ಪೊನ್ನಂಪೇಟೆ, ಅ. ೧೬: ಇತಿಹಾಸ ಪ್ರಸಿದ್ಧ ಹಾಗೂ ಕೊಡಗಿನ ಮೊದಲ ಬೋಡ್ ನಮ್ಮೆ ಎಂಬ ಖ್ಯಾತಿ ಪಡೆದಿರುವ "ಕುಂದತ್ ಬೊಟ್ಟ್ ಬೋಡ್ ನಮ್ಮೆ"ಗೆ (ತಾ.೧೮ರ) ಶುಕ್ರವಾರ ಚಾಲನೆ ನೀಡಲಾಗುವುದು.

ಕುಂದ ಮುಗುಟಗೇರಿ ಸಮೀಪದ ಶ್ರೀ ಈಶ್ವರ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಸಾಂಪ್ರದಾಯಿಕ ದೋಳ್ ತೆಗೆಯುವ ಮೂಲಕ ಕೊಡಗಿನ ಮೊದಲ ಬೋಡ್ ನಮ್ಮೆಗೆ ಚಾಲನೆ ದೊರೆಯಿತು. ಪ್ರತಿವರ್ಷ ತಲಕಾವೇರಿಯಲ್ಲಿ ತೀರ್ಥೋದ್ಭವದ ದಿನ ಹಾಗೂ ಮರುದಿನ ಹಬ್ಬ ನಡೆಯಲಿದ್ದು, ಈ ವರ್ಷ ಅಕ್ಟೋಬರ್ ೧೭ ಹಾಗೂ ೧೮ರಂದು ಹಬ್ಬ ನಡೆಯಲಿದೆ ಎಂದು ಭಂಡಾರ ತಕ್ಕರಾರ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ. ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬಸ್ಥರ ತಕ್ಕಾಮೆಯಲ್ಲಿ ಹಬ್ಬ ನಡೆಯಲಿದ್ದು ತಾ. ೧೭ ರಂದು ರಾತ್ರಿ ಮನೆ ಕಳಿಯ ಬಳಿಕ ತಾ.೧೮ ರಂದು ಕುಂದಾ ಬೆಟ್ಟದ ಮೇಲೆ ಹಬ್ಬ ನಡೆಯಲಿದೆ.

ಅಂದು ಮಧ್ಯಾಹ್ನ ಸುಮಾರು ೧೨.೩೦ಕ್ಕೆ ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ಬಲ್ಯ ಮನೆಯಿಂದ ಕೃತಕವಾಗಿ ತಯಾರಿಸಿ ಶೃಂಗರಿಸಲಾದ ತಲಾ ಒಂದೊAದು ಕುದುರೆಯನ್ನು ಹೊತ್ತವರು ಬೆಟ್ಟದ ತಪ್ಪಲಿನಲ್ಲಿರುವ ನಾಡ್ ದೇವಸ್ಥಾನದ ಸಮೀಪದ ಅಂಬಲದಲ್ಲಿ ವಿವಿಧ ವಿಧಿ ವಿಧಾನಗಳನ್ನು ಆಚರಿಸಿ, ನಂತರ ಕಡಿದಾದ ಬೆಟ್ಟವನ್ನು ಏರುವ ಮೂಲಕ ಕುಂದಾ ಬೆಟ್ಟದ ಮೇಲಿನ ಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ.

ಕಡಿದಾದ ಕುಂದಾ ಬೆಟ್ಟವನ್ನು ಏರಿದ ಮೇಲೆ ಅಲ್ಲಿ ಪಾಂಡವರು ನಿರ್ಮಿಸಿದರು ಎನ್ನಲಾಗುವ ಬೊಟ್ಲಪ್ಪ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯುತ್ತದೆ ಎಂದು ಭಂಡಾರ ತಕ್ಕರಾದ ಸಣ್ಣುವಂಡ ಅಪ್ಪಿ ಪೂಣಚ್ಚ ತಿಳಿಸಿದ್ದಾರೆ.