ಸಿದ್ದಾಪುರ, ಅ. ೧೭: ಹುಲಿ ದಾಳಿಗೆ ಬೀಡಾಡಿ ಗಬ್ಬದ ಹಸು ಹಾಗೂ ಹೊಟ್ಟೆಯೊಳಗಿದ್ದ ಕರು ಬಲಿಯಾದ ಘಟನೆ ಮಾಲ್ದಾರೆ ಸಮೀಪದ ಬಾಣಂಗಾಲದಲ್ಲಿ ನಡೆದಿದೆ.

ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಬಾಡಗ ಬಾಣಂಗಾಲದ ಗುಡ್ಡಂಡ ಕಿಟ್ಟು ಎಂಬುವವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಗಬ್ಬದ ಬೀಡಾಡಿ ಹಸು ಹುಲಿ ದಾಳಿಗೆ ಸಾವನಪ್ಪಿದೆ. ಕಾರ್ಮಿಕರು ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದ ಒಳಗೆ ಹಸುವಿನ ಕಳೇಬರ ಕಂಡುಬAದಿದೆ. ಹಸುವಿನ ಮೃತದೇಹದ ಅರ್ಧ ಭಾಗ ಹುಲಿಗೆ ಆಹಾರವಾಗಿದ್ದು, ಹೊಟ್ಟೆಯೊಳಗಡೆ ಯಿದ್ದ ಕರು ಹೊರಬಂದು ಸತ್ತು ಬಿದ್ದಿದೆ. ಸ್ಥಳಕ್ಕೆ ತಿತಿಮತಿ ವಲಯ ಚೆನ್ನಂಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಮತ್ತು ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.

ಬಾಡಗ ಬಾಣಂಗಾಲದಲ್ಲಿ ಬೀಡಾಡಿ ಹಸುವಿನ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯುವ ಸಲುವಾಗಿ ವೀರಾಜಪೇಟೆ

(ಮೊದಲ ಪುಟದಿಂದ) ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಹಾಗೂ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಅವರ ನಿರ್ದೇಶನದ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಶಶಿ ನೇತೃತ್ವದಲ್ಲಿ ಸ್ಥಳದಲ್ಲಿ ಹುಲಿಯ ಚಲನವಲನ ಗಳನ್ನು ಕಂಡುಹಿಡಿಯಲು ಕೂಂಬಿAಗ್ ನಡೆಸಲಾಗುತ್ತಿದೆ. ಹುಲಿಯ ಚಲನವಲನ ಪತ್ತೆಯಾದಲ್ಲಿ ಮೇಲಾಧಿಕಾರಿಗಳ ಆದೇಶದ ಮೇರೆಗೆ ಸ್ಥಳದಲ್ಲಿ ಬೋನು ಅಳವಡಿಸಿ ಹುಲಿ ಸೆರೆಗೆ ಮುಂದಾಗುವುದಾಗಿ ಅರಣ್ಯಾಧಿಕಾರಿ ಮಾಹಿತಿ ನೀಡಿದರು.

ಮುಂದುವರಿದ ವ್ಯಾಘ್ರನ ಹಟ್ಟಹಾಸ: ಕಳೆದ ಎರಡು ದಿನಗಳ ಹಿಂದೆ ಶ್ರೀಮಂಗಲದಲ್ಲಿ ಹುಲಿದಾಳಿಗೆ ಹಸು ಬಲಿಯಾದ ಘಟನೆ ಮಾಸುವ ಮುನ್ನವೇ ಇದೀಗ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿ ಯಲ್ಲಿ ಹುಲಿ ದಾಳಿ ನಡೆದಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾಡಾನೆ ಹಾವಳಿ ಯಿಂದ ತತ್ತರಿಸಿರುವ ಮಾಲ್ದಾರೆ ವ್ಯಾಪ್ತಿಯ ಕೃಷಿಕರು ಹಾಗೂ ಕಾರ್ಮಿಕರು ಇದೀಗ ಹುಲಿಯ ದಾಳಿಗೆ ಹೆದರಿ ಕೆಲಸಕ್ಕೆ ತೆರಳದೇ ಇರುವುದು ಕಂಡುಬರುತ್ತಿದೆ.