ಗೋಣಿಕೊಪ್ಪಲು, ಅ. ೧೭: ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಪಡೆಯಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಇದರಲ್ಲಿ ಅನ್ನಭಾಗ್ಯ ಯೋಜನೆಯು ಪ್ರಮುಖವಾಗಿದೆ. ಇದರಿಂದ ಕಷ್ಟದಲ್ಲಿರುವವರಿಗೆ ಹೊಟ್ಟೆ ತುಂಬಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಯೋಜನೆಯಲ್ಲಿ ಅರ್ಹರಲ್ಲದ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿರುವುದು ಕಂಡು ಬಂದಿದೆ.

ಈಗಾಗಲೇ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸುತ್ತಿದೆ. ಇಂತಹವರು ಕಂಡುಬAದಲ್ಲಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಡಜನತೆಗೆ ಸೇರಬೇಕಾದ ಯೋಜನೆಯ ಪ್ರಯೋಜನ ಉಳ್ಳವರಿಗೆ ನೀಡಿದ್ದಲ್ಲಿ ಅಂತವರ ಮೇಲೂ ಪ್ರಕರಣ ದಾಖಲಿಸುವ ಕೆಲಸ ನಡೆಯಲಿದೆ ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅಧಿಕಾರಿಗಳಿಗೆ ಹಾಗೂ ನ್ಯಾಯಬೆಲೆ ಅಂಗಡಿಯ ಏಜೆಂಟರುಗಳಿಗೆ ಎಚ್ಚರಿಕೆ ನೀಡಿದರು.

ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿಯ ಏಜೆಂಟರುಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ತೀತಿರ ಧರ್ಮಜ ಉತ್ತಪ್ಪ, ಇತ್ತೀಚೆಗೆ ಆಹಾರ ವಿತರಣೆಯಲ್ಲಿ ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ತೋಟದ ಮಾಲೀಕರು ಕಾರ್ಮಿಕರ ಹೆಸರಿನಲ್ಲಿರುವ ಪಡಿತರ ಚೀಟಿಗಳನ್ನು ತಮ್ಮ ಬಳಿಯೆ ಇಟ್ಟುಕೊಂಡು ರೇಷನ್ ಅಕ್ಕಿ ಬರುವ ಸಂದರ್ಭ ಫಲಾನುಭವಿಗಳನ್ನು ತಮ್ಮ ವಾಹನದಲ್ಲಿಯೇ ನ್ಯಾಯಬೆಲೆ ಅಂಗಡಿಗೆ ಕರೆದೊಯ್ದು ಅವರಿಗೆ ಸಿಗುವ ಅಕ್ಕಿಯನ್ನು ಪಡೆದ ನಂತರ ಕೆಲ ಮಾಲೀಕರು ಅದೇ ಅಕ್ಕಿಯನ್ನು ತಲಾ ಕೆ.ಜಿ.ಗೆ ೧೫ ರೂ.ಗಳಂತೆ ಕಾರ್ಮಿಕರಿಗೆ ನೀಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲಾಖಾಧಿಕಾರಿಗಳು ಈ ನಿಟ್ಟಿನಲ್ಲಿ ಅಂತಹವರನ್ನು ಪತ್ತೆ ಹಚ್ಚುವ ಕೆಲಸ ತಕ್ಷಣದಿಂದ ಕೈಗೆತ್ತಿಕೊಳ್ಳಬೇಕು.

ನ್ಯಾಯಬೆಲೆ ಏಜೆಂಟರುಗಳ ವಿಶ್ವಾಸ ಪಡೆದು ಅವರಿಂದ ಮಾಹಿತಿ ಪಡೆಯಬೇಕು. ಇದರಿಂದ ಅಕ್ರಮ ಮಾಡುವವರನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ.

ಅರ್ಹರಿಗೆ ಸಿಗುವ ಯೋಜನೆ ಗಳು ದುರುಪಯೋಗವಾದಲ್ಲಿ ಅಂತಹವರ ಮೇಲೆ ಯಾವುದೇ ಒತ್ತಡಗಳಿಗೆ ಮಣಿಯದೆ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಹಲವು ಮಂದಿ ಅರ್ಹರಿಲ್ಲದಿದ್ದರೂ. ಆದಾಯ ದೃಢೀಕರಣ ಪತ್ರವನ್ನು ನೀಡುವ ಮೂಲಕ ಬಿಪಿಎಲ್ ಪಡಿತರಚೀಟಿ ಪಡೆದಿರುವುದು ಗಮನಕ್ಕೆ ಬಂದಿದೆ. ಇಂತಹ ಪಡಿತರಗಳನ್ನು ಕೂಡಲೇ ಪತ್ತೆಹಚ್ಚಿ ರದ್ದುಗೊಳಿಸಬೇಕು. ಅಲ್ಲದೆ ಅಂತಹವರ ಮೇಲೆ ಕಠಿಣಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿಗದಿತ ಸಮಯದಲ್ಲಿ ನ್ಯಾಯಬೆಲೆ ಅಂಗಡಿ ತೆರೆದು ಅಕ್ಕಿ ವಿತರಿಸಬೇಕು ಎಂದರು.

ನ್ಯಾಯಬೆಲೆ ಏಜೆಂಟರುಗಳ ಸಂಘದ ಅಧ್ಯಕ್ಷ ಕೆ.ಕೆ. ಬೆಳ್ಳಿಯಪ್ಪ ಮಾತನಾಡಿ, ಅರ್ಹರಿಲ್ಲದಿದ್ದರೂ ಅಂತಹವರ ಬಳಿ ಬಿಪಿಎಲ್ ಕಾರ್ಡ್ಗಳಿವೆ. ಈ ಬಗ್ಗೆ ನಾವುಗಳು ಪ್ರಶ್ನೆ ಮಾಡುವಂತಿಲ್ಲ. ಮಾಡಿದರೆ ಜಗಳಕ್ಕೆ ಬೀಳುತ್ತಾರೆ.

ಸಾಕಷ್ಟು ಮಂದಿ ಬಳಿ ಬಿಪಿಎಲ್ ಕಾರ್ಡ್ ಇರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದರಿಂದ ಅರ್ಹರಿಗೆ ಸಿಗುವ ಯೋಜನೆಗಳು ಕೈತಪ್ಪುತ್ತಿವೆ. ನ್ಯಾಯಬೆಲೆ ಅಂಗಡಿಯ ಮುಂದೆ ಬಲಾಡ್ಯರು ಆಗಮಿಸಿ ತಮ್ಮ ಬಳಿ ಇರುವ ಕಾರ್ಮಿಕರ ಕಾರ್ಡ್ಗಳಿಂದ ರೇಷನ್ ಪಡೆದು ತಮ್ಮ ವಾಹನದಲ್ಲಿ ಚೀಲಗಟ್ಟಲೆ ಅಕ್ಕಿಯನ್ನು ತುಂಬಿಸಿ ತೆರಳುತ್ತಾರೆ. ಈ ಬಗ್ಗೆ ಪ್ರಶ್ನಿಸಿದ್ದಲ್ಲಿ ಗಲಾಟೆ ಮಾಡುತ್ತಾರೆ. ನ್ಯಾಯ ಬೆಲೆ ಏಜೆಂಟರುಗಳು ಸಿಗುವ ಸಣ್ಣ ಕಮಿಷನ್‌ನಿಂದ ಜೀವನ ನಡೆಸುತ್ತಿದ್ದೇವೆ. ಇದನ್ನು ಸಕಾಲದಲ್ಲಿ ಕೊಡಿಸಲು ಕ್ರಮಕೈಗೊಳ್ಳಲು ಮನವಿ ಮಾಡಿದರು.

ಹಲವು ಏಜೆಂಟರು ಹಲವು ಸಮಸ್ಯೆಗಳ ಬಗ್ಗೆ ಅಧ್ಯಕ್ಷರಲ್ಲಿ ತಮ್ಮ ನೋವನ್ನು ತೋಡಿಕೊಂಡರು. ನೂರಾರು ನ್ಯಾಯಬೆಲೆ ಅಂಗಡಿಯ ಏಜೆಂಟರುಗಳು ಸಭೆಯಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಜಾನ್ಸನ್, ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಆಹಾರ ನಿರೀಕ್ಷಕರಾದ ಸೀನಾಕುಮಾರಿ, ನಿಶಾನ್, ಸಂಘದ ಕಾರ್ಯದರ್ಶಿ ಯೋಗನಂದಾರಾವ್ ಉಪಸ್ಥಿತರಿದ್ದರು.

- ಹೆಚ್.ಕೆ. ಜಗದೀಶ್