ಕಣಿವೆ, ಅ. ೧೫: ವಿಶ್ವವಿಖ್ಯಾತ ಮೈಸೂರು ದಸರಾ ಮಹಾ ಉತ್ಸವಕ್ಕೂ ಕೊಡಗಿನ ದುಬಾರೆ ಸಾಕಾನೆಗಳಿಗೂ ಒಂಥರ ಅವಿನಾಭಾವ ಸಂಬAಧ.

೭೫೦ ಕೆಜಿ ತೂಕದ ಅಂಬಾರಿ ಹೊರುವ ಮತ್ತಿಗೋಡು ಶಿಬಿರದ ಸಾಕಾನೆ ಅಭಿಮನ್ಯುವಿಗೆ ದಸರಾ ಜನೋತ್ಸವದಲ್ಲಿ ಸಾಥ್ ನೀಡಲು ದೂರದ ದುಬಾರೆಯಿಂದ ಸಾಕಾನೆಗಳು ಪ್ರತಿ ವರ್ಷ ತೆರಳಿ ಮರಳುವುದು ವಾಡಿಕೆಯಾಗಿ ನಡೆದುಬಂದಿರುವ ಪ್ರತೀತಿ.

ಈ ವರ್ಷವೂ ಮೈಸೂರು ದಸರಾ ಉತ್ಸವಕ್ಕೆ ದುಬಾರೆಯಿಂದ ಕಳೆದ ಒಂದು ತಿಂಗಳ ಹಿಂದೆ ತೆರಳಿದ್ದ ಐದು ಸಾಕಾನೆಗಳು ಸೋಮವಾರ ತಡರಾತ್ರಿ ಶಿಬಿರಕ್ಕೆ ಮರಳಿವೆ. ಸಾಕಾನೆಗಳೊಂದಿಗೆ ತೆರಳಿದ್ದ ಆನೆಗಳ ಚಾಲಕರು ಹಾಗೂ ಮಾವುತರು ಮತ್ತು ಕಾವಾಡಿಗಳು ಕೂಡ ಕುಟುಂಬ ಸಹಿತ ಅತ್ಯಂತ ಸಂತಸದಿAದ ಸ್ವಸ್ಥಾನಕ್ಕೆ ಮರಳಿದ್ದಾರೆ.

ದಸರಾದಿಂದ ಬಂದಿಳಿದ ಸಾಕಾನೆಗಳು :

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಕಳೆಗಟ್ಟುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ದುಬಾರೆ ಸಾಕಾನೆ ಶಿಬಿರದಿಂದ ಸತತವಾಗಿ ೧೩ನೇ ಬಾರಿಗೆ ಶಿಬಿರದ ಹಿರಿಯಣ್ಣ ಪ್ರಶಾಂತ್, ೩ನೇ ಬಾರಿಗೆ ಸುಗ್ರೀವ, ೫ನೇ ಬಾರಿ ಧನಂಜಯ, ೨ನೇ ಬಾರಿ ಕಂಜನ್ ಹಾಗೂ ೯ ನೇ ಬಾರಿಗೆ ಪ್ರಶಾಂತ್ ಹೀಗೆ ಸಾಕಾನೆಗಳು ಹೋಗಿ ಬಂದಿವೆ.

ಹೆಚ್ಚಿಸಿಕೊಂಡ ತೂಕ ಎಷ್ಟು..?

ದಸರಾ ಉತ್ಸವಕ್ಕೂ ಒಂದು ತಿಂಗಳ ಕಾಲ ಮುಂಚೆಯೇ ಶಿಬಿರದಿಂದ ಮೈಸೂರು ಅರಮನೆ ಆವರಣಕ್ಕೆ ತೆರಳುವಾಗ ೪೯೭೦ ಕೆಜಿ ತೂಕ ಇದ್ದ ಪ್ರಶಾಂತ್ ಸಾಕಾನೆ ಮರಳುವಾಗ ೫೨೪೦ ಕೆಜಿ ತೂಕ ಹೆಚ್ಚಳ ಮಾಡಿಕೊಂಡು ಮರಳಿದ್ದಾನೆ. ಹಾಗೆಯೇ ೫೧೫೦ ಕೆಜಿ ತೂಗುತ್ತಿದ್ದ ಗೋಪಿ ಇದೀಗ ೫೨೮೦ ಕೆಜಿ, ೫೧೯೦ ಕೆಜಿ ತೂಕವಿದ್ದ ಸುಗ್ರೀವ ಇದೀಗ ೫೫೪೫ ಕೆಜಿ, ೫೧೪೦ ಕೆಜಿ ತೂಕವಿದ್ದ ಧನಂಜಯ ಇದೀಗ ೫೨೪೫ ಕೆಜಿ ತೂಕ ಹೆಚ್ಚಳ ಮಾಡಿಕೊಂಡು ಮರಳಿದ್ದಾರೆ.

ಅಂದರೆ ದುಬಾರೆ ಶಿಬಿರದಲ್ಲಿ ನೀಡುತ್ತಿದ್ದ ಕೃತಕ ಆಹಾರ ಹಾಗೂ ದುಬಾರೆ ಅರಣ್ಯದಲ್ಲಿ ದೊರಕುತ್ತಿದ್ದ ಸ್ವಾಭಾವಿಕ ಹುಲ್ಲು ಸೊಪ್ಪಿನ ಆಹಾರ ಸವಿದು ತಮ್ಮ ತೂಕವನ್ನು ಸಮಾನಂತರವಾಗಿ ನಿರ್ವಹಿಸಿದ್ದ ಸಾಕಾನೆಗಳು ಇದೀಗ ಅರಮನೆ ಆವರಣದಲ್ಲಿ ಮೈಸೂರು ಜಿಲ್ಲಾಡಳಿತ ನೀಡಿದ ರಾಜ್ಯ ಸರ್ಕಾರದ ಔತಣವನ್ನು ಸವಿದು ದಷ್ಟ ಪುಷ್ಟಗೊಂಡು ಒಂದಷ್ಟು ತೂಕ ಹೆಚ್ಚಳದೊಂದಿಗೆ ಸಂತಸದಿAದ ತವರಿಗೆ ಮರಳಿವೆ.

ಮಾವುತ ಕಾವಾಡಿಗಳಿಗೂ ರಾಜಾತಿಥ್ಯ

ಸಾಕಾನೆಗಳೊಂದಿಗೆ ಮೈಸೂರಿಗೆ ತೆರಳಿದ್ದ ಆನೆಗಳ ಮಾವುತರು ಹಾಗೂ ಕಾವಾಡಿಗಳ ಕುಟುಂಬ ಸದಸ್ಯರನ್ನು ಜಿಲ್ಲಾಡಳಿತ ಹಾಗೂ ಅರಮನೆಯ ರಾಜ ದಂಪತಿಗಳು ಅತ್ಯಂತ ಪ್ರೀತಿ, ಗೌರವದ ಕಾಳಜಿಯೊಂದಿಗೆ ಸಂತಸದಿAದ ನೋಡಿಕೊಂಡ ಬಗ್ಗೆ ಸಾಕಾನೆ ಸುಗ್ರೀವನ ಮಾವುತ ಶಂಕರ ಹಾಗೂ ಪ್ರಶಾಂತನ ಮಾವುತ ಚಿಣ್ಣಪ್ಪ ‘ಶಕ್ತಿ’ ಯೊಂದಿಗೆ ಬಿಗುಮಾನ ಬಿಟ್ಟು ಅಭಿಮಾನದಿಂದ ಹೇಳಿಕೊಂಡರು.

ವಾರಕ್ಕೆ ಎರಡರಿಂದ ಮೂರು ಬಾರಿ ಸ್ವತಃ ಮಹಾರಾಜ ಯದುವೀರರೇ ನಮ್ಮಲ್ಲಿಗೆ ಬಂದು ಕಾಳಜಿ ತೋರಿಸುತ್ತಿದ್ದರು. ನಮ್ಮ ಅಗತ್ಯಗಳನ್ನು ನೆರವೇರಿಸುತ್ತಿದ್ದರು. ಇನ್ನೂ ಮಹಾರಾಣಿ ಅಮ್ಮನವರೂ ಕೂಡ ನಮ್ಮ ಹೆಂಗಸರು ಹಾಗೂ ಮಕ್ಕಳನ್ನು ಅಕ್ಕರೆಯಿಂದ ಕಂಡು ಮಾತನಾಡಿಸುತ್ತಿದ್ದರು ಎಂದು ಕಾವಾಡಿಗಳಾದ ರಾಜಣ್ಣ, ಶಿವು, ಚಂದ್ರ ಹೇಳಿಕೊಂಡರು.ಕಾವಾಡಿ - ಮಾವುತರು

ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವಕ್ಕೆ ಒಂದು ತಿಂಗಳು ಮುನ್ನಾ ಸಾಕಾನೆಗಳೊಂದಿಗೆ ಕುಟುಂಬ ಸಮೇತ ಕಾವಾಡಿಗಳು ಹಾಗೂ ಮಾವುತರು ತೆರಳಿದ್ದರು. ಈ ಪೈಕಿ ಪ್ರಶಾಂತ ಆನೆಯ ಮಾವುತ ಚಿಣ್ಣಪ್ಪ, ಕಾವಾಡಿ ಚಂದ್ರ, ಗೋಪಿ ಆನೆಯ ಮಾವುತ ನವೀನ್, ಕಾವಾಡಿ ಶಿವು, ಕಂಜನ್ ಆನೆಯ ಮಾವುತ ವಿಜಯ, ಕಾವಾಡಿ ಕಿರಣ, ಧನಂಜಯ ಆನೆಯ ಮಾವುತ ಭಾಸ್ಕರ, ಕಾವಾಡಿ ರಾಜಣ್ಣ, ಸುಗ್ರೀವ ಆನೆಯ ಮಾವುತ ಶಂಕರ, ಕಾವಾಡಿ ಅನಿಲ್.

ಪೊಲೀಸರ ಕಿರಿ ಕಿರಿ

ಸಾಕಾನೆಗಳೊಂದಿಗೆ ತೆರಳಿದ್ದ ಮಾವುತರು ಹಾಗೂ ಕಾವಾಡಿಗಳಾದ ನಾವು ಅರಮನೆ ಆವರಣದಿಂದ ಅಲ್ಲೇ ಅರಮನೆ ಪ್ರಾಂಗಣದ ಹೊರಭಾಗದ ಅಂಗಡಿ ಮುಂಗಟ್ಟುಗಳಿಗೆ ಸಾಮಗ್ರಿ ಸರಂಜಾಮು ಖರೀದಿಸಲು ಹೊರ ತೆರಳಿ ಒಳ ಬರುವಾಗ ಅನಗತ್ಯವಾಗಿ ಪೊಲೀಸರು ನಮಗೆ ತೊಂದರೆ ಕೊಡುತ್ತಿದ್ದರು.

ಸುಮ್ಮನೆ ಗದರುತ್ತಿದ್ದರು.

ನಾವು ಸಾಕಾನೆಗಳ ಕುಟುಂಬ ವರ್ಗ ಎಂದು ಎಷ್ಟು ವಿನಂತಿಸಿದರೂ ಒಳ ಬಿಡುತ್ತಿರಲಿಲ್ಲ. ಇವರ ತೊಂದರೆ ಮಾತ್ರ ನಮಗೆ ಒಂದಷ್ಟು ಬೇಸರ ತರಿಸಿದ್ದು ಬಿಟ್ಟರೆ ಅರಮನೆಯ ಆವರಣದಲ್ಲಿ ಅರಣ್ಯಾಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಅರಮನೆ ರಾಜ, ರಾಣಿಯರ ಕಾಳಜಿಗೆ ನಾವು ಕೃತಜ್ಞತೆ ಸಲ್ಲಿಸಬೇಕಿದೆ ಎಂದು ಮಾವುತ ಶಂಕರ, ಕಾವಾಡಿ ಅನಿಲ್ ಹೇಳಿದರು.

ಒಟ್ಟಾರೆ ಈ ಬಾರಿಯ ದಸರಾದಲ್ಲಿ ಜನ ಜಾತ್ರೆ ಅತ್ಯಂತ ಹೆಚ್ಚಾಗಿ ಸೇರುವ ಮೂಲಕ ಜನೋತ್ಸವವಾದರೂ ಕೂಡ ನಮ್ಮ ಸಾಕಾನೆಗಳು ನಮ್ಮ ಅಣತಿಯನ್ನು ಮೀರಲಿಲ್ಲ. ನಾವು ಹೇಳಿದಂತೆಯೇ ನಾವು ನೀಡುವ ಸನ್ನೆಯಂತೆಯೇ ನಡೆದುಕೊಂಡು ಬಿಟ್ಟವು.

ಇದಕ್ಕೋಸ್ಕರ ನಾವು ದಸರಾಕ್ಕೆ ಹೊರಡುವಾಗ ದುಬಾರೆಯ ವನದೇವತೆ ಅಮ್ಮಾಳೆ ಅಮ್ಮ ಹಾಗೂ ಮೈಸೂರಿನ ಚಾಮುಂಡಮ್ಮನಿಗೂ ಕೈ ಮುಗಿದು ಹೋಗುವ ಅಭ್ಯಾಸವೇ ಇಷ್ಟೊಂದು ಯಶಸ್ಸಿಗೆ ಕಾರಣ ಅನ್ನುತ್ತಾರೆ. ಸಾಕಾನೆಗಳು ಹಾಗೂ ಮಾವುತರೊಂದಿಗೆ ಜೊತೆಗಿದ್ದ ಸಾಕಾನೆ ಶಿಬಿರದ ಉಪವಲಯ ಅರಣ್ಯಾಧಿಕಾರಿ ಉಮಾಶಂಕರ್.

ನಿಜಕ್ಕೂ ಅರಮನೆ ಬಿಟ್ಟು ಬರುವಾಗ ಜಿಲ್ಲಾಡಳಿತ ತಿಂಗಳ ಕಾಲ ನೀಡಿದ ಆತಿಥ್ಯ ಹಾಗೂ ಕಳುಹಿಸುವಾಗ ಕೊಟ್ಟ ಬೀಳ್ಕೊಡುಗೆಯ ಸಂದರ್ಭ ಕಣ್ಣುಗಳು ತುಂಬಿ ಬಂದವು ಅನ್ನುತ್ತಾರೆ ಮಾವುತರಾದ ಭಾಸ್ಕರ, ಚಿಣ್ಣಪ್ಪ, ನವೀನ್.

ವಿಶೇಷ ವರದಿ : ಕೆ.ಎಸ್.ಮೂರ್ತಿ