ನಾಪೋಕ್ಲು, ಅ. ೧೫: ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನಾ ಘಟಕದ ವತಿಯಿಂದ ಕಾಕೋಟುಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೩ ರಿಂದ ೯ ರವರೆಗೆ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ನಾಪೋಕ್ಲು ಕೊಡವ ಸಮಾಜದ ಕ್ರೀಡಾ ಸಂಸ್ಕೃತಿ ಮತ್ತು ಮನೋರಂಜನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರು ಸಮಾರೋಪ ಭಾಷಣಕಾರರಾಗಿ ಆಗಮಿಸಿ ಮಾತನಾಡಿ, ಶಿಬಿರಾರ್ಥಿಗಳು ಎನ್.ಎಸ್.ಎಸ್. ಶಿಬಿರಗಳಲ್ಲಿ ಭಾಗವಹಿಸಿ ಸಾಮಾಜಿಕ ಸಾಮರಸ್ಯ ನಾಯಕತ್ವ ಗುಣ ಜವಾಬ್ದಾರಿಗಳನ್ನು ನಿಭಾಯಿಸುವ ಧೈರ್ಯ ಮತ್ತು ವಿದ್ಯಾರ್ಥಿಗಳು ನಾಗರಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಂಡು ಬದುಕನ್ನು ಹೊಸ ದಿಕ್ಕಿನತ್ತ ಬದಲಾಯಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕಿದೆ. ದೇಶದ ಅಭಿವೃದ್ಧಿಗೆ ಯುವಜನತೆ ಶಕ್ತಿಯಾಗಿ ನಿಲ್ಲಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ನಾಡು ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಪೆಮ್ಮಡಿಯಂಡ ವೇಣು ಅಪ್ಪಣ್ಣ ವಹಿಸಿದ್ದು ಎನ್.ಎಸ್.ಎಸ್. ಶಿಬಿರದ ಪ್ರಾಮುಖ್ಯತೆಯ ಕುರಿತು ವಿವರಿಸಿದರು.

ಅತಿಥಿಗಳಾಗಿ ಮೈತಾಡಿಯ ಬೊಳ್ಳಿಬಿಲ್ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಮುಂಡಾಚಾಡಿರ ನಂದ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ದಮಯಂತಿ ೭ ದಿನದ ವಾರ್ಷಿಕ ವಿಶೇಷ ಶಿಬಿರದ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಶಿಬಿರಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.

ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ ಸ್ವಾಗತಿಸಿದರು. ಕಾಕೋಟುಪರಂಬು ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಮೂರ್ನಾಡು ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.