ಸೋಮವಾರಪೇಟೆ, ಅ. ೧೬ : ಮಕ್ಕಳ ಸರ್ವಾಂಗೀಣ ಬೆಳವಣಿಗೆಗಳ ಬಗ್ಗೆ ವಿಶೇಷ ಆಸಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾವು ಪ್ರತಿಷ್ಠಾನದಿಂದ ಆಯೋಜನೆ ಗೊಂಡಿರುವ ‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’ ಶಿಬಿರ ತಾ. ೧೭ರಂದು (ಇಂದು) ಸಮಾರೋಪಗೊಳ್ಳಲಿದೆ.

ಇಲ್ಲಿನ ಮಹಿಳಾ ಸಮಾಜದಲ್ಲಿ ಕಳೆದ ಒಂದು ವಾರದಿಂದ ಕೊಡಗು ಮಕ್ಕಳ ಗ್ರಂಥಾಲಯ, ಕೊಡಗು ಮಕ್ಕಳ ಹಕ್ಕುಗಳ ಕ್ಲಬ್, ನಾವು ಪ್ರತಿಷ್ಠಾನದ ವತಿಯಿಂದ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’ ಕಾರ್ಯಕ್ರಮ ತಾ. ೧೭ರಂದು ಬೆಳಿಗ್ಗೆ ೧೦ ಗಂಟೆಗೆ ಸಮಾರೋಪಗೊಳ್ಳುತ್ತಿದ್ದು, ಪ್ರತಿದಿನ ವೈವಿಧ್ಯಮಯ ವಿಷಯಗಳನ್ನು ಕಲಿತ ವಿದ್ಯಾರ್ಥಿಗಳು, ಇಂದು ಪತ್ರಿಕೆಗಳ ಕಾರ್ಯನಿರ್ವಹಣೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಪಟ್ಟಣದ ಪತ್ರಿಕಾ ಭವನಕ್ಕೆ ಭೇಟಿ ನೀಡಿದರು.

ಜಿಲ್ಲಾ ಹಾಗೂ ರಾಜ್ಯಮಟ್ಟದ ಕನ್ನಡ, ಇಂಗ್ಲೀಷ್ ದಿನಪತ್ರಿಕೆಗಳ ಮುದ್ರಣ, ಪ್ರಸರಣ ಹಾಗೂ ಓದುಗರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ವಿವರ ಕೇಳಿ ತಿಳಿದುಕೊಂಡರು.

ಪತ್ರಿಕೋದ್ಯಮದಲ್ಲಿ ಪತ್ರಕರ್ತರ ಕಾರ್ಯಚಟುವಟಿಕೆಗಳ ಬಗ್ಗೆ ಪತ್ರಕರ್ತರಾದ ವಿಜಯ್ ಹಾನಗಲ್, ರವಿ, ಲೋಕೇಶ್, ದುಷ್ಯಂತ್ ಅವರುಗಳೊಂದಿಗೆ ಚರ್ಚಿಸಿದರು. ಪುಟಾಣಿ ಮಕ್ಕಳಲ್ಲಿ ಪತ್ರಿಕಾರಂಗದ ಬಗ್ಗೆ ಆಸಕ್ತಿ ಮೂಡಿಸಿದ, ನಾವು ಪ್ರತಿಷ್ಠಾನದ ಸ್ಥಾಪಕರಾದ ಗೌತಮ್ ಕಿರಗಂದೂರು, ಸುಮನ ಮ್ಯಾಥ್ಯು ಅವರುಗಳು ಶಿಬಿರದಲ್ಲಿ ಮಕ್ಕಳು ತೊಡಗಿಸಿಕೊಂಡ ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ದೈನಂದಿನ ವಿದ್ಯಮಾನ ಗಳೊಂದಿಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಹಲವಷ್ಟು ಮಾಹಿತಿಗಳು ಪತ್ರಿಕೆಗಳಲ್ಲಿದ್ದು, ಚಾಕಲೇಟ್‌ಗೆ ಖರ್ಚು ಮಾಡುವ ಹಣದಲ್ಲಿ ಒಂದಿಷ್ಟು ಉಳಿಸಿ ಪ್ರತಿಯೋರ್ವ ವಿದ್ಯಾರ್ಥಿಯೂ ದಿನ ಪತ್ರಿಕೆ ಓದುವಂತಾಗಬೇಕು. ಈ ನಿಟ್ಟಿನಲ್ಲಿ ನಾವು ಪ್ರತಿಷ್ಠಾನ ಸಂಸ್ಥೆ ನಡೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಪತ್ರಕರ್ತರು ಪ್ರಶಂಸಿಸಿದರು.