ಸೋಮವಾರಪೇಟೆ, ಅ. ೧೭: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವಷ್ಟು ಅಂಗಡಿ ಮಳಿಗೆಗಳನ್ನು ಮೂಲ ಬಾಡಿಗೆದಾರರು ಹೆಚ್ಚಿನ ಬಾಡಿಗೆಗೆ ಬೇರೆಯವರಿಗೆ ಒಳ ಬಾಡಿಗೆ ನೀಡಿದ್ದು, ಇದರಿಂದ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಈ ಬಾರಿಯ ಟೆಂಡರ್‌ನಲ್ಲಿ ಇಂತಹ ಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸೋಮವಾರಪೇಟೆ ಸಾರ್ವಜನಿಕ ಹೋರಾಟ ಸಮಿತಿ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸಿ.ಬಿ. ಸುರೇಶ್ ಶೆಟ್ಟಿ, ಕೆಲವು ವರ್ತಕರು ಮಳಿಗೆಗಳನ್ನು ಪಡೆದುಕೊಂಡು ಪಟ್ಟಣ ಪಂಚಾಯಿತಿಗೆ ಕಡಿಮೆ ಬಾಡಿಗೆ ಪಾವತಿಸಿ ಪರಭಾರೆ ಮಾಡಿ ಬಾಡಿಗೆದಾರರಿಂದ ಅತ್ಯಧಿಕ ಬಾಡಿಗೆ ವಸೂಲಿ ಮಾಡಿ ಬಾಡಿಗೆ ದಂಧೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕ್ರಮಗಳಿಗೆ ಪಂಚಾಯಿತಿ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಪಟ್ಟಣದ ಕೆಲವೇ ಕೆಲವು ವರ್ತಕರು ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿ ಇದೀಗ ಹರಾಜು ಪ್ರಕ್ರಿಯೆಗೆ ತಡೆ ಮಾಡುತ್ತಿರುವುದು ಖಂಡನೀಯ. ಪಟ್ಟಣ ಪಂಚಾಯಿತಿಯ ೬೦ ಮಳಿಗೆಗಳ ಬಹಿರಂಗ ಹರಾಜಿಗೆ ಕಳೆದ ೧೦ ತಿಂಗಳುಗಳಿAದ ತಡೆಯಾಜ್ಞೆ ತಂದು ಸರಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿರುವ ಕೆಲವು ವರ್ತಕರ ನಡೆ ಖಂಡನೀಯ ಎಂದರು.

ಸರಕಾರದ ನಿಯಮದ ಪ್ರಕಾರ ೧೨ ವರ್ಷಗಳಿಗೊಮ್ಮೆ ಬಹಿರಂಗ ಹರಾಜು ಆಗಬೇಕು. ಇದನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ ಅವರು, ಪಟ್ಟಣ ಪಂಚಾಯಿತಿಯ ಕೆಲವು ಸದಸ್ಯರುಗಳೇ ಮಳಿಗೆಗಳನ್ನು ಪಡೆದುಕೊಂಡು ಬಾಡಿಗೆ ಹಣವನ್ನು ಪಾವತಿಸದೇ ವಂಚಿಸಿದ್ದಾರೆ. ಈ ಬಗ್ಗೆ ಸಮಿತಿಯವರು ಪಂಚಾಯಿತಿ ಕಚೇರಿಯಲ್ಲಿ ಮಾಹಿತಿ ಪಡೆಯಲು ಮುಂದಾಗುತ್ತಿದ್ದAತೆ ಲಕ್ಷಾಂತರ ರೂ. ಬಾಡಿಗೆಯನ್ನು ಒಮ್ಮೆಲೆ ಪಾವತಿಸಿದ್ದಾರೆ. ಪಂಚಾಯಿತಿ ಆಸ್ತಿಯನ್ನು ಕಾಪಾಡಬೇಕಾದವರೇ ಇಂದು ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಸಮಿತಿಯ ಉಪಾಧ್ಯಕ್ಷ ಟಿ.ಈ. ಸುರೇಶ್ ಮಾತನಾಡಿ, ಶೇ. ೧೮ರ ಮೀಸಲಾತಿ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಶೇಷ ಚೇತನರಿಗೆ ಮಳಿಗೆಗಳನ್ನು ನೀಡಬೇಕಾಗಿದೆ. ಈ ಸಮುದಾಯದವರೂ ಕೂಡ ನೇರವಾಗಿ ಹರಾಜಿನಲ್ಲಿ ಭಾಗವಹಿಸಿ ಮಳಿಗೆಗಳನ್ನು ಪಡೆದು ಯಾರಿಗೂ ಪರಭಾರೆ ಮಾಡದೇ ತಾವೇ ವ್ಯಾಪಾರ ವಹಿವಾಟು ನಡೆಸಬೇಕೆಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಎಸ್.ಎ. ಪ್ರತಾಪ್ ಮಾತನಾಡಿ, ಈ ಬಾರಿಯ ಟೆಂಡರ್‌ನಲ್ಲಿ ೯ ಎಸ್.ಟಿ., ೨ ಎಸ್.ಟಿ., ೧ ಮಳಿಗೆ ವಿಶೇಷ ಚೇತನರಿಗೆ ಮೀಸಲಾಗಿದೆ. ಇವರುಗಳ ಹೆಸರಿನಲ್ಲಿ ಇತರರು ಟೆಂಡರ್‌ನಲ್ಲಿ ಭಾಗವಹಿಸಬಾರದು. ಬಾಡಿಗೆ ಪಡೆದವರೇ ವ್ಯಾಪಾರ ವಹಿವಾಟು ನಡೆಸಬೇಕು. ಈ ಬಗ್ಗೆ ಪಂಚಾಯಿತಿ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಸದಸ್ಯ ಗಣಪತಿ ಮಾತನಾಡಿ, ಈಗಿರುವ ಮೂಲ ಬಾಡಿಗೆದಾರರೇ ಟೆಂಡರ್ ನಿಲುಗಡೆಯಾಗುವ ಮೊತ್ತಕ್ಕೆ ಶೇ. ೫ ರಷ್ಟು ಹೆಚ್ಚು ಮಾಡಿ ಅಂಗಡಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಈಗಾಗಲೇ ೧೦ ತಿಂಗಳು ಕಾಲಹರಣವಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ. ಮತ್ತೆ ಟೆಂಡರ್‌ಗೆ ವಿಳಂಬ ಮಾಡಬಾರದು ಎಂದರು. ಗೋಷ್ಠಿಯಲ್ಲಿ ತಲ್ತರೆ ರವಿ ಇದ್ದರು.