ಕಣಿವೆ, ಅ. ೧೫ : ಕುಶಾಲನಗರ ತಾಲೂಕಿನ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಿಂದ ಗೋಮಾಂಸಕ್ಕಾಗಿ ನಿರಂತರವಾಗಿ ಗೋವುಗಳ ಕಳ್ಳ ಸಾಗಣೆ ನಡೆಯುತ್ತಿದ್ದರೂ ಕೂಡ ಸಂಬAಧಿಸಿದ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳನ್ನು ಕೊಪ್ಪ ಅರಣ್ಯ ಚೆಕ್‌ಪೋಸ್ಟ್ನಲ್ಲಿ ತಪಾಸಣೆ ಮಾಡದೆಯೇ ಹಾಗೆಯೇ ಬಿಟ್ಟು ಕಳುಹಿಸಲಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ರಾತ್ರಿ ಹಗಲೆನ್ನದೇ ನಿರಂತರವಾಗಿ ರಾಜಾ ರೋಷವಾಗಿಯೇ ಗೋವುಗಳನ್ನು ವಾಹನಗಳಲ್ಲಿ ತುಂಬಿಸಿ ತಂದು ಬೈಲುಕೊಪ್ಪದ ಟಿಬೇಟನ್ ಶಿಬಿರದ ಕಡೆಗೆ ಸಾಗಿಸಲಾಗುತ್ತಿದೆ.

ಬೈಲುಕೊಪ್ಪ ಟಿಬೇಟನ್ ಶಿಬಿರಗಳ ಹಲವು ಹೊಟೇಲ್‌ಗಳಲ್ಲಿ ಗೋಮಾಂಸ ಎಗ್ಗಿಲ್ಲದೇ ನಡೆಯುತ್ತಿರುವುದರಿಂದ ಅಲ್ಲಿಗೆ ಇಲ್ಲಿಂದ ಗೋವುಗಳು ರವಾನೆಯಾಗುತ್ತಿವೆ ಎನ್ನಲಾಗಿದೆ.

ಈ ಹಿಂದೆ ಬೈಲುಕೊಪ್ಪದ ಟಿಬೇಟನ್ ಕಿಚನ್ ಎಂಬ ಹೊಟೇಲ್‌ನಲ್ಲಿ ಗೋಮಾಂಸದ ಮೆನು ಕೂಡ ಇದ್ದು, ಸಾರ್ವಜನಿಕರಿಗೆ ಉಣ ಬಡಿಸುತ್ತಿದ್ದುದನ್ನು ಪ್ರತ್ಯಕ್ಷವಾಗಿ ಕಂಡ ‘ಶಕ್ತಿ’ ಸವಿವರವಾದ ವರದಿ ಪ್ರಕಟಿಸಿದ್ದನ್ನು ಮನಗಂಡ ಮೈಸೂರು ಜಿಲ್ಲಾಡಳಿತ ಹೊಟೇಲ್ ಮೇಲೆ ದಾಳಿ ನಡೆಸಿ ಕೆಲ ದಿನಗಳ ಕಾಲ ಹೊಟೇಲ್ ಬಂದ್ ಮಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅರಣ್ಯ ಚೆಕ್‌ಪೋಸ್ಟ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ವಾಹನಗಳಲ್ಲಿ ಸಾಗಿಸುವ ಗೋವುಗಳ ಬಗ್ಗೆ ಪಶುವೈದ್ಯರು ನೀಡುವ ದೃಢೀಕರಣ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಗಳು ನೀಡುವ ದೃಢೀಕರಣಗಳನ್ನು ತಪಾಸಣೆ ಮಾಡಿ ಬಿಡಬೇಕಿದ್ದರೂ ಅರಣ್ಯ ಸಿಬ್ಬಂದಿಗಳು ನಿರ್ಲಕ್ಷö್ಯ ತೋರುತ್ತಿದ್ದಾರೆ.

ಇನ್ನು ಪೊಲೀಸರಿಗೆ ಅಕ್ರಮ ಸಾಗಾಟದ ಗೋವುಗಳನ್ನು ಹಿಡಿದು ಕೊಟ್ಟರೆ ಇಲಾಖೆಯಲ್ಲಿನ ವಿಪರೀತದ ಕಾನೂನು ಕಟ್ಟುಪಾಡುಗಳ ಪಾಲನೆಯ ತಲೆ ನೋವಿನಿಂದಾಗಿ ಪೊಲೀಸ್ ಸಿಬ್ಬಂದಿಗಳಿಗೂ ಕೂಡ ಇದು ತಲೆನೋವಾಗಿ ಪರಿಣಮಿಸುತ್ತಿರುವ ಬಗ್ಗೆ ಹೆಸರು ಹೇಳಲಿಚ್ಛಿಸದ ಅಧಿಕಾರಿ ಹಾಗೂ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ಅಕ್ರಮವಾಗಿ ಕಸಾಯಿ ಖಾನೆಗೆ ಹಸುವನ್ನು ಸಾಗಿಸುತ್ತಿರುವುದು ದೃಢವಾದರೆ ಅಂತಹ ವಾಹನವನ್ನು ಮುಟ್ಟುಗೋಲು ಹಾಕಿ ಚಾಲಕನ ಮೇಲೆ ದೂರು ದಾಖಲಿಸುವ ಪ್ರಕ್ರಿಯೆ ಒಂದೆಡೆಯಾದರೆ, ರಕ್ಷಿಸಿದ ಹಸುವನ್ನು ವಾಹನದಿಂದ ಇಳಿಸಿ ಅದನ್ನು ಸುರಕ್ಷಿತವಾದ ಸ್ಥಳದಲ್ಲಿ ಕಟ್ಟಿ ಅದಕ್ಕೆ ಹುಲ್ಲು ನೀರು ನೀಡುವುದು ಹಾಗೂ ಕಾನೂನು ಪ್ರಕ್ರಿಯೆಗಳ ಬಳಿಕ ಆ ಹಸುವನ್ನು ೧೦೦ ಕಿಮೀ ದೂರದ ಮೈಸೂರಿನ ಪಿಂಜರ್ ಪೋಲ್‌ಗೆ ಬಿಡುವ ವಾಹನದ ಬಾಡಿಗೆಯನ್ನು ಪೊಲೀಸರೇ ಭರಿಸಬೇಕೆಂಬ ತಲೆ ನೋವಿಗೆ ಇಂತಹ ಕಟುಕರು ಸಾಗಿಸುವ ಅಕ್ರಮ ಸಾಗಾಟದ ವಾಹನಗಳನ್ನು ಕಂಡೂ ಕಾಣದಂತೆ ಮೌನವಹಿಸುತ್ತಿರುವುದರಿಂದಲೇ ಕುಶಾಲನಗರದಲ್ಲಿ ಇತ್ತೀಚೆಗೆ ಗೋವುಗಳ ಸಾಗಾಟ ಮಿತಿ ಮೀರಿದೆ ಎನ್ನಲಾಗುತ್ತಿದೆ.

ನೈಜ ಹೈನುಗಾರರು ಹಾಲು ಹಿಂಡುವ ಸದುದ್ದೇಶಕ್ಕೆ ಹಾಲು ಕೊಡುವ ಹಸುವನ್ನು ಸಾಗಿಸಿದರೆ ನೋಡುಗರಿಗೆ ಸಾಮಾನ್ಯವಾಗಿ ಅರಿವಾಗುತ್ತದೆ. ಆದರೆ, ಬಡಕಲು ಹಸುಗಳನ್ನು ಸಾಗಿಸುವುದು ಗೋಚರಿಸಿದರೆ ಮೇಲ್ನೋಟಕ್ಕೆ ಅದು ಕಟುಕರ ಪಾಲಿಗೆಯೇ ಎಂಬ ವಾಸ್ತವ ಅರಿವಾಗುತ್ತದೆ. ಏಕೆಂದರೆ ಇತ್ತೀಚಿನ ದಶಕಗಳಲ್ಲಿ ಯಾವೊಬ್ಬ ರೈತರೂ ಕೂಡ ಭೂಮಿಯನ್ನು ಉಳುಮೆ ಮಾಡಲು ಹಸುಗಳನ್ನು ಸಾಗಿಸುವುದಿಲ್ಲ. ಇಲ್ಲವೇ ಜೋಡಿ ಮಾಡಿ ಎತ್ತುಗಳ ಜಾತ್ರೆಗೆ ಒಯ್ಯಲೂ ಆ ಪರಂಪರೆಯೂ ನಶಿಸಿ ಹೋಗಿದೆ. ಹಾಗಾಗಿ ಹಸುಗಳನ್ನು ಸಾಗಿಸುವ ಬಹುತೇಕ ವಾಹನಗಳು ಕಸಾಯಿ ಖಾನೆಗೆ ತೆರಳುವುದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ಗೋ ಮಾತೆಯನ್ನು ರಕ್ಷಿಸಿ ಅದಕ್ಕೆ ಮುಕ್ತಿಯನ್ನು ನೀಡುವ ಕೆಲಸ ಪ್ರಾಮಾಣಿಕವಾಗಿ ಆಗಬೇಕಿದೆ.

-ವರದಿ : ಕೆ.ಎಸ್.ಮೂರ್ತಿ