ಕಣಿವೆ, ಅ. ೧೬: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಜನ ಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ಹಾಗೂ ಸಮಿತಿ ನಾಮನಿರ್ದೇಶಿತ ಸದಸ್ಯರು ಪ್ರಾಮಾಣಿಕವಾಗಿ ಕಾರ್ಯ ತತ್ಪರರಾಗಬೇಕೆಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು.

ಕುಶಾಲನಗರದ ಪುರಸಭಾ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಶಾಲನಗರ ತಾಲೂಕು ಕೇಂದ್ರವಾಗಿ ಘೋಷಣೆಗೊಂಡ ಬಳಿಕ ತಹಶೀಲ್ದಾರ್ ಬಳಿಗೆ ತಾಲೂಕಿನಾದ್ಯಂತ ಅಪಾರ ಮಂದಿ ಸಮಸ್ಯೆಗಳನ್ನು ಹೊತ್ತು ಧಾವಿಸುತ್ತಿದ್ದಾರೆ.

ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರತೀ ಮಂಗಳವಾರ ಕುಶಾಲನಗರದ ತಹಶೀಲ್ದಾರ್ ಕಚೇರಿಗೆ ಧಾವಿಸಿ ಜನಸಾಮಾನ್ಯರ ಬವಣೆಗಳನ್ನು ಅರಿತು ಬಗೆಹರಿಸಬೇಕೆಂದು ಈ ಹಿಂದಿನ ಸಭೆಯಲ್ಲಿ ಕೋರಲಾಗಿತ್ತು. ಆದರೆ ಸಂಬAಧಿತ ಅಧಿಕಾರಿ ಕುಶಾಲನಗರದ ಕಚೇರಿಗೆ ಬಾರದೆ ನಿರ್ಲಕ್ಷ್ಯ ವಹಿಸಿದ ಬಗ್ಗೆ ಸಭಾಧ್ಯಕ್ಷ ಶಶಿಧರ್ ಬೇಸರ ವ್ಯಕ್ತಪಡಿಸಿದರು.

ಕುಶಾಲನಗರದಲ್ಲಿ ತಮಗೆ ಕಾರ್ಯನಿರ್ವಹಿಸಲು ಸೂಕ್ತ ಸ್ಥಳಾವಕಾಶದ ಕೊರತೆ ಇದ್ದುದರಿಂದ ಬರಲಾಗಿಲ್ಲ ಎಂದು ಸಿಡಿಪಿಒ ಸಮಜಾಯಿಷಿಕೆ ನೀಡಿದಾಗ, ತಹಶೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕರ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆ ಬಗೆಹರಿಸಬೇಕೆಂದು ಶಶಿಧರ್ ಹೇಳಿದರು.

ಗ್ಯಾರಂಟಿ ಯೋಜನೆಗಳ ಸಮಿತಿಯ ಸದಸ್ಯರು ತಮ್ಮ ಗ್ರಾಮಗಳು ಹಾಗೂ ಪಂಚಾಯಿತಿಗಳ ಆಯಾಯ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿರುವ ಅರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಅವರಿಗೆ ಸರ್ಕಾರದ ಯೋಜನೆಗಳು ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಬAಧಿಸಿದ ಗ್ರಾ.ಪಂ.ಗಳ ಪಿಡಿಓಗಳು, ಅಂಗನವಾಡಿ ಸಹಾಯಕಿಯರು, ನ್ಯಾಯಬೆಲೆ ಅಂಗಡಿಗಳ ಮಾಲೀಕರುಗಳು ಸಮಿತಿಯ ಸದಸ್ಯರೊಂದಿಗೆ ಸಂಪೂರ್ಣ ಸಹಕರಿಸಬೇಕೆಂದು ಶಶಿಧರ್ ಹೇಳಿದರು.

ಅಲ್ಲದೇ ಪ್ರತೀ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಗಳು ಜರುಗುವ ಸಂದರ್ಭ ಅನುಷ್ಠಾನ ಸಮಿತಿ ಸದಸ್ಯರುಗಳನ್ನು ಕಡ್ಡಾಯವಾಗಿ ಆಹ್ವಾನಿಸುವಂತೆ ಪಿಡಿಓಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳೂ ಆದ ಗ್ಯಾರಂಟಿ ಅನುಷ್ಠಾನ ಸಮಿತಿ ಕಾರ್ಯದರ್ಶಿಗಳಿಗೆ ಶಶಿಧರ್ ನಿರ್ದೇಶನ ನೀಡಿದರು.

ಸಭೆಯಲ್ಲಿ ಆಹಾರ ನಿರೀಕ್ಷಕಿ ಸ್ವಾತಿ ಮಾಹಿತಿ ನೀಡಿ, ಕುಶಾಲನಗರ ತಾಲೂಕಿನಲ್ಲಿ ೫೧ ನ್ಯಾಯ ಬೆಲೆ ಅಂಗಡಿಗಳಿದ್ದು, ೫,೨೦೮ ಅಂತ್ಯೋದಯ, ೬೪,೦೬೦ ಬಿಪಿಎಲ್, ೪,೮೦೪ ಎಪಿಎಲ್ ಪಡಿತರಗಳಿವೆ.

ಶಕ್ತಿ ಯೋಜನೆಯ ಮಡಿಕೇರಿ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಕಿಶೋರ್ ಜಾಧವ್ ಮಾಹಿತಿ ನೀಡಿ, ಶಕ್ತಿ ಯೋಜನೆ ೨೦೨೩ ರ ಜೂನ್ ೧೧ ರಂದು ಚಾಲನೆಗೊಂಡಿದ್ದು, ಒಟ್ಟು ೭೩,೯೦,೬೫೯ ವಯಸ್ಕ ಮಹಿಳಾ ಪ್ರಯಾಣಿಕರು, ೧,೫೨,೨೧೪ ಹೆಣ್ಣು ಮಕ್ಕಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ಸಂಸ್ಥೆಗೆ ರೂ. ೨೯,೦೬,೪೯,೦೨೬ ಆದಾಯ ಬಂದಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ ನಾಯಕ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ರೇಖಾ ಗಣಪತಿ, ಕುಶಾಲನಗರ ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಗ್ಯಾರಂಟಿ ಯೋಜನೆಗಳ ಸಮಿತಿಯ ಉಪಾಧ್ಯಕ್ಷ ಭೀಮಯ್ಯ, ಸದಸ್ಯರಾದ ಆದಂ, ಮಲ್ಲಿಕಾರ್ಜುನ, ರಫೀಕ್ ಖಾನ್, ಹೆಚ್.ಎನ್. ರಾಜಶೇಖರ್, ಸುಹಾದ ಅಶ್ರಫ್, ಕಿಶೋರ್, ವಿವೇಕಾನಂದ, ಎಸ್.ಎ. ಶ್ರೀನಿವಾಸ್, ಕೆ.ಎಸ್. ಕೃಷ್ಣೇಗೌಡ, ಕೂಡಿಗೆ ಅಣ್ಣಯ್ಯ, ಹಾರಂಗಿ ಶ್ರೀನಿವಾಸ್ ಇದ್ದರು.