ಶ್ರೀಮಂಗಲ, ಅ. ೧೫: ಮನುಷ್ಯನಿಗೆ ಉತ್ತಮ ಆರೋಗ್ಯವೇ ದೊಡ್ಡ ಆಸ್ತಿ, ಆರೋಗ್ಯವಂತ ಜೀವನದಿಂದ ಏನನ್ನಾದರೂ ಸಾಧಿಸಬಹುದು, ಆರೋಗ್ಯಕ್ಕೆ ಪ್ರಥಮ ಆದ್ಯತೆಯನ್ನು ನೀಡಬೇಕು ಆದ್ದರಿಂದ ನಾವು ಸೇವಿಸುವ ಆಹಾರ ರಾಸಾಯನಿಕ ಮುಕ್ತ ಹಾಗೂ ನಮ್ಮ ಪರಿಸರ ಸುರಕ್ಷತೆಗೆ ನಾವು ಗಮನ ಹರಿಸಬೇಕೆಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಕಿರಿಯ ರೋಗ ತಜ್ಞರಾದ ಇಮ್ರಾನ್ ಖಾನ್ ಅವರು ಸಲಹೆ ನೀಡಿದರು.

ಅವರು ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘ ಹಾಗೂ ಕೊಡಗು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವೀರಾಜಪೇಟೆ ಇವರ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ನಡೆದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕೀಟನಾಶಕ ಬಳಕೆಗೆ ಮುನ್ನ ಪ್ರಾಥಮಿಕ ಜ್ಞಾನವಿರಬೇಕು. ಅತಿ ಹೆಚ್ಚಿನ ವಿಷಕಾರಿ ಕೀಟನಾಶಕ ಪ್ಯಾಕೇಟ್, ಡಬ್ಬದ ಮೇಲೆ ಲೇಬಲ್ ನಮೂದು ಇರುತ್ತದೆ. ಕೆಂಪು ಲೇಬಲ್ ಹೆಚ್ಚಿನ ವಿಷಕಾರಿ,ಅದಕ್ಕಿಂತ ಸ್ವಲ್ಪ ಕಡಿಮೆ ವಿಷಕಾರಿ ಹಳದಿ, ಅದಕ್ಕಿಂತ ಇನ್ನೂ ಕಡಿಮೆ ವಿಷಕಾರಿ ನೀಲಿ ಹಾಗೂ ಇನ್ನೂ ಅದಕ್ಕಿಂತ ಕಡಿಮೆ ವಿಷಕಾರಿ ಹಸಿರು ಬಣ್ಣದ ಲೇಬಲ್‌ಗಳನ್ನು ಕೀಟನಾಶಕ ಪ್ಯಾಕೆಟ್ ಅಥವಾ ಬಾಟಲ್ ಮೇಲೆ ನಮೂದಿಸಲಾಗಿರುತ್ತದೆ. ಅತಿ ಹೆಚ್ಚು ವಿಷಕಾರಿಯಾಗಿರುವ ಕೀಟ ನಾಶಕವನ್ನು ಬಳಸುವ ಮೊದಲು ಕಡಿಮೆ ವಿಷಕಾರಿ ಇರುವ ಕೀಟ ನಾಶಕಗಳ ಬಳಕೆಯ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಇಮ್ರಾನ್ ಖಾನ್ ಹೇಳಿದರು.

ಪೊನ್ನಂಪೇಟೆ ಅರಣ್ಯ ಕಾಲೇಜಿನ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಿದ್ಧರೂಢ ಸಿಂಗಾಡಿ ಅವರು ಮಾತನಾಡಿ ಭತ್ತದ ಬೆಳೆಯಲ್ಲಿ ಬೀಜೋಪಚಾರ ಹಾಗೂ ಬೀಜಗಳ ಆಯ್ಕೆ ಮೂಲಕ ಬೆಳೆಗಳಿಗೆ ಬರುವ ರೋಗಗಳನ್ನು ಪ್ರಥಮ ಹಂತದಲ್ಲಿಯೇ ನಿಯಂತ್ರಿಸಿ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ಎಂದು ವಿವರಿಸಿದರು.

ಶ್ರೀಮಂಗಲ ಹೋಬಳಿ ಕೃಷಿ ಇಲಾಖೆಯ ಅಧಿಕಾರಿ ಲವೀನ್ ಮಾದಪ್ಪ ಅವರು ಮಾತನಾಡಿ ಉತ್ಪಾದನಾ ವೆಚ್ಚ ಹೆಚ್ಚಳ, ವನ್ಯ ಪ್ರಾಣಿಗಳು ಹಾವಳಿ ಕಾರ್ಮಿಕರ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಂದ ಗದ್ದೆಗಳನ್ನು ಪಾಳು ಬಿಟ್ಟು ಜಿಲ್ಲೆಯಲ್ಲಿ ತೋಟದತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಆದರೆ ಮುಂದಿನ ಪೀಳಿಗೆಯ ಹಾಗೂ ಪರಿಸರದ ಹಿತ ದೃಷ್ಟಿಯಿಂದ ಗದ್ದೆಗಳನ್ನು ಮತ್ತೆ ಕೃಷಿಗೆ ತರುವ ಅನಿವಾರ್ಯತೆ ಇದೆ. ರಸಾಯನಿಕ ಮುಕ್ತ ಆಹಾರ, ಅಂತರ್ಜಲ ಹೆಚ್ಚಳ ಉತ್ತಮ ಕುಡಿಯುವ ನೀರಿಗಾಗಿ ಕೊಡಗಿನಲ್ಲಿ ಭತ್ತದ ಕೃಷಿಯನ್ನು ನಮ್ಮ ಅಗತ್ಯತೆಗೆ ತಕ್ಕಂತೆ ಮಾಡುವುದು ಅಗತ್ಯವಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ಒತ್ತು ನೀಡಲು ಮನವಿ ಮಾಡಿದರು.

ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮನ್ನೇರ ರಮೇಶ್, ಕಾರ್ಯದರ್ಶಿ ಚಂಗುಲAಡ ಸತೀಶ್, ಸಹ ಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ, ಖಜಾಂಚಿ ಚೆಟ್ಟಂಗಡ ವಿಜಯ ಕಾರ್ಯಪ್ಪ, ನಿರ್ದೇಶಕರುಗಳಾದ ಮಚ್ಚಮಾಡ ಮನು ಕುಶಾಲಪ್ಪ, ಮಂದಮಾಡ ಬೆಳ್ಯಪ್ಪ, ಮೀದೇರಿರ ಸುರೇಶ, ಚೊಟ್ಟೆಯಂಡಮಾಡ ಅರಸು ಗೋಕುಲ, ಕರ್ನಂಡ ಕುಶಾಲಪ್ಪ, ಚೆಟ್ಟಂಗಡ ಪುಣ್ಯವತಿ, ಗೌರವ ಸಲಹೆಗಾರರಾದ ಕೈಬುಲೀರ ಪಾರ್ವತಿ ಬೋಪಯ್ಯ, ಮತ್ತು ಶ್ರೀಮಂಗಲ ಹೋಬಳಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಕಿರಣ್ ಸಿ.ಎಸ್., ಕೃಷಿ ಇಲಾಖೆಯ ಆತ್ಮ ಯೋಜನೆಯ ಲೆಕ್ಕಿಗರಾದ ಚೈತ್ರ ಕೆ.ಕೆ. ಸಂಘದ ಸಧಸ್ಯರುಗಳು ಹಾಜರಿದ್ದರು