ಮಡಿಕೇರಿ, ಅ. ೧೭ : ಚೂರಲ್‌ಮಲ ಪ್ರದೇಶದಲ್ಲಿ ತನ್ನ ಸಹೋದರ ಹಾಗೂ ಮಕ್ಕಳೊಂದಿಗೆ ರಕ್ಷಣೆ ಹೊಂದಿದ ಆ ರಾತ್ರಿಯನ್ನು ನೆನೆದು ಈಗಲೂ ಅದರಿಂದ ಹೊರಬರದ ಅಮ್ಮ, ಮತ್ತೊಂದೆಡೆ ಅದ್ಭುತವಾಗಿ ಪಾರಾದ ಅಮ್ಮ, ಮಗಳು. ನಲವತ್ತು ದಿನ ಪ್ರಾಯದ ಪುಟ್ಟ ಕಂದಮ್ಮ. ಆರು ವಯಸ್ಸಿನ ಪ್ರಾಯದ ಮೊಹಮದ್ ಅಯಾನ್, ತನ್ಸೀರ, ಆಕೆಯ ಸಹೋದರ ಹಾಗೂ ಅಮ್ಮ ಆಮೀನ, ಅಜ್ಜಿ ಫಾತುಮ್ಮಾ ಸೇರಿ ಒಟ್ಟು ಆರು ಮಂದಿ ಆ ಮನೆಯಲ್ಲಿದ್ದ ಸದಸ್ಯರು.. ಇದೊಂದು ಮನಕಲಕುವ ಕಥೆ...

ತಡರಾತ್ರಿ ಸುಮಾರು ೧.೩೦ರ ಸಮಯದಲ್ಲಿ ಭಾರಿ ಶಬ್ದದಿಂದ ದಿಢೀರನೇ ಎಚ್ಚರ ಗೊಂಡಾಗ ರಭಸದಿಂದ ಹರಿಯುತ್ತಿರುವ ನೀರು ಇವರ ಮನೆಯನ್ನು ಸುತ್ತುವರಿದಿತ್ತು.

ನೋಡನೋಡುತ್ತಲೇ ತನ್ಸೀರ, ಅಮ್ಮ, ಅಜ್ಜಿ ಇತರ ಸದಸ್ಯರು ಸೆಳೆತಕ್ಕೆ ಸಿಲುಕಿದ್ದರು. ತನ್ಸೀರ ತನ್ನ ಪುಟ್ಟ ಕಂದನನ್ನು ಎದೆಗವಚಿ ಹಿಡಿದು ನೀರಿನೊಂದಿಗೆ ಕೊಚ್ಚಿಹೋಗುತ್ತಿರುವಾಗ ಇನ್ನೇನು ನಮ್ಮ ಜೀವ ಇಲ್ಲಿಗೆ ಕೊನೆಗೊಂಡಿತು ಎಂದು ಮಗುವನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಿ ಹಿಡಿಯುತ್ತಾ ಕೊಚ್ಚಿ ಹೋಗುತ್ತಿದ್ದ ಅವಳ ಕೈಗೆ ಏನೋ ಸಿಕ್ಕಿದಂತೆ ಭಾಸವಾಗಿ ಅದನ್ನು ಬಿಗಿಯಾಗಿ ಹಿಡಿದು ಮತ್ತೊಂದು ಕೈಯಲ್ಲಿ ಮಗುವನ್ನು ಗಟ್ಟಿಯಾಗಿ ಹಿಡಿದು ನೇತಾಡತೊಡಗಿದಳು. ಅದು ಹತ್ತಿರದ ಮನೆಯೊಂದರ ಟೆರೇಸಿನ ಕಬ್ಬಿಣವಾಗಿತ್ತು.

ಆದರೆ ಅಷ್ಟೊತ್ತಿಗಾಗಲೇ ನೀರಿನ ರಭಸ ಮತ್ತಷ್ಟು ಹೆಚ್ಚಾಯಿತು, ಪರಿಣಾಮ ಕಂದಮ್ಮ ಕೈಯಿಂದ ಜಾರಿ ನೀರಿನ ಸೆಳೆತಕ್ಕೆ ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿ ಕಂದಮ್ಮನನ್ನು ಮತ್ತಷ್ಟು ಬಿಗಿಯಾಗಿ ಹಿಡಿದ ಅಮ್ಮ ತನ್ಸೀರಳ ಕೈ ಹೊಡೆದು ರಕ್ತ ಸೋರಿದರೂ ಗಟ್ಟಿಯಾಗಿ ಹಿಡಿದುಕೊಂಡರು. ನೋಡ ನೋಡುತ್ತಿದ್ದಂತೆಯೇ ಅಮ್ಮ, ಅಜ್ಜಿ, ತನ್ನ ಆರು ವರ್ಷ ಪ್ರಾಯದ ಮಗ ಅಯಾನ್ ಕೊಚ್ಚಿ ಹೋಗುತ್ತಿರುವ ದೃಶ್ಯವನ್ನು ನೋಡಿ ರಕ್ಷಿಸಲು ಜೋರಾಗಿ ಕೂಗಿ ಅತ್ತರೂ ರಕ್ಷಿಸಲೂ ಯಾರು ಬರಲಿಲ್ಲ. ಕಾರಣ ಅಕ್ಕಪಕ್ಕದ ಎಲ್ಲರೂ ಆ ಭೀಕರ ಪ್ರವಾಹದಲ್ಲಿ ಸಿಲುಕಿದ್ದರು..

ಪವಾಡ ಸದೃಶದಿಂದ ಪಾರಾದ ಅಯಾನ್

ಇದೇ ಸಂದರ್ಭ ಮಗ ಅಯಾನ್ ಪ್ರವಾಹದ ಸೆಳೆತಕ್ಕೆ ಸಿಲುಕಿ ಸುಮಾರು ನೂರು ಮೀಟರ್ ದೂರಕ್ಕಸೆಯಲ್ಪಟ್ಟು ಅಲ್ಲೇ ಇದ್ದ ಮನೆಯೊಂದರ ಬಾವಿಗೆ ಕಟ್ಟಲ್ಪಟ್ಟ ಕಬ್ಬಿಣದ ಸರಳನ್ನು ಗಟ್ಟಿಯಾಗಿ ಹಿಡಿದುಕೊಂಡ ಸ್ಥಿತಿಯಲ್ಲಿ ಯಾರೋ ಪುಣ್ಯಾತ್ಮರು ಆತನನ್ನು ರಕ್ಷಿಸಿದರು..

ಹೀಗೆ ತನ್ನ ಮಕ್ಕಳು ಬಚಾವಾಗಿದ್ದು ಸಂತೋಷ ಒಂದು ಕಡೆಯಾಗಿದ್ದರೆ, ಮತ್ತೊಂದು ಕಡೆ ತನ್ನ ಪ್ರೀತಿಯ ಉಮ್ಮಾಮ ಸಹಿತ ಕುಟುಂಬದ ಸದಸ್ಯರು ಕೊಚ್ಚಿಹೋದ ಆಘಾತದಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದಾಳೆ..

ತಾನು ಮತ್ತು ಅಮ್ಮ ಬಚಾವಾಗಿದ್ದು ಹೀಗೆ

ಅರ್ಧರಾತ್ರಿ ಸುಮಾರು ಒಂದೂವರೆ ಸಮಯ ಘೋರಶಬ್ದದಿಂದ ಎಚ್ಚೆತ್ತ ಅಮ್ಮ ಮತ್ತು ಮಗಳು ಏನಾಗಿರಬಹುದು ಎಂದು ಮನೆಯ ಬಾಲ್ಕನಿಯಲ್ಲಿ ಮಲಗಿದ್ದ ಮಗಳನ್ನು ಅಲ್ಲೇ ಬಿಟ್ಟು ಕೆಳಗೆ ಇಳಿದು ಬಂದು ಅಡುಗೆ ಮನೆಗೆ ಕಾಲಿಡುವಷ್ಟರಲ್ಲಿ ಕಾಲಿಗೆ ಏನೋ ತಗುಲಿದಂತಾಗಿ ನೋಡಿದಾಗ ಭಾರೀ ಗಾತ್ರದ ಮರ ಸಹಿತ ನೀರು ಮೇಲಕ್ಕೆ ಏರುತ್ತಿತ್ತು, ತಕ್ಷಣ ಮೇಲೆ ಹತ್ತುವಷ್ಟರಲ್ಲಿ ಮತ್ತೊಂದು ಶಬ್ಧದೊಂದಿಗೆ ರಭಸವಾಗಿ ಹೊಳೆಯ ನೀರು ನೆಲ ಅಂತಸ್ತನ್ನು ಪೂರ್ಣವಾಗಿ ಆವರಿಸಿ, ಕಲ್ಲು ಬಂಡೆಗಳ ಹೊಡೆತಕ್ಕೆ ಗೋಡಗಳು ಬೀಳತೊಡಗಿದ್ದವು. ಹೇಗೋ ಆ ಕತ್ತಲೆಯಲ್ಲಿ ತಡಕಾಡಿ ಮೇಲಿನ ಅಂತಸ್ತಿಗೆ ತಲುಪಿದಾಗ ಮೇಲ್ಛಾವಣಿ ಕುಸಿಯಿತು, ಇನ್ನೇನು ಮಗಳನ್ನು ಜೋರಾಗಿ ಕೂಗಿ ಕರೆದು ಕೋಣೆಯ ಬಾಗಿಲು ತೆರೆಯಲು ಹೇಳಿದ ಅಮ್ಮ, ಕೆಸರಿನಲ್ಲಿ ಅರ್ಧದೇಹ ಸಿಲುಕಿಹೋಗಿದ್ದವು. ಮಗಳು ಬಾಗಿಲನ್ನು ತೆಗೆಯಲು ಹರಸಾಹಸ ಪಡುತ್ತಿದ್ದಂತೆ ಬಾಗಿಲಿಗೆ ಸೇರಿದ್ದ ಗೋಡೆ ಕುಸಿಯಿತು. ಮಗಳು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಕೈಯಲ್ಲಿದ್ದ ಮೊಬೈಲ್ ಟಾರ್ಚ್ ಬೆಳಕಿನ ಮೂಲಕ ನೋಡಿದಾಗ ಅಮ್ಮ ಕುತ್ತಿಗೆಯತ್ತ ಕೆಸರಿನಲ್ಲಿ ಮುಳುಗಿ ತನ್ನ ಇಪ್ಪತ್ತರ ಪ್ರಾಯದ ಮಗಳೊಂದಿಗೆ ಮಗಳೇ ನೀನು ಇಲ್ಲಿಂದ ಪಾರಾಗು ನನ್ನನ್ನು ನೋಡಬೇಡ, ನೀನು ತಪ್ಪಿಸಿಕೊ ಎಂದು ಇದ್ದ ಶಕ್ತಿಯಲ್ಲಿ ಹೇಳುತ್ತಿದ್ದಂತೆ ಮಗಳು ಕೂಗುತ್ತಾ ತನ್ನ ಮೊಬೈಲ್‌ನಲ್ಲಿದ್ದ ಸಿಕ್ಕ ಸಂಖ್ಯೆಗಳಿಗೆ ಕರೆ ಮಾಡಿದ್ದರೂ ಎಲ್ಲರೂ ಅಸಹಾಯಕರಾಗಿದ್ದರು. ಕರೆಮಾಡಿದ್ದ ಇತರ ಮೊಬೈಲ್‌ಗಳು ನೆಟ್‌ವರ್ಕ್ ಕ್ಷೇತ್ರದಿಂದ ದೂರ ಹೋಗಿದ್ದವು. ಇನ್ನೂ ತಡಮಾಡದೇ ಅಮ್ಮನ ಕೈಯೊಂದನ್ನು ಹೇಗೋ ಹಿಡಿದು ಮೇಲಕ್ಕೆಳೆಯಲು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನೇನು ಅಮ್ಮ ಕೈಗೆ ಸಿಗದು ಎಂದು ಜೋರಾಗಿ ಅಳುತ್ತಾ ಯಾರಾದರೂ ಬನ್ನಿ ಎಂದು ಆ ಇಪ್ಪತ್ತರ ಪ್ರಾಯದ ಮಗಳ ಕರುಣಾಜನಕ ಸ್ಥಿತಿಯನ್ನು ಕಂಡೋ ಏನೋ ನೀರಿನ ಸೆಳೆತ ತುಸು ಕಡಿಮೆಯಾದಂತಾಯಿತು. ತಕ್ಷಣ ಅಮ್ಮನನ್ನು ಹೇಗೋ ಎಳೆದು ಮನೆಯ ಹಿಂಭಾಗದ ತುಸು ಎತ್ತರದ ಪ್ರದೇಶಕ್ಕೆ ಹೋಗಿ ನಿಂತರು. ಅಷ್ಟೊತ್ತಿಗಾಗಲೇ ಆ ಕತ್ತಲೆಯ ಕೂಪದಲ್ಲಿ ಒಂದು ಮಗುವಿನ ಅಳು ಕೇಳಿಬರತೊಡಗಿತು, ತನ್ನ ಮೊಬೈಲ್ ಟಾರ್ಚ್ ಬೆಳಕಿನ ನೋಡಿದಾಗ ಚಿಕ್ಕ ಬಾಲಕನೊಬ್ಬ. ಇವರ ಮನೆಯ ಬಾವಿಯ ಪೈಪನ್ನು ಹಿಡಿದು ನೇತಾಡುತ್ತಿದ್ದ. ಅದನ್ನು ನೋಡಿ ಏನೂ ಮಾಡಲಾಗದೇ ನೀನು ಹೆದರಬೇಡ ಅದರ ಬಾವಿ ಸೇದುವ ಸರಳನ್ನು ಗಟ್ಟಿಯಾಗಿ ಹಿಡಿದುಕೊ ಏನೂ ಆಗಲ್ಲ ಎಂದು ಧೈರ್ಯ ತುಂಬಿದ ಹೆಣ್ಣು ಮಗಳು. ಸುತ್ತಲೂ ದೃಷ್ಟಿ ಹಾಯಿಸಿದಾಗ ಅಮ್ಮ ಮಗಳು ಬೆಚ್ಚಿ ಬಿದ್ದಿದ್ದರು. ಮನೆ, ಮಠ ಅಂಗಡಿಗಳೇ ತುಂಬಿದ್ದ ಆ ಪ್ರದೇಶ ಉಕ್ಕಿ ಹರಿಯುತ್ತಿರುವ ಸಾಗರದಂತೆ ಭಯಾನಕವಾಗಿತ್ತು.

ಅಷ್ಟೊತ್ತಿಗಾಗಲೇ ಸ್ವಲ್ಪ ದೂರದಲ್ಲಿದ್ದ ಅಳಿದುಳಿದ ಮನೆಯೊಂದರಿAದ. ಜೋರಾಗಿ ಕೂಗುತ್ತಿರುವ ಶಬ್ದ ಕೇಳಿತು ಮತ್ತೆ ಮೊಬೈಲ್ ಬೆಳಕನ್ನು ಚೆಲ್ಲಿದಾಗ ಒಡೆದ ಗೋಡೆಗಳ ಮಧ್ಯೆ ನೇತಾಡುತ್ತಿರುವ ಮಹಿಳೆಯೊಬ್ಬರು ಒಂದು ಕೈಯಲ್ಲಿ ಪುಟ್ಟ ಕೂಸೊಂದನ್ನು ಹಿಡಿದು ಮತ್ತೊಂದು ಕೈಯಲ್ಲಿ ಟೆರೆಸ್‌ವೊಂದರ ರಾಡನ್ನು ಹಿಡಿದು ಯಾರಾದರೂ ಬನ್ನಿ ನನ್ನ ಮಗು ಅಲುಗಾಡುತ್ತಿಲ್ಲ ಎಂದು ಕೂಗುತ್ತಿದ್ದರು..

ಇವರಿಗಿಂತ ತುಸು ಎತ್ತರದ ಪ್ರದೇಶದಲ್ಲಿದ್ದ ಅವರನ್ನು ರಕ್ಷಿಸಲಂತೂ ಅಸಾಧ್ಯದ ಮಾತು, ಅಂತೂ ಅವರಿಗೆ ಅಕ್ಕಾ ಹೆದರಬೇಡಿ ಯಾರಾದರೂ ರಕ್ಷಿಸಲು ಬರುತ್ತಾರೆ ಎಂದು ಧೈರ್ಯ ತುಂಬಿದ್ದರು.

ನಂತರ ತುಸು ಹೊತ್ತು ಹೀಗೆ ಗಮನಿಸಿದಾಗ ಪ್ರಳಯದಿಂದ ಪಾರಾದ ಟಾರ್ಚ್ ಮೊಬೈಲ್ ಬೆಳಕಿನ ಸಹಾಯದಿಂದ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದರು. ಆಗ ಅವರೊಂದಿಗೆ ನಾವು ನಮ್ಮನ್ನು ರಕ್ಷಿಸಲು ಯಾರಾದರೂ ಬರಬಹುದೇ ದೂರದಲ್ಲಿದ್ದವರನ್ನು ಕೂಗಿ ಕೇಳಿದರೂ ಅದು ಅವರಿಗೆ ಕೇಳಲೇ ಇಲ್ಲ..

ಮಣ್ಣಿನ ಕೆಸರಿನಲ್ಲಿ ಮಿಂದು ನಡೆಯಲು ಆಗದೇ ಇಲ್ಲಿಂದ ಹೇಗೋ ಪಾರಾಗಬೇಕು ಪರಸ್ಪರ ಮಾತನಾಡುತ್ತಾ ಅಮ್ಮ ಮಗಳೊಂದಿಗೆ ನೀನು ನನ್ನ ಚಿಂತೆ ಮಾಡಬೇಡ ಹೇಗಾದರೂ ಪಾರಾಗು ಮಗಳೇ ಎಂದಾಗ ಅವರ ಕೈಯನ್ನು ಬಿಗಿಯಾಗಿ ಹಿಡಿದು ಮಗಳು ಇಲ್ಲಮ್ಮಾ ನೀವು ಪಾರಾಗಿ ಅಂತ ಜೋರಾಗಿ ಅಳತೊಡಗಿದ್ದರು. ಆದರೆ ಯಾರಿಗೂ ಕೇಳಲಿಲ್ಲ' ಅಷ್ಟರಲ್ಲಿ ನೀರಿನ ಹರಿವು ಕಡಿಮೆಯಾದಂತೆ ನೀರಿನ ಮಟ್ಟ ಕಡಿಮೆಯಾಯಿತು.

ದೇವರೇ "ಹೇಗೋ ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ತೆರಳಲು ಮೆಲ್ಲನೆ ನಡೆಯಲು ಅಣಿಯಾಗುತ್ತಿದ್ದಂತೆ, ಅಕ್ಕಾ ನನ್ನ ಕೈ ನೋಯುತ್ತಿದೆ ನನ್ನಿಂದ ಸಾಧ್ಯವಿಲ್ಲ ನನ್ನನ್ನು ಹಿಡಿಯಿರಿ ಎಂದು ಬಾಲಕನ ಕೂಗು ಕೇಳಿ ಮನಸ್ಸು ಕರಗುತ್ತದೆ,

ಏನಾದರೂ ಆಗಲಿ ಈ ಹುಡುಗನನ್ನು ರಕ್ಷಿಸಬೇಕೆಂದು ತಮ್ಮ ಜೀವ ಪಣಕಿಟ್ಟು ಪರಸ್ಪರ ಕೈಗಳನ್ನು ಹಿಡಿದು ಆ ಹುಡುಗನಿದ್ದ ಬಾವಿಯ ಸಮೀಪಕ್ಕೆ ತೆರಳುತ್ತಲೇ ಅಮ್ಮ ಮಗಳ ಹಿಡಿತ ತಪ್ಪಿಹೋಗಿತ್ತು, ಇನ್ನೇನು ಇಲ್ಲಿಗೆ ಆಯಸ್ಸು ಮುಗೀತು ಎನ್ನುವಷ್ಟರಲ್ಲಿ ಪ್ರವಾಹದಿಂದ ಹರಿದು ಬಂದ ಮರದ ಕೊಂಬೆ ಕೈ ತಗುಲಿತು, ಅದನ್ನು ಗಟ್ಟಿಯಾಗಿ ಹಿಡಿದು ಉಸಿರು ಬಿಟ್ಟ ಅವರ ಹೋದ ಜೀವ ಮರಳಿ ಬಂದAತಾಯಿತು.

ನಂತರ ಹೇಗೋ ಆ ಬಾಲಕನನ್ನು ಎತ್ತಿಕೊಂಡರು. ಪಾಪ ಅವನ ನಡುಗುತ್ತಿರುವ ಆ ಪುಟ್ಟ ಕೈಗಳಿಂದ ರಕ್ತದೋಕುಳಿ, ಆದರೆ ಆ ಹುಡುಗನ ಕೈಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ತೆರಳಲು ನೋಡುತ್ತಿದ್ದಂತೆ ದಿಢೀರನೇ ಮಣ್ಣು ಮಿಶ್ರಿತ ಕೆಸರಿನಿಂದ ಹೆಚ್ಚಾಗಿ ನಡೆಯಲು ಸಾಧ್ಯವಾಗದೆ ಪ್ರವಾಹದ ಸೆಳೆತದ ಮಧ್ಯೆ ಹರಿದುಬಂದ ಮರಗಳ ಕೊಂಬೆಗಳನ್ನು ಹಿಡಿದು ಸ್ವಲ್ಪ ಎತ್ತರಕ್ಕೆ ತಲುಪಿದಾಗ ಒಂದು ಕೈಯ್ಯಲ್ಲಿ ಪುಟ್ಟ ಮಗುವನ್ನು ಹಿಡಿದು ಮನೆ ಟೆರೇಸೊಂದರ ರಾಡೊಂದನ್ನು ಹಿಡಿದು ಯಾರಾದರೂ ನಮ್ಮನ್ನು ರಕ್ಷಿಸಿ ನನ್ನ ಮಗು ಅಲುಗಾಡುತ್ತಿಲ್ಲ ಎಂದು ಜೋರಾಗಿ ಅಳುತ್ತಿತ್ತು.. ತಕ್ಷಣ ಇವರು ರಕ್ಷಿಸಿದ ಆ ಮಗು ಅಮ್ಮಾ ಎಂದು ಜೋರಾಗಿ ಅಳತೊಡಗಿತು. ಮಗನೇ ಎಂದು ಕರೆದ ಅಮ್ಮನ ಧ್ವನಿ" ಆಗಲೇ ಇವರಿಗೆ ಅರಿವಾದದ್ದು, ಈ ಬಾಲಕ ಆಕೆಯ ಮಗ ಅಯಾನ್, ಅಕ್ಕಾ ನೀವೇನು ಹೆದರಬೇಡಿ ನಿಮ್ಮ ಮಗ ನಮ್ಮೊಂದಿಗಿದ್ದಾನೆ. ಇನ್ನೇನು ಬೆಳಕು ಹರಿಯುತ್ತೆ ಯಾರಾದರೂ ನಿಮ್ಮನ್ನು ರಕ್ಷಿಸದೇ ಇರಲಾರರು ಎಂದು ಸಮಾಧಾನ ಮಾಡಿ ಮೆಲ್ಲನೆ ಮುಂದುವರಿದರು.

ಅಷ್ಟೊತ್ತಿಗಾಗಲೇ ಬೆಳಕು ಹರಿಯತೊಡಗಿದ್ದರಿಂದ ರಕ್ಷಣಾ ಕಾರ್ಯಕರ್ತರು ಬರುತ್ತಿರುವುದನ್ನು ಕಂಡು ಸಮಾಧಾನವಾದರೂ ಇವರು ಇದ್ದ ಸ್ಥಳಕ್ಕೆ ಬರಲು ಕಷ್ಟಕರವಾಗಿತ್ತು, ಬಹಳ ಎಚ್ಚರಿಕೆಯಿಂದ ಸುರಕ್ಷಿತ ಸ್ಥಳಕ್ಕೆ ತಲುಪಿದೆವು,. ನಮ್ಮಂತೆ ಬಹಳಷ್ಟು ಕುಟುಂಬಗಳು ಪಾರಾಗಿ ಅಲ್ಲಿಗೆ ತಲುಪಿದ್ದಾರೆ ಎಂದು ತಿಳಿಯಿತು.

ಸಂಗ್ರಹ ವರದಿ : ಎಂ.ಎ. ಅಬ್ದುಲ್ಲಾ, ಮಡಿಕೇರಿ