ರಾಜ್ಯದಲ್ಲಿ ನವೆಂಬರ್ ೧೩ ರಂದು ಉಪಚುನಾವಣೆ

ನವದೆಹಲಿ, ಅ. ೧೫: ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟç ಹಾಗೂ ಜಾರ್ಖಂಡ್‌ನ ವಿಧಾನಸಭಾ ಚುನಾವಣೆಗಳಿಗೆ ದಿನಾಂಕ ಘೋಷಣೆ ಮಾಡಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ದಿನಾಂಕ ಘೋಷಿಸಿದ್ದಾರೆ. ಮಹಾರಾಷ್ಟçದಲ್ಲಿ ೧ ಹಂತದಲ್ಲಿ ೨೮೮ ಕ್ಷೇತ್ರಗಳಿಗೆ ನವೆಂಬರ್ ೨೦ ರಂದು ವಿಧಾನಸಭೆಗೆ ಮತದಾನ ನಡೆಯಲಿದ್ದರೆ, ಜಾರ್ಖಂಡ್‌ನಲ್ಲಿ ೨ ಹಂತಗಳಲ್ಲಿ ೮೧ ಕ್ಷೇತ್ರಗಳಿಗೆ ನವೆಂಬರ್ ೧೩ ರಂದು ಮೊದಲ ಹಂತದ ಮತದಾನ ನಡೆದರೆ, ೨ನೇ ಹಂತದ ಮತದಾನ ನವೆಂಬರ್ ೨೦ ರಂದು ನಿಗದಿಯಾಗಿದೆ. ನವೆಂಬರ್ ೨೩ ರಂದು ಮತ ಎಣಿಕೆ ನಡೆಯಲಿದೆ. ಇದೇ ವೇಳೆ ಇತ್ತೀಚೆಗೆ ಪೂರ್ಣಗೊಂಡ ಹರಿಯಾಣದ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲಿ ಯಾವುದೇ ಉಪಚುನಾವಣೆಗಳು ಇಲ್ಲ ಎಂದು ಮುಖ್ಯ ಆಯುಕ್ತರು ಘೋಷಿಸಿದ್ದಾರೆ. ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿ ಶಾಸಕರಿಂದ ತೆರವುಗೊಂಡ ರಾಜ್ಯದ ೩ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದೆ. ನ. ೧೩ ರಂದು ಮತದಾನ ನಡೆಯಲಿದೆ ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಶಿಗ್ಗಾಂವಿ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಚನ್ನಪಟ್ಟಣ ಶಾಸಕರಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದ್ದಾರೆ.

ಪಾಕಿಸ್ತಾನಕ್ಕೆ ಜೈಶಂಕರ್ ಭೇಟಿ

ನವದೆಹಲಿ, ಅ. ೧೫: ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸರ್ಕಾರಗಳ ಉನ್ನತ ಮಟ್ಟದ ಮಹತ್ವದ ಸಭೆಯತ್ತ ಎಲ್ಲರ ಗಮನ ಸೆಳೆದಿದೆ. ಆದರೆ, ಈ ಭೇಟಿಯ ವೇಳೆ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅಥವಾ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಯಾವುದೇ ಔಪಚಾರಿಕ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದೊಂದಿಗಿನ ಭಾರತದ ದ್ವಿಪಕ್ಷೀಯ ಮಾತುಕತೆಗಳ ಬಗ್ಗೆ ಜೈಶಂಕರ್ ಅವರ ಹಿಂದಿನ ನಿಲುವು ಬದಲಾಗುವ ಸಾಧ್ಯತೆ ಕಡಿಮೆ. ಮೇ ೬, ೨೦೨೩ ರಂದು, ಭಾರತ ಮತ್ತು ಪಾಕಿಸ್ತಾನವು ಒಂದೇ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಭಯೋತ್ಪಾದನೆಯಿಂದ ಸಾಕಷ್ಟು ತೊಂದರೆ ಅನುಭವಿಸಿರುವ ದೇಶಗಳು ಭಯೋತ್ಪಾದನೆಯ ಅಪರಾಧಿಗಳೊಂದಿಗೆ ಚರ್ಚಿಸಲು ಸಾಧ್ಯವಿಲ್ಲ ಎಂದು ಜೈಶಂಕರ್ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು. ಈ ತಿಂಗಳ ಆರಂಭದಲ್ಲಿ, ಜೈಶಂಕರ್ ಅವರು ನೆರೆಯ ದೇಶಕ್ಕೆ ತಮ್ಮ ಭೇಟಿಯ ಬಗ್ಗೆ ಮಾತನಾಡುತ್ತಾ, “ನಾನು ಭಾರತ-ಪಾಕಿಸ್ತಾನ ಸಂಬAಧಗಳ ಬಗ್ಗೆ ಚರ್ಚಿಸಲು ಅಲ್ಲಿಗೆ ಹೋಗುತ್ತಿಲ್ಲ. ಇಸ್ಲಾಮಾಬಾದ್‌ಗೆ ತಮ್ಮ ಭೇಟಿಯು ಬಹುಪಕ್ಷೀಯ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಹೊರತು ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಮಾತುಕತೆಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನೇರ ಮಾತುಕತೆಯಲ್ಲಿ ತೊಡಗುವುದಕ್ಕಿಂತ ಹೆಚ್ಚಾಗಿ ಎಸ್‌ಸಿಒ ಚೌಕಟ್ಟಿನೊಳಗೆ ಭಾರತದ ಜವಾಬ್ದಾರಿಗಳನ್ನು ಪೂರೈಸುವತ್ತ ಗಮನಹರಿಸಿದರು. ಅಕ್ಟೋಬರ್ ೧೫-೧೬ ರಂದು ನಿಗದಿಪಡಿಸಲಾದ ಎಸ್‌ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ ಸಭೆಗಾಗಿ ಜೈಶಂಕರ್ ಮಂಗಳವಾರ ಇಸ್ಲಾಮಾಬಾದ್‌ಗೆ ಭೇಟಿ ನೀಡಲಿದ್ದಾರೆ. ಬಿಲಾವಲ್ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿಲ್ಲದಿದ್ದರೂ, ಅವರ ಪಕ್ಷವು ಇನ್ನೂ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸರ್ಕಾರವನ್ನು ಬೆಂಬಲಿಸುತ್ತದೆ.

ಭಾರೀ ಮಳೆಗೆ ಬೆಂಗಳೂರು ತತ್ತರ; ಶಾಲೆಗಳಿಗೆ ರಜೆ ಘೋಷಣೆ!

ಬೆಂಗಳೂರು, ಅ. ೧೫: ಭಾರೀ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಶಾಲಾ-ಕಾಲೇಜುಗಳ ಕುರಿತು ಮಹತ್ವದ ಆದೇಶ ಹೊರಡಿಸಲಾಗಿದ್ದು, ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಿಸುವ ಕುರಿತು ಡಿಸಿ ಜಗದೀಶ್ ಅವರು ಮಾಹಿತಿ ನೀಡಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ಕರ್ನಾಟಕದ ಒಳನಾಡಿನಲ್ಲಿ ಮಳೆ ಆರಂಭವಾಗಿದೆ. ಬೆಂಗಳೂರಿನಲ್ಲಿ ೨ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟ ಇನ್ನೂ ಮೂರು ದಿನ ರಾಜ್ಯದಲ್ಲಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಹಿನ್ನೆಲೆ ತಾ. ೧೬ ರಂದು ಬೆಂಗಳೂರಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಕ್ಟೋಬರ್ ೨೦ ರವರೆಗೆ ದಸರಾ ರಜೆ ಇದೆ. ಆದ್ರೆ ಖಾಸಗಿ ಶಾಲೆಗಳು ಶಾಲೆ ಆರಂಭ ಮಾಡಿವೆ. ಸೋಮವಾರದಿಂದಲೆ ಖಾಸಗಿ ಶಾಲೆಗಳು ಪುನರಾರಂಭವಾಗಿವೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಬರಲು ಕಷ್ಟ ಎದುರಾಗಿದೆ. ಇದರಿಂದ ರಾಜಧಾನಿಯ ಶಾಲೆಗಳಿಗೆ ರಜೆ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ. ಹವಾಮಾನ ಇಲಾಖೆ ನೀಡಿದ ಭಾರೀ ಮಳೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ನಗರದ ಖಾಸಗಿ ಶಾಲೆ, ಪಿ.ಯು. ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಾ. ೧೬ ರಂದು ಕೃಪಾ ಸಂಘಟನೆ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಎಚ್ಚೆತ್ತ ಕೃಪಾ ಖಾಸಗಿ ಸಂಘಟನೆ ತಾ. ೧೬ ರಂದು ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದೂ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ.