗಳಲ್ಲಿ ೨ ಅಂಗನವಾಡಿ ಕೇಂದ್ರಗಳಿಗೆ ಸ್ಥಳ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರುಗಳು ಸ್ಥಳ ಪರಿಶೀಲನೆ ನಡೆಸಿದರು. ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಚಿನ್ನೇನಹಳ್ಳಿ ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ನಿವೇಶನ ಲಭ್ಯವಿದ್ದು, ಕೂಡಿಗೆ ಪಂಚಾಯಿತಿಯ ಗಂಧದಹಾಡಿ ಹಾಗೂ ಕೂಡುಮಂಗಳೂರು ಪಂಚಾಯಿತಿಯ ಬೆಂಡೆಬೆಟ್ಟ ಹಾಡಿಯಲ್ಲಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಒದಗಿಸುವ ಸಂಬAಧ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು.

ಎರಡೂ ಹಾಡಿಯಲ್ಲಿ ಅಂಗನವಾಡಿಗಳು ಅವಶ್ಯಕವಾಗಿದ್ದು, ಈಗಾಗಲೇ ಅನೇಕ ಕುಟುಂಬಗಳು ಇಲ್ಲಿ ವಾಸವಾಗಿವೆ. ಸರ್ಕಾರದಿಂದ ಇವರಿಗೆ ಹಕ್ಕು ಪತ್ರವನ್ನೂ ನೀಡಲಾಗಿದೆ. ಈ ಎರಡು ಹಾಡಿಗಳು ಅರಣ್ಯಕ್ಕೆ ಒತ್ತಿಕೊಂಡಿದ್ದು, ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಗುರುತಿಸಿರುವ ಜಾಗವೂ ಅರಣ್ಯ ಪ್ರದೇಶದಲ್ಲಿದೆ. ಇಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ಇಲಾಖೆಯ ಸೇವೆ ಒದಗಿಸುವ ಹಿತದೃಷ್ಟಿಯಿಂದ ತಲಾ ೧೦ ಸೆಂಟ್ ಜಾಗವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಸರಿಗೆ ವರ್ಗಾಯಿಸುವ ಸಂಬAಧ ಕ್ರಮ ಕೈಗೊಳ್ಳುವಂತೆ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರಿಗೆ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಸೂಚಿಸಿದರು.

ಈ ಸಂದರ್ಭ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು, ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ, ತಾಲೂಕು ಪಂಚಾಯಿತಿ ನರೇಗಾ ತಾಂತ್ರಿಕ ಸಂಯೋಜಕ ರಂಜಿತ್, ತಾ.ಪಂ. ಟಿಐಇಸಿ ಸಂಯೋಜಕ ಅರುಣ್‌ಕುಮಾರ್ ಅವರುಗಳು ಉಪಸ್ಥಿತರಿದ್ದರು.