ಮಡಿಕೇರಿ, ಅ. ೧೬: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿದ ಗಡಿನಾಡ ಅರೆಭಾಷೆ ಉತ್ಸವ ಏರ್ಪಡಿಸಲು ಸಿದ್ಧತೆ ನಡೆದಿದೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿಯಿತ್ತರು. ತಾ. ೨೭ರಂದು ದಕ್ಷಣ ಕನ್ನಡ ಜಿಲ್ಲೆ ಗಡಿಭಾಗ ಬಂದಡ್ಕದಲ್ಲಿ ಮೊದಲ ಗಡಿನಾಡ ಅರೆಭಾಷೆ ಉತ್ಸವ ನಡೆಯಲಿದೆ. ನ. ೧೦ರಂದು ಚೆಯ್ಯಂಡಾಣೆಯಲ್ಲಿ ಹಾಗೂ ಡಿ. ೧ರಂದು ಅರೆಭಾಷೆ ಅಕಾಡೆಮಿ ಸ್ಥಾಪನೆಗೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ತವರೂರು ಮಂಡೆಕೋಲಿನಲ್ಲಿ ಗಡಿನಾಡ ಉತ್ಸವದ ಯಶಸ್ಸಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಗಿದೆ. ಸ್ಥಳೀಯ ಅರೆಭಾಷಿಕರು, ಅರೆಭಾಷಿಕಾ ಅಭಿಮಾನಿಗಳು, ಮುಖಂಡರು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉತ್ಸವ ನಡೆಯಲಿದೆ. ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದೆಂದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಮೂವರು ಸಹ ಸದಸ್ಯರನ್ನು ನಿಯಮದಲ್ಲಿ ಅವಕಾಶ ಇರುವಂತೆ ನೇಮಕ ಮಾಡಲಾಗಿದೆ. ಸಹ ಸದಸ್ಯತ್ವದ ಮೂರು ಸ್ಥಾನಗಳನ್ನು ಕೊಡಗು ಜಿಲ್ಲೆಗೆ ನೀಡಲಾಗಿದೆ. ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಮೋಹನ್ ಪೊನ್ನಚನ, ಅರೆಭಾಷೆ ಜಾನಪದ ಕಲಾವಿದ ಕುದುಪಜೆ ಕೆ. ಪ್ರಕಾಶ್, ಚಿಂತಕ ಹಾಗೂ ಸಾಹಿತಿ ಕೆ.ಸಿ. ಗೋಪಾಲಕೃಷ್ಣ (ಗೋಪಾಲ ಪೆರಾಜೆ) ಇವರುಗಳನ್ನು ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಗುಡ್ಡೆಮನೆ ಅಪ್ಪಯ್ಯ ಗೌಡ ಸಂಸ್ಮರಣೆ ಕಾರ್ಯಕ್ರಮವನ್ನು ತಾ. ೩೧ರಂದು ಮಡಿಕೇರಿಯಲ್ಲಿ ಆಯೋಜಿಸಲಾಗುವುದು. ಅರೆಭಾಷೆ ತ್ರೆöÊಮಾಸಿಕ ಪತ್ರಿಕೆ ‘ಹಿಂಗಾರ’ ಪ್ರಕಟಗೊಳ್ಳದೆ ಉಳಿದಿರುವ ೬ ಸಂಚಿಕೆಗಳ ಮುದ್ರಣ ಕಾರ್ಯಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಪುಸ್ತಕ ಪ್ರಕಟಣೆ ಸಂಶೋಧನಾ ಗ್ರಂಥಗಳ ಮುದ್ರಣ ಕಾರ್ಯಗಳನ್ನು ಮುಂಬರುವ ದಿನಗಳಲ್ಲಿ ಮಾಡಲಾಗುವುದು. ಅಕಾಡೆಮಿಯಿಂದ ಪ್ರತಿ ವರ್ಷ ನೀಡುವ ಗೌರವ ಪ್ರಶಸ್ತಿ ೨೦೨೨ನೇ ಸಾಲಿನಿಂದ ಬಾಕಿಯಿದ್ದು, ಸದ್ಯದಲ್ಲಿಯೇ ೨೦೨೨ ಮತ್ತು ೨೦೨೩ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸದಾನಂದ ಮಾವಾಜಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಚಂದ್ರಶೇಖರ ಪೇರಾಲು, ಚಂದ್ರಾವತಿ ಬಡ್ಡಡ್ಕ, ವಿನೋದ ಮೂಡಗದ್ದೆ, ಸಂದೀಪ ಪೂಳಕಂಡ ಉಪಸ್ಥಿತರಿದ್ದರು.