ಮಡಿಕೇರಿ, ಅ. ೧೭: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಈ ಬಾರಿ ಸರ್ವರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದಿದೆ ಎಂದು ಮಡಿಕೇರಿ ದಸರಾ ಉಪಸಮಿತಿಗಳ ಅಧ್ಯಕ್ಷರುಗಳು ಅಭಿಮತ ವ್ಯಕ್ತಪಡಿಸಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಅವರುಗಳು ಈ ಕೆಳಗಿನಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊAಡಿದ್ದಾರೆ.

೮೨ ಕಲಾ ತಂಡಗಳಿಗೆ ಅವಕಾಶ

ಈ ಬಾರಿ ಒಟ್ಟು ೧೨೬ ತಂಡಗಳು ಕಲಾ ಪ್ರದರ್ಶನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ ೮೨ ಕಲಾತಂಡಗಳನ್ನು ದಸರಾ ಸಾಂಸ್ಕೃತಿಕ ಸಮಿತಿಯು ಒಮ್ಮತದಿಂದ ಆಯ್ಕೆ ಮಾಡಿ ಅವಕಾಶ ನೀಡಿದೆ, ರಾಜ್ಯದ ಕಲಾತಂಡಗಳೊAದಿಗೆ ಕೊಡಗಿನ ಸ್ಥಳೀಯ ಕಲಾವಿದರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ನೀಡಲಾಗಿತ್ತು, ಅರ್ಜಿ ಸಲ್ಲಿಸಿದವರಿಗೆಲ್ಲರಿಗೂ ಅವಕಾಶ ನೀಡಲು ಸಮಯದ ತೀವ್ರ ಕೊರತೆ ಕಾಡಿದ್ದರಿಂದಾಗಿ ಆಯ್ಕೆ ಮೂಲಕ ಅವಕಾಶ ನೀಡಲಾಯಿತು ಎಂದು ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಡಾ. ಶಮಿತಾ ಮಲ್ನಾಡ್, ಸಾಧುಕೋಕಿಲ, ಅವಿರ್ಭವ್, ಪದ್ಮನಾಭನ್, ಸರಿಗಮಪ ಕಲಾವಿದರಾದ ಮಹೇಂದ್ರ, ದಿಯಾ ಹೆಗಡೆ, ಪ್ರಿಯಾ ಕುಂದಾಪುರ, ತನುಶ್ರಿ, ಪ್ರಜ್ಞಾ ಮರಾಟೆ, ಅನ್ವಿತ್ ಕುಮಾರ್, ಭೂಮಿಕಾ, ದೀಪಿಕಾ, ಹೆಸರಾಂತ ಭರತನಾಟ್ಯ ಕಲಾವಿದೆ ಕೋಟೇರ ಯಾಮಿನಿ ಮುತ್ತಣ್ಣ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಈ ಬಾರಿ ಕಲಾಸಂಭ್ರಮ ವೇದಿಕೆಯಲ್ಲಿ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ.

ಮಕ್ಕಳ ದಸರಾ, ಮಹಿಳಾ ದಸರಾ, ಜಾನಪದ ದಸರಾ ಯಶಸ್ವಿಯ ಜೊತೆಗೇ ಮೊದಲನೇ ವರ್ಷದ ಕಾಫಿ ದಸರಾವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಿದ ಹೆಮ್ಮೆ ಇದೆ.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ವಿಶೇಷ ಆಸಕ್ತಿಯಿಂದ ಉತ್ತಮ ವೇದಿಕೆ, ಧ್ವನಿ, ಬೆಳಕು ವ್ಯವಸ್ಥೆ ದೊರಕಿದೆ, ಶಾಸಕ ಡಾ. ಮಂತರ್ ಗೌಡ ಅವರು ಖ್ಯಾತ ಕಲಾವಿದರನ್ನು ಆಹ್ವಾನಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಕೂಡ ಕಾರ್ಯಕ್ರಮಗಳ ಸಫಲತೆಗೆ ಕಾರಣವಾಯಿತು.

ಅಂದಾಜು ೮೦೦ಕ್ಕೂ ಅಧಿಕ ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಬಾರಿ ಕಲಾಪ್ರದರ್ಶನಕ್ಕೆ ಅವಕಾಶ ನೀಡಿದ ತೃಪ್ತಿಯಿದೆ ಎಂದು ಅನಿಲ್ ಹೇಳಿದರು.

೬೩ ಕವಿಗಳಿಗೆ ಅವಕಾಶ

ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿಗೆ ಈ ಬಾರಿ ೨೦೦ಕ್ಕೂ ಅಧಿಕ ಕವನಗಳು ಬಂದಿದ್ದು, ಅವುಗಳ ಪೈಕಿ ೬೩ ಕವನಗಳನ್ನು ಆಯ್ಕೆ ಮಾಡಿ ಕವಿಗೋಷ್ಠಿಯಲ್ಲಿ ಅವಕಾಶ ನೀಡಲಾಗಿತ್ತು. ಕೊಡಗು ಮಾತ್ರವಲ್ಲದೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕವಿಗಳಿಗೂ ಅವಕಾಶ ನೀಡುವುದರೊಂದಿಗೆ ಆಯ್ಕೆಗೊಂಡ ಕವನಗಳನ್ನು ಒಳಗೊಂಡ ‘ಕಾವ್ಯೋದ್ಯಾನ’ ಕವನ ಸಂಕಲನವನ್ನು ಹೊರತರಲಾಗಿದೆ. ಕಾರ್ಯಕ್ರಮಕ್ಕೆ ಪ್ರಮುಖ ಆಕರ್ಷಣೆಯಾಗಿ ಖ್ಯಾತ ಸಂಗೀತ ನಿರ್ದೇಶಕ ಕೊಡಗು ಮೂಲದ ಎಂ.ಆರ್. ಚರಣ್ ರಾಜ್ ಅವರು ಆಗಮಿಸಿದ್ದು ಮತ್ತೊಂದು ವಿಶೇಷ. ದಸರಾ ಸಮಿತಿ ಹಾಗೂ ಕವಿಗೋಷ್ಠಿ ಸಮಿತಿ ಹಾಗೂ ಸರ್ವರ ಸಹಕಾರದಿಂದ ಕವಿಗೋಷ್ಠಿಯನ್ನು ಅಚ್ಚುಕಟ್ಟಾಗಿ ನಡೆಸಿದ ತೃಪ್ತಿಯಿದೆ ಎಂದು ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ತಿಳಿಸಿದ್ದಾರೆ.

ಪ್ರಾಮಾಣಿಕವಾಗಿ ನಿರ್ವಹಣೆ

ವಹಿಸಿಕೊಂಡ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಾಗಿದೆ. ವೇದಿಕೆಯಲ್ಲಿ ನವರಾತ್ರಿ ಸಂದರ್ಭ ಪ್ರತಿನಿತ್ಯ ಶ್ರದ್ಧೆಯಿಂದ ಪೂಜೆ ಸಲ್ಲಿಸುವುದರೊಂದಿಗೆ ದಸರಾ ಸಮಿತಿ ಹಾಗೂ ಶಾಸಕರ ಸಹಕಾರದೊಂದಿಗೆ ವೇದಿಕೆಯನ್ನು ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತ ಹೇಳಿದ್ದಾರೆ.

ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ

ಜಿಲ್ಲಾಧಿಕಾರಿಗಳು ದಸರಾ ಸಮಿತಿ ಅಧ್ಯಕ್ಷರಾದ ವೆಂಕಟ್‌ರಾಜಾ ಅವರ ಮಾರ್ಗದರ್ಶನದಲ್ಲಿ ಸ್ವಾಗತ ಸಮಿತಿ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಬೌನ್ಸರ್‌ಗಳನ್ನು ನಿಯೋಜನೆ ಮಾಡಿದ್ದರಿಂದ ವೇದಿಕೆ ಆವರಣದಲ್ಲಿ ಜನ ಸಂದಣಿಯನ್ನು ನಿಯಂತ್ರಿಸಲು ಸ್ವಲ್ಪ ಅನುಕೂಲವಾಯಿತು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ನುಡಿದರು.

೪೨ ವಿಭಾಗಗಳಲ್ಲಿ ಸ್ಪರ್ಧೆ

ಅಲಂಕಾರಕ್ಕೆ ಸಂಬAಧಿಸಿದAತೆ ಪಾನಿಪುರಿ ಅಂಗಡಿ, ಸರ್ಕಾರಿ ಕಟ್ಟಡ, ಸಲೂನ್, ಹೊಟೇಲ್, ಸ್ಟುಡಿಯೋ, ಕಲ್ಯಾಣ ಮಂಟಪ, ದೇವಾಲಯಗಳು ಸೇರಿದಂತೆ ೪೨ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ಅಲಂಕಾರ ಸಮಿತಿ ಅಧ್ಯಕ್ಷ ಮುನೀರ್ ಮಾಚಾರ್ ತಿಳಿಸಿದರು. ೧೯೬ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕೆಲವರಿಗೆ ಬಹುಮಾನಗಳನ್ನು ಈಗಾಗಲೇ ವಿತರಿಸಲಾಗಿದೆ. ಉಳಿದ ಬಹುಮಾನಗಳನ್ನು ತಾ. ೧೮ರ ಬಳಿಕ ವಿಜೇತರಿಗೆ ತಲುಪಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಉತ್ತಮ ಸ್ಪಂದನ ದೊರೆತಿದೆ

ಮಡಿಕೇರಿ ದಸರಾ ಕ್ರೀಡಾಕೂಟಕ್ಕೆ ಸಂಬAಧಿಸಿದAತೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದು, ಉತ್ತಮ ಸ್ಪಂದನ ದೊರೆತಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ತಿಳಿಸಿದ್ದಾರೆ. ರಸ್ತೆ ಓಟ, ಸ್ಲೋ ಬೈಕ್‌ರೇಸ್, ರಿಲೇ, ಕ್ರಿಕೆಟ್, ಕೇರಂ, ಚೆಸ್ ಸೇರಿದಂತೆ ೩೦ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ೮೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಸರ್ವರ ಸಹಕಾರದಿಂದ ಕ್ರೀಡಾಕೂಟ ಉತ್ತಮವಾಗಿ ನಡೆಯಿತು ಎಂದು ಅವರು ಹೇಳಿದರು.

ನಿಯಮ ಪಾಲಿಸಿದ್ದೇವೆ

ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮಂಟಪಗಳಲ್ಲಿ ಕೇವಲ ೧೨ ಸೌಂಡ್ ಬಾಕ್ಸ್ಗಳನ್ನು ಮಾತ್ರ ಬಳಸಬೇಕು. ಲೇಸರ್ ಲೈಟ್, ಸ್ಮೋಕ್‌ಗಳನ್ನು ಬಳಸಬಾರದು ಎಂದು ನಿರ್ಧರಿಸಲಾಗಿತ್ತು. ಅದರಂತೆಯೇ ಮಂಟಪ ಸಮಿತಿಯವರು ನಡೆದುಕೊಂಡಿದ್ದಾರೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್ ತಿಳಿಸಿದ್ದಾರೆ. ಕಥಾ ಸಾರಾಂಶಗಳ ಪ್ರದರ್ಶನದ ಸಂದರ್ಭ ಮಾತ್ರ ಧ್ವನಿವರ್ಧಕದ ಶಬ್ಧದ ಮಿತಿಯನ್ನು ಕೊಂಚ ಹೆಚ್ಚಿಸಲಾಗಿತ್ತೇ ಹೊರತು, ಉಳಿದ ಸಂದರ್ಭಗಳಲ್ಲಿ ಶಬ್ಧದ ಮಿತಿ ನಿಯಂತ್ರಣದಲ್ಲಿತ್ತು. ಪೊಲೀಸ್ ಇಲಾಖೆ ಉತ್ತಮ ಸಹಕಾರ ನೀಡಿದ್ದು, ಮಾಧ್ಯಮ ಹಾಗೂ ಸರ್ವರ ಸಹಕಾರದಿಂದ ಶೋಭಾಯಾತ್ರೆ ಯಶಸ್ವಿಯಾಗಿ ನಡೆದಿದೆ ಎಂದು ಅವರು ನುಡಿದರು.