ಕೂಡಿಗೆ, ಅ. ೧೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೩೦ ವರ್ಷಗಳಿಂದಲೂ ಮನೆಯ ನಿರ್ಮಾಣಕ್ಕೆ ನಿವೇಶನ ಇಲ್ಲದೆ ನಿವೇಶನ ರಹಿತರು ಬಾಡಿಗೆ ಮನೆಯಲ್ಲಿದ್ದರೂ ಸಹ ಇದುವರೆಗೂ ಗ್ರಾಮ ಪಂಚಾಯಿತಿ ಅಥವಾ ತಾಲೂಕು ಪಂಚಾಯಿತಿ ವತಿಯಿಂದ ಮನೆಗಳ ನಿರ್ಮಾಣಕ್ಕೆ ನಿವೇಶನವನ್ನು ನೀಡದೆ ಸತಾಯಿಸುತ್ತಿದ್ದಾರೆ.

ಕಳೆದ ೩೦ ವರ್ಷಗಳ ಹಿಂದೆಯೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನಿವೇಶನಕ್ಕಾಗಿ ಜಾಗವನ್ನು ಗುರುತಿಸಲ್ಪಟ್ಟಿದ್ದರೂ ಸಹ ಜನಪ್ರತಿನಿಧಿಗಳು ನಿವೇಶನ ರಹಿತರಿಗೆ ಚುನಾವಣಾ ಸಂದರ್ಭದಲ್ಲಿ ನಿವೇಶನ ನೀಡುವ ಭರವಸೆ ನೀಡುತ್ತಾರೆ ಹೊರತು, ಕಾರ್ಯರೂಪಕ್ಕೆ ತರುತ್ತಿಲ್ಲ.

೩೦ ವರ್ಷಗಳಿಂದಲೂ ವಾರ್ಷಿಕವಾಗಿ ನಡೆಯುವ ಗ್ರಾಮಸಭೆಗೆ ವರ್ಷಂಪ್ರತಿಯAತೆ ಸಭೆಗೆ ಅರ್ಜಿಯನ್ನು ಸಲ್ಲಿಸಿದರೂ ಸಹ ಇದುವರೆಗೂ ನಿವೇಶನದ ಭಾಗ್ಯ ಮಾತ್ರ ದೊರೆತಿಲ್ಲ ಎಂದು ನಿವೇಶನ ರಹಿತರಾದ ಗೋಪಾಲ್, ಕೃಷ್ಣ, ಕುಮಾರ್, ಮಂಜಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ಸಾಲಿನ ಗ್ರಾಮ ಸಭೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಬಗ್ಗೆ ಕೈಗೊಂಡ ತೀರ್ಮಾನದಂತೆ ಬ್ಯಾಡಗೊಟ್ಟ ಗ್ರಾಮದಲ್ಲಿ ಕಾಯ್ದಿರಿಸಿದ ಜಾಗದಲ್ಲಿ ನಿವೇಶನವನ್ನು ಒದಗಿಸುವಂತೆ ಈ ವ್ಯಾಪ್ತಿಯ ನೂರಾರು ನಿವೇಶನ ರಹಿತರ ಒತ್ತಾಯವಾಗಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳು ಇಲ್ಲದವರ ಪಟ್ಟಿಯನ್ನು ಸಿದ್ದಮಾಡಿ ತಾಲೂಕು ಪಂಚಾಯಿತಿಗೆ ಕಳುಹಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

- ಕೆ.ಕೆ. ನಾಗರಾಜಶೆಟ್ಟ.