ಸಿದ್ದಾಪುರ, ಅ. ೧೫: ಇತಿಹಾಸ ಪ್ರಸಿದ್ಧ ನೆಲ್ಲಿಹುದಿಕೇರಿಯ ಶ್ರೀ ಸತ್ಯನಾರಾಯಣ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ನೀಡುವಂತೆ ರಾಜಕೀಯ ಪಕ್ಷವೊಂದು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಖಂಡಿಸಿ ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು.

ಬೆಳಿಗ್ಗೆ ಶ್ರೀ ಸತ್ಯನಾರಾಯಣ ದೇವಾಲಯದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಮತ್ತು ಭಕ್ತಾದಿಗಳು ಸೇರಿ ದೇವಾಲಯದಲ್ಲಿ ವಿಶೇಷ ಪೂಜೆ ಸಂಕಲ್ಪ ಮಾಡಿದರು. ನಂತರ ಪ್ರತಿಭಟನಾ ಮೆರವಣಿಗೆಯು ದೇವಾಲಯದಿಂದ ಹೊರಟು ನೆಲ್ಲಿಹುದಿಕೇರಿ ಗ್ರಾಮಪಂಚಾಯಿತಿ ಕಾರ್ಯಾಲಯದವರೆಗೆ ಸಾಗಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು ಸಿ.ಪಿ.ಐ. (ಎಂ) ಪಕ್ಷದ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿದರು. ಅಲ್ಲದೇ ಯಾವುದೇ ಕಾರಣಕ್ಕೂ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಪ್ರತಿಭಟನೆಯ ಸಂದರ್ಭ ಶ್ರೀ ಸತ್ಯನಾರಾಯಣ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಜಿ. ಚಂದ್ರಶೇಖರ್ ಮಾತನಾಡಿ, ಶ್ರೀ ಸತ್ಯನಾರಾಯಣ ದೇವಾಲಯ ಸಮೀಪದ ಜಾಗವು ನೂರಾರು ವರ್ಷಗಳಿಂದ ದೇವಾಲಯದ ಸ್ವಾಧೀನದಲ್ಲಿದ್ದು ಇಲ್ಲಿ ಮಸಣಿಕಮ್ಮ ದೇವಿಯ ಆರಾಧನೆಯನ್ನು ನಡೆಸಲಾಗುತ್ತಿದೆ.

ಇದಕ್ಕೆ ತನ್ನದೇ ಆದ ಇತಿಹಾಸವಿದ್ದು, ಈ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ನೀಡುವಂತೆ ಸಿ.ಪಿ.ಐ.ಎಂ. ಪಕ್ಷದವರು ಪಂಚಾಯಿತಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಇದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದರು. ಸ್ಮಶಾನಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರಕಾರಿ ಹಾಗೂ ಇತರ ಜಾಗಗಳನ್ನು ಬಿಟ್ಟು ದೇವಾಲಯದ ಜಾಗದಲ್ಲಿ ಸ್ಮಶಾನಕ್ಕೆ ಅವಕಾಶ ಕೇಳಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ದೇವಾಲಯಕ್ಕೆ ಸೇರಿದ ಜಾಗದಲ್ಲಿ ಸ್ಮಶಾನಕ್ಕೆ ಜಾಗ ನೀಡಿದಲ್ಲಿ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆಯಿತ್ತರು.

ಈ ಸಂದರ್ಭ ಕಾರ್ಯದರ್ಶಿ ಟಿ.ಜಿ. ವಿನೋದ್, ದೇವತಕ್ಕರಾದ ಟಿ.ಪಿ. ನಂಜಪ್ಪ, ದೇವಾಲಯದ ಮುಖ್ಯಸ್ಥರಾದ ಟಿ.ಬಿ. ಗಣೇಶ್, ಉಪಾಧ್ಯಕ್ಷ ಎನ್.ಎಸ್. ವಿಜುಕುಮಾರ್, ಸಹಕಾರ್ಯದರ್ಶಿ ಟಿ.ಇ. ಸತ್ಯಜಿತ್, ಖಜಾಂಚಿ ಕೆ.ಜೆ. ಸುಪ್ರೀಂ, ಕೆ.ಎಂ. ಜಯಕುಮಾರ್ ಹಾಗೂ ಬಿ.ಜೆ.ಪಿ. ಪ್ರಮುಖ ಯೋಗೇಶ್ ಇನ್ನಿತರರು ಹಾಜರಿದ್ದರು.

ಪ್ರತಿಭಟನೆಯ ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷಿö್ಮ ಹಾಗೂ ಪಿ.ಡಿ.ಓ. ನಂಜುAಡಸ್ವಾಮಿ ಅವರಿಗೆ ಮನವಿ ಪತ್ರ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪಿ.ಡಿ.ಓ. ನಂಜುAಡಸ್ವಾಮಿ ಮುಂದಿನ ಮಾಸಿಕ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದೆಂದು ಭರವಸೆ ನೀಡಿದರು.

- ಎ.ಎನ್. ವಾಸು.