ಮಡಿಕೇರಿ, ಅ. ೧೫: ಜಾನುವಾರುಗಳನ್ನು ಹುಡುಕಿಕೊಂಡು ವನ್ಯಜೀವಿ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವ್ಯಕ್ತಿಯೋರ್ವರು ಕಾಡಾನೆ ತುಳಿತಕ್ಕೆ ಬಲಿಯಾಗಿರುವ ಘಟನೆ ಸಂಭವಿಸಿದೆ. ಭಾಗಮಂಡಲ ಬಳಿಯ ಚೇರಂಗಾಲ ನಿವಾಸಿ ಮತ್ತಾರಿ ಕರುಣೇಂದ್ರ (೩೮) ಮೃತ ದುರ್ದೈವಿ. ತಾವು ಸಾಕಿದ್ದ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದು, ಎರಡು ದಿನಗಳಾದರೂ ಬಾರದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ೭ ಗಂಟೆಗೆ ಕರುಣೇಂದ್ರ ಗ್ರಾಮದ ಸ್ನೇಹಿತರಾದ ಮೂಲೆಮಜಲು ಚರಣ್ ಹಾಗೂ ರಂಜು ಅವರುಗಳೊಂದಿಗೆ ಜಾನುವಾರುಗಳನ್ನು ಹುಡುಕಿಕೊಂಡು ವನ್ಯಜೀವಿ ಅರಣ್ಯದತ್ತ ತೆರಳಿದ್ದಾರೆ.

ಈ ಸಂದರ್ಭದಲ್ಲಿ ದಿಢೀರನೆ ಕಾಡಾನೆಯೊಂದು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಮೂವರು ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರಾದರೂ ಕರುಣೇಂದ್ರ ಕಾಲು ಜಾರಿ ಬಿದ್ದಿದ್ದಾರೆ. ಕಾಡಾನೆ ಅವರನ್ನು ಅಲ್ಲಿಯೇ ತುಳಿದು ಸಾಯಿಸಿದೆ. ಚರಣ್ ಹಾಗೂ ರಂಜು ಹೇಗೋ ತಪ್ಪಿಸಿಕೊಂಡು ಬಚಾವಾಗಿದ್ದಾರೆ.

ನಂತರ ಭಾಗಮಂಡಲ ಅರಣ್ಯ ಕಚೇರಿಗೆ ತೆರಳಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು, ಭಾಗಮಂಡಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಮೃತರ ಪತ್ನಿ ನಯನ ನೀಡಿರುವ ಮಾಹಿತಿಯಂತೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.

ಪರಿಹಾರ ಇಲ್ಲ: ಅರಣ್ಯ ಇಲಾಖೆಯ ನಿರ್ಬಂಧಿತ ಪ್ರದೇಶವಾಗಿರುವ ವನ್ಯಜೀವಿ ಮೀಸಲು ಅರಣ್ಯದಲ್ಲಿ ಘಟನೆ ಸಂಭವಿಸಿರುವದರಿAದ ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ದೊರಕುವುದಿಲ್ಲ.

ಸಾರ್ವಜನಿಕ ಪ್ರದೇಶ ನಿಷೇಧಿತ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಆನೆ ದಾಳಿಗೆ ಬಲಿಯಾಗಿರುವುದರಿಂದ ನಿಯಮಾನುಸಾರ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ ಎಂದು ಡಿಸಿಎಫ್ ನೆಹರು ಮಾಹಿತಿ ನೀಡಿದ್ದಾರೆ.