ಕುಶಾಲನಗರ, ಅ. ೧೭: ಉದ್ಯಮವನ್ನು ಲಾಭದೊಂದಿಗೆ ಸೇವೆಯಂತೆ ಪರಿಗಣಿಸಿ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿದ ಉದ್ಯಮಿ ರತನ್ ಟಾಟಾ. ಅವರು ವಿಶ್ವದ ಇತರ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ ಎಂದು ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಸಭಾಂಗಣದಲ್ಲಿ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ರತನ್ ಟಾಟಾ ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಿಕೊಂಡು ಯಶಸ್ವಿಯಾಗಿ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ್ದಾರೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ, ರತನ್ ಟಾಟಾ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ರತನ್ ಟಾಟಾ ಆರ್ಥಿಕವಾಗಿ ದಿವಾಳಿಯಾಗಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಖರೀದಿಸುವ ಮೂಲಕ ಸಂಸ್ಥೆಯ ಉಳಿವಿಗೆ ಪಣತೊಟ್ಟು ಯಶಸ್ವಿಯಾಗಿದ್ದರು ಎಂದರು.

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಧ್ಯಕ್ಷ ಕೆ.ಎಸ್. ನಾಗೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಉದ್ಯಮಿ ಎಂ.ಕೆ. ದಿನೇಶ್ ಮಾತನಾಡಿದರು.

ಸಹಕಾರ ಸಂಘದ ನಿರ್ದೇಶಕರಾದ ಡಿ.ವಿ. ರಾಜೇಶ್, ಬಿ. ರಾಮಕೃಷ್ಣಯ್ಯ, ಚೇಂಬರ್‌ನ ಖಜಾಂಚಿ ಎನ್.ವಿ. ಬಾಬು, ನಿರ್ದೇಶಕರಾದ ಬಿ. ಅಮೃತ್ ರಾಜ್, ಪುಂಡರೀಕಾಕ್ಷ, ರೂಪ ವಿನೋದ್, ಸೋಮಣ್ಣ ಮತ್ತಿತರರು ಇದ್ದರು.