ಸುಂಟಿಕೊಪ್ಪ, ಅ. ೧೫: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಾಚಾರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ನಮ್ಮ ಜೀವನದಲ್ಲಿ ಕೆಟ್ಟದನ್ನು ದೂರ ಮಾಡಿ ಒಳಿತನ್ನು ಅಳವಡಿಸಿ ಕೊಳ್ಳಲು ಪ್ರೇರಣೆಯಾಗ ಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರೆ ನೀಡಿದ್ದಾರೆ.

ಅವರು ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯಲ್ಲಿ ಶುಕ್ರವಾರದಂದು ಆಯೋಜಿತವಾಗಿದ್ದ ಸುಂಟಿಕೊಪ್ಪ ವಾಹನ ಚಾಲಕರ ೫೪ನೇ ಆಯುಧ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಗುರಿ ಸಾಧಿಸಲು ವಿದ್ಯಾಭ್ಯಾಸ ಅತ್ಯುತ್ತಮ ಸಾಧನ. ಯುವಜನಾಂಗ ಜೀವನದಲ್ಲಿ ತಮ್ಮ ಗುರಿ ಸಾಧಿಸಲು ಉನ್ನತ ವಿದ್ಯಾಭ್ಯಾಸವನ್ನು ಹೊಂದಬೇಕೆAದು ಅವರು ಕರೆ ನೀಡಿದರು.

ಮುಖ್ಯ ಅತಿಥಿ ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರ ಸಂಘವು ಜಾತ್ಯತೀತ ಮತ್ತು ಪಕ್ಷಾತೀತ ನೆಲೆಗಟ್ಟಿನಲ್ಲಿ ಕಾರ್ಯಕ್ರಮ ವನ್ನು ಹಮ್ಮಿಕೊಂಡು ಬರುತ್ತಿದ್ದು, ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳದೆ ಸ್ಥಳೀಯ ಪ್ರತಿಭೆಗಳ ಮತ್ತು ಮಕ್ಕಳ ಪ್ರತಿಭಾ ವಿಕಸನಕ್ಕೆ ವೇದಿಕೆ ಒದಗಿಸಿ ಕೊಟ್ಟಿರುವುದು ಶ್ಲಾಘನೀಯ ವಿಚಾರ ವೆಂದು ಹೇಳಿದರು. ಆಯುಧ ಪೂಜೆ ಮತ್ತು ವಿಜಯದಶಮಿ ಆಚರಣೆಗೆ ಮಹಾಭಾರತ ಕಾಲದಿಂದ ಪ್ರಾಶಸ್ತö್ಯವಿದ್ದು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಅತ್ಯುತ್ತಮ ಸಂದೇಶವನ್ನು ಈ ಹಬ್ಬಗಳ ಆಚರಣೆ ಹೊಂದಿದ್ದು ಇಂದಿಗೂ ಪ್ರಸ್ತುತವಾಗಿ ಮುಂದೆಯೂ ಮುಂದುವರಿಯ ಲೆಂದು ಆಶಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆಯು ಮತ್ತು ಆಯುಧಪೂಜಾ ಸಮಾರಂಭವು ಸುಂಟಿಕೊಪ್ಪ ಹೋಬಳಿಯ ಅಭಿವೃದ್ಧಿಯ ಕೇಂದ್ರ ಬಿಂದುವಾಗಿದೆ ಈ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಸೇರಿದಂತೆ ಅನೇಕ ಕೇಂದ್ರ ಮಂತ್ರಿಗಳು ಬಂದು ಹೋಗಿದ್ದು, ಸಮಸ್ಯೆಯ ಬಗ್ಗೆ ಮೌಖಿಕ ಮತ್ತು ಲಿಖಿತ ಮನವಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗಿದೆ. ಸಮಾರಂಭದ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ವಾಹನ ಚಾಲಕರ ಸಂಘ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದು ಅತ್ಯಂತ ಹರ್ಷದಾಯಕ ವಿಚಾರವೆಂದು ಅವರು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಮಾತನಾಡಿ, ಸಂಘದ ವತಿ ಯಿಂದ ಸ್ಥಳೀಯ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಹೊರ ತರಲು ಅತ್ಯುತ್ತಮ ವೇದಿಕೆಯನ್ನು ಸದುಪ ಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಇತ್ತೀಚೆಗೆ ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ಸಾಗಾಣಿಕೆ ಮಾರಾಟ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ೩೩ ಮಂದಿ ಆರೋಪಿಗಳನ್ನು ಬಂಧಿಸಿದ ಸಂದರ್ಭ ಅವರಲ್ಲಿ ೨೭ ಮಂದಿ ಸುಂಟಿಕೊಪ್ಪದವರಾಗಿರುವುದು ದುರದೃಷ್ಟಕರ ಎಂದು ಅವರು ವಿಷಾಧಿಸಿದರು. ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್ ವಾಹನ ಚಾಲಕರ ಜೀವನ ದುಸ್ತರವಾಗಿದೆ ಅವರಿಗೆ ನಿವೇಶನಗಳನ್ನು ನೀಡುವ ಬಗ್ಗೆ ಮನವಿ ನೀಡಲಾಗಿದ್ದು, ಈ ಬಗ್ಗೆ ಗಮನಹರಿಸಬೇಕಾಗಿದೆ. ಜಿಲ್ಲೆಯಲ್ಲಿ ೯೪ ಸಿ ನಿಯಮದ ಅಡಿಯಲ್ಲಿ ಭೂ ದಾಖಲಾತಿಗಳ ನೋಂದಣಿ ಕಷ್ಟವಾಗಿದ್ದು, ವಾಹನ ಚಾಲಕರಿಗೆ ಹಳದಿ ಮತ್ತು ಬಿಳಿ ಬಣ್ಣದ ನಂಬರ್ ಪ್ಲೇಟ್ ಸಮಸ್ಯೆಗಳು ಸಾರಿಗೆ ಪ್ರಾಧಿಕಾರದ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಷ್ಟಕರವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ಸೂಕ್ತವಾಗಿ ಸ್ಪಂದಿಸಬೇಕೆAದು ಮನವಿ ಮಾಡಿದರು. ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿ, ಸುಂಟಿಕೊಪ್ಪ ರಾಜಕೀಯವಾಗಿ, ಸಾಮಾಜಿಕವಾಗಿ, ಕ್ರೀಡಾಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೆ ಯಾದ ಕೊಡುಗೆಯನ್ನು ನೀಡಿದೆ ಎಂದರು.

ಇದೇ ಸಂದರ್ಭ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಚಿತ್ರಕುಮಾರಿ, ಆಶಾ ಕಾರ್ಯಕರ್ತೆ ಪಾರ್ವತಿ, ಹಿರಿಯ ಚಾಲಕ ಉಸ್ಮಾನ್ ಹೆಚ್. ನಿವೃತ್ತ ಯೋಧರಾದ ವಿಲಿಯಂ ಮೆನೆಜಸ್ ಅವರುಗಳನ್ನು ವೇದಿಕೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿ, ಗೌರವಿಸಿದರು.

ಸಮಾರಂಭದ ವೇದಿಕೆಯಲ್ಲಿ ಸುಂಟಿಕೊಪ್ಪ ಯುವ ಮುಖಂಡ ಪಿ.ಎಲ್. ಹರ್ಷದ್, ಸುಂಟಿಕೊಪ್ಪ ಯುವ ಕಾಂಗ್ರೆಸ್ ಮುಖಂಡ ಅನೂಪ್ ಕುಮಾರ್, ಗ್ರಾ.ಪಂ. ಸದಸ್ಯ ಪಿ.ಎಫ್. ಸಬಾಸ್ಟೀನ್, ಸಿದ್ಧಲಿಂಗ ಪುರ ಕೃಷಿಕ ರಾಮಣ್ಣ ಎ.ಎಸ್., ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳಿಂದ ಡ್ಯಾನ್ಸ್ ಮೇಳವು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ವಿದ್ಯುತ್ ದೀಪಾಂಲಕೃತ ಭವ್ಯವೇದಿಕೆಯಲ್ಲಿ ಜನ ಮನ ಸೂರೆಗೊಂಡಿತು. ದೊಡ್ಡ ವಾಹನಗಳ ಮತ್ತು ಚಿಕ್ಕ ವಾಹನಗಳ ಅಲಂಕಾರ, ಅಂಗಡಿ ಮಳಿಗೆ, ವರ್ಕ್ ಶಾಪ್, ಸರ್ಕಾರಿ ಕಚೇರಿಗಳಾದ ಚೆಸ್ಕಾಂ, ಪೊಲೀಸ್ ಠಾಣೆ, ಗ್ರಾಮ ಪಂಚಾಯಿತಿ, ಆಟೋ ರೀಕ್ಷಾ ಸ್ಪರ್ಧೆಗಳನ್ನು ಏರ್ಪಡಿಸಿದ್ದ ಹಿನ್ನೆಲೆ ಅಲಂಕಾರ ಗೊಳಿಸಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡರು.