ಐಗೂರು, ಅ. ೧೭: ಐಗೂರು ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆಯನ್ನು ಹಮ್ಮಿಕೊಳ್ಳ ಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ವಿನೋದ್ ಅವರು ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಪಿಡಿಓ ಪೂರ್ಣ ಕುಮಾರ್ ಅವರು, ಈಗಾಗಲೇ ಸರಕಾರದಿಂದ ವಸತಿ ರಹಿತರಿಗೆ ನೀಡಲು ಉದ್ದೇಶಿಸಿರುವ ಬಸವ ವಸತಿ ಯೋಜನೆಯಲ್ಲಿ ೧೬ ಮನೆಗಳು, ಅಂಬೇಡ್ಕರ್ ವಸತಿ ಯೋಜನೆಯಲ್ಲಿ ೫ ಮನೆಗಳು ಒಟ್ಟು ಸೇರಿ ೨೧ ಮನೆಗಳಿಗೆ ಐಗೂರು ಗ್ರಾಮ ಪಂಚಾಯಿತಿಗೆ ಸರಕಾರದಿಂದ ಮಂಜೂರಾತಿ ಆದೇಶ ಬಂದಿರುತ್ತದೆ. ಆದೇಶದಂತೆ ವಸತಿ ರಹಿತರ ಪಟ್ಟಿಯನ್ನು ತಯಾರು ಮಾಡಲು ಅರ್ಜಿಯನ್ನು ಆಹ್ವಾನಿಸಿದ್ದು, ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದು. ಜಾಗದ ದಾಖಲೆಯು ಊರುಡುವೆ, ಅರಣ್ಯ ಪೈಸಾರಿ, ಪೈಸಾರಿ ಭೂಮಿಯಾಗಿದ್ದು, ಜಾಗವು ಅನಧಿಕೃತವಾಗಿದ್ದರೆ ಮನೆಗಳನ್ನು ಕೊಡಲಾಗುವುದಿಲ್ಲ. ಅರ್ಜಿಯ ಜೊತೆ ಹಕ್ಕುಪತ್ರ ಮತ್ತು ಆರ್.ಟಿ.ಸಿ. ದಾಖಲೆಗಳು ಅಧಿಕೃತ ವಾಗಿರಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು. ಈ ವಿಶೇಷ ಗ್ರಾಮ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ವಿನೋದ್, ಉಪಾಧ್ಯಕ್ಷೆ ಗೌರಮ್ಮ, ಪಿಡಿಓ ಪೂರ್ಣ ಕುಮಾರ್, ಸದಸ್ಯ ರಾದ ಪ್ರಮೋದ್, ರಾಜೇಶ್, ಜೋಯಪ್ಪ, ಜುನೈದ್, ಪಾರ್ವತಿ, ಆಶಾ, ಅಂಗನವಾಡಿ ಕಾರ್ಯಕರ್ತೆ ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.