ಮಡಿಕೇರಿ, ಅ. ೧೬ : ಕೊಡವ ಮಕ್ಕಡ ಕೂಟದ ೯೭ನೇ ಪುಸ್ತಕ, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ ಶ್ರೀ ಕಾವೇರಿ ಸುಪ್ರಭಾತ ಕೊಡವ, ಕನ್ನಡ ಅನುವಾದ ಕೃತಿ ಬಿಡುಗಡೆಗೊಂಡಿತು.

ನಗರದ ಪತ್ರಿಕಾ ಭವನದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೊಡವ, ಕನ್ನಡ ಚಲನಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್, ಸುಪ್ರಭಾತ ಎಂಬ ಶಬ್ದವೇ ಮನಸ್ಸಿಗೆ ಧನಾತ್ಮಕ ಭಾವನೆಯನ್ನು ತುಂಬುತ್ತದೆ. ಕಾವೇರಿ ಕುರಿತು ಕೃತಿ ರಚನೆ ದೇವರ ಕೆಲಸವಾಗಿದ್ದು, ಹಾಡಿನ ರೂಪದಲ್ಲಿರುವುದನ್ನು ಅಕ್ಷರ ರೂಪದಲ್ಲಿ ಹೊರತರಲಾಗಿದೆ. ಇದನ್ನು ಮಕ್ಕಳು ಸುಲಭವಾಗಿ ಕಲಿಯಬಹುದು ಮತ್ತು ಪ್ರತಿಯೊಬ್ಬರಿಗೂ ಕಾವೇರಿಮಾತೆಯ ಹಿನ್ನೆಲೆಯನ್ನು ತಿಳಿಯಲು ಸಹಕಾರಿಯಾಗಲಿದೆ ಎಂದರು.

ಶ್ರೀ ಕಾವೇರಿ ಸುಪ್ರಭಾತ ಪುಸ್ತಕವನ್ನು ರಚಿಸಿರುವ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಮಾತನಾಡಿ, ನಮ್ಮ ದೇಶದ ಪವಿತ್ರ ನದಿಗಳಲ್ಲೊಂದಾದ ಕಾವೇರಿ ಕೇವಲ ಒಂದು ನದಿಯಲ್ಲ. ಅದು ಪ್ರತ್ಯಕ್ಷವಾದ ಜಲದೇವತೆ, ಆ ಪವಿತ್ರ ದೇವಿಯ ಮಹಿಮೆಯನ್ನು ಹಾಡಿನ ಮೂಲಕ ವರ್ಣಿಸಲಾಗುತ್ತಿತ್ತು. ಇದೀಗ ಅದಕ್ಕೆ ಅಕ್ಷರ ರೂಪ ನೀಡಲಾಗಿದೆ ಎಂದರು.

ಶ್ರೀ ಕಾವೇರಿ ಸುಪ್ರಭಾತ ಪುಸ್ತಕವು ಕೊಡವ ಹಾಗೂ ಕನ್ನಡ ಅನುವಾದ ಪುಸ್ತಕವಾಗಿದ್ದು, ೨೦೦೪ ರಲ್ಲಿ ಸಿ.ಡಿ ರೂಪದಲ್ಲಿ ಈ ಸುಪ್ರಭಾತವನ್ನು ರವೀಂದ್ರ ಕೆ.ಸುಬ್ರಹ್ಮಣ್ಯ ಹೊರತಂದಿದ್ದರು. ನಂತರದ ದಿನಗಳಲ್ಲಿ ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ಹೊರತರಬೇಕೆಂಬ ಆಶಯ ನಮ್ಮದಾಗಿತ್ತು. ಇದೀಗ ಕೊಡವ ಮಕ್ಕಡ ಕೂಟದ ಸಹಕಾರದೊಂದಿಗೆ ಪುಸ್ತಕವನ್ನು ಹೊರತರಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೂಲ ಪ್ರತಿಯನ್ನು ಕೊಡವ ಭಾಷೆಯಲ್ಲಿ ಬರೆಯಲಾಗಿದ್ದು, ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಇದು ೪೫ ಚರಣಗಳನ್ನು ಒಳಗೊಂಡಿದ್ದು, ಕಾವೇರಿ ತುಲಾ ಸಂಕ್ರಮಣದ ದಿನವಾದ ಅ.೧೭ ರಂದು ತಲಕಾವೇರಿಯಲ್ಲಿ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಜನರ ಅಪೇಕ್ಷೆ ಮೇರೆಗೆ ಮತ್ತಷ್ಟು ಪುಸ್ತಕಗಳು ಮರು ಮುದ್ರಣವಾಗಲಿದೆ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕನ್ನಡಿಗರಿಗೆ ಓದಲು ಸಹಕಾರಿಯಾಗುವ ನಿಟ್ಟಿನಲ್ಲಿ ಶ್ರೀ ಕಾವೇರಿ ಸುಪ್ರಭಾತ ಪುಸ್ತಕವವನ್ನು ಕನ್ನಡದಲ್ಲೂ ಅನುವಾದ ಮಾಡಲಾಗಿದ್ದು, ಒಟ್ಟು ೫೦೦ ಪ್ರತಿಗಳನ್ನು ಮುದ್ರಣ ಮಾಡಲಾಗಿದೆ. ಅವುಗಳಲ್ಲಿ ೨೫೦ ಪುಸ್ತಕವನ್ನು ತಲಕಾವೇರಿಯಲ್ಲಿ ವಿತರಿಸಲಾಗುವುದು, ಮತ್ತಷ್ಟು ಪುಸ್ತಕದ ಅಗತ್ಯವಿದ್ದಲ್ಲಿ ಮುದ್ರಿಸಲಾಗುವುದೆಂದರು.