ಮಡಿಕೇರಿ, ಅ. ೧೫: ಬಹುಕೋಟಿ ಹಣ ಲೂಟಿಯಾಗಿದೆ ಎಂದು ಚರ್ಚಿತವಾಗಿರುವ ಮಡಿಕೇರಿಯ ಗ್ರೇಟರ್ ರಾಜಾಸೀಟ್ ಹಗರಣ ಬಗ್ಗೆ ಕರ್ನಾಟಕ ಲೋಕಾಯುಕ್ತ ಎರಡನೇ ದಿನವಾದ ಇಂದು ವಿಚಾರಣೆ ನಡೆಸಿ ರಾತ್ರಿಯ ವೇಳೆಗೆ ವಿಚಾರಣೆ ಅಂತ್ಯಗೊಳಿಸಿದೆ. ಸಾವಿರಾರು ಪುಟಗಳ ದಾಖಲೆಯನ್ನು ಸಂಗ್ರಹಿಸಿ ಕೇಂದ್ರ ಕಛೇರಿಗೆ ಕೊಂಡೊಯ್ದಿದೆ.

ಇAದು ನಡೆದ ವಿಚಾರಣೆಗೆ ಹಿಂದೆ ಮಡಿಕೇರಿ ಲೋಕೋಪಯೋಗಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಕಾರ್ಯಪಾಲಕ ಇಂಜಿನಿಯರ್‌ಗಳಾದ ಮದನ್ ಮೋಹನ್, ಬಿ.ನಾಗರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವರಾಮ್, ಆರೋಪಿತ ಕಿರಿಯ ಇಂಜಿನಿಯರ್ ಕೆ.ಎಲ್. ದೇವರಾಜ್ ಅವರನ್ನು ಕರೆಸಿದ ಕರ್ನಾಟಕ ಲೋಕಾಯುಕ್ತ ತಾಂತ್ರಿಕ ವಿಭಾಗದ ತನಿಖಾಧಿಕಾರಿ ತೇಜಶ್ರೀ ಬಿ. ಮುದ್ದೋಡಿ ಸುದೀರ್ಘವಾಗಿ ವಿಚಾರಣೆ ನಡೆಸಿದರು.

ಮಡಿಕೇರಿ ಉಪವಿಭಾಗದ ಕಛೇರಿಯಲ್ಲಿ ತನಿಖೆ ನಡೆಸಲು ಅಧಿಕಾರಿಗಳು ಸಿದ್ದತೆ ನಡೆಸಿದ್ದರೂ ದೂರುದಾರ ತೆನ್ನಿರ ಮೈನಾ ಒಪ್ಪದ ಕಾರಣ ಸುದರ್ಶನ ಅತಿಥಿ ಗೃಹದಲ್ಲಿ ವಿಚಾರಣೆ ನಡೆಯಿತು. ಪರಿಣಾಮ ಮಡಿಕೇರಿ ಉಪವಿಭಾಗದ ಸಿಬ್ಬಂದಿಗಳು ನೂರಾರು ಕಡತಗಳೊಂದಿಗೆ ಅತಿಥಿ ಗೃಹದಲ್ಲಿಯೇ ಮೊಕ್ಕಾಂ ಹೂಡಿದ್ದರು.

ತನಿಖೆಯಲ್ಲಿ ನಿವೃತ್ತರಾದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಂ ಅವರು ನಿವೃತ್ತರಾದ ಒಂದು ವರ್ಷದ ನಂತರ ಪೆನ್ಷನ್ ವಿಚಾರವಾಗಿ ಕಛೇರಿಗೆ ಬಂದಾಗ ಕೆ.ಎಲ್. ದೇವರಾಜ್ ಒತ್ತಡಕ್ಕೆ ಮಣಿದು ವಿವಾದಿತ ಎಂ.ಬಿ.ಪುಸ್ತಕಕ್ಕೆ ಸಹಿ ಹಾಕಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆಯನ್ನು ನೀಡಿದ್ದು ಅದನ್ನು ಲಿಖಿತವಾಗಿ ದಾಖಲಿಸಲಾಯಿತು.

ಎಂ.ಬಿ.ಪುಸ್ತಕ ವನ್ನು ಪರಿಶೀಲಿಸಿ ಸಹಾಯಕ ಕಾರ್ಯಪಾಲಕ ಅಭಿಯಂತರ ಗಿರೀಶ್ ಅವರು ಎಲ್ಲಾ ಎಂ.ಬಿ.ಪುಸ್ತಕದ ಸರಣಿ ಸಂಖ್ಯೆಗಳು ಕಪ್ಪು ಬಣ್ಣದಿಂದ ಇದ್ದು ವಿವಾದಿತ ಪುಸ್ತಕದ ಸರಣಿ ಸಂಖ್ಯೆಯಲ್ಲಿ ಇರುವುದು ಮತ್ತು ಕೋಡ್ ನಲ್ಲಿ ವ್ಯತ್ಯಾಸ ಇರುವುದನ್ನು ಸ್ಪಷ್ಟ ಪಡಿಸಿ ದಿನಾಂಕ ೧-೭-೨೦೨೪ ರಂದು ದಾಖಲೆ ಸಮೇತ ಕೇಂದ್ರ ಕಛೇರಿಗೆ ಪತ್ರ ಬರೆದಿದ್ದರು. ತದನಂತರದಲ್ಲಿ ಇಲಾಖೆಯ ಒಬ್ಬರ ಕೈ ಚಳಕದಿಂದ ಕಪ್ಪು ಬಣ್ಣಕ್ಕೆ ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಕೂಡ ಲೋಕಾಯುಕ್ತ ದಾಖಲೆಗಳೊಂದಿಗೆ ಮಹಜರ್‌ನಲ್ಲಿ ದಾಖಲಿಸಿದ್ದಾರೆ. ಒಟ್ಟು ಹನ್ನೆರಡು ಮಂದಿ ಇಲಾಖಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿAದ ಮಾಹಿತಿ ಪಡೆದು ಮಹಜರು ಮಾಡಲಾಯಿತು.

ಕೆಲವು ನಿಯಮಬಾಹಿರ ತಿದ್ದುವಿಕೆ ಪ್ರಕರಣಗಳನ್ನು ಕಂಡು ಮಡಿಕೇರಿ ಲೋಕೋಪಯೋಗಿ ಇಲಾಖಾ ಸಿಬ್ಬಂದಿಗಳೇ ಬೆಚ್ಚಿ ಬಿದ್ದಿದ್ದಾರೆ. ಒಬ್ಬ ಮಾಡಿದ ತಪ್ಪಿಗೆ ಎಲ್ಲರೂ ಅನುಭವಿಸುವಂತೆ ಆಗಿದೆ ಎಂದು ಹಿರಿಯ ನಿವೃತ್ತ ಅಧಿಕಾರಿಯೊಬ್ಬರು ಅಳಲು ತೋಡಿಕೊಳ್ಳುತ್ತಿದ್ದುದು ಕಂಡು ಬಂದಿತು.

೨೦೨೩ ರಲ್ಲಿಯೇ ಲೋಕಾರ್ಪಣೆ ಆಗಿ ಇನ್ನೂ ಕೂಡ ಕಾಮಗಾರಿ ಮುಗಿಯದ ಕಾರಣ ತೋಟಗಾರಿಕೆ ಇಲಾಖೆಗೆ ಹಸ್ತಾಂತರವಾಗದೆ ಅರ್ಧಂಬರ್ಧ ಕೆಲಸದೊಂದಿಗೆ ಸಿದ್ಧವಾಗಿರುವ ರೂ. ೪.೫ ಕೋಟಿ ವೆಚ್ಚದ ಗ್ರೇಟರ್ ರಾಜಾ ಸೀಟ್ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿ ಸರ್ಕಾರ ಮತ್ತು ಜನತೆಯನ್ನು ಬೇಸ್ತು ಬೀಳಿಸಿದೆ.