ಮಡಿಕೇರಿ, ಅ. ೧೭: ಬಿಜೆಪಿ ಮುಖಂಡ ಸಂಪಾಜೆ ಗ್ರಾ.ಪಂ. ಅಧ್ಯಕ್ಷನಾಗಿದ್ದ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ತೀರ್ಪು ನಿನ್ನೆ ಪ್ರಕಟವಾಗಿದ್ದು, ಆರೋಪಿಗಳ ಮೇಲಿನ ಆರೋಪ ಸಾಬೀತಾಗಿರುವುದಾಗಿ ನ್ಯಾಯಾಲಯ ಆದೇಶಿಸಿದೆ. ಕಳಗಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾದ ಹರಿಪ್ರಸಾದ್ ಪಿ.ಕೆ. (ಮಣಿ) ಹಾಗೂ ಜಯನ್ ಕೆ. ಇವರನ್ನು ನ್ಯಾಯಾಲಯವು ತಪ್ಪಿತಸ್ಥರು ಎಂದು ಹೇಳಿದ್ದು, ಶಿಕ್ಷೆಯ ಪ್ರಮಾಣವನ್ನು ತಾ.೧೯ಕ್ಕೆ ಕಾಯ್ದಿರಿಸಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸಂಪತ್ ಕುಮಾರ್ ಈ ಹಿಂದೆ ಸುಳ್ಯದಲ್ಲಿ ಹತ್ಯೆಗೀಡಾಗಿದ್ದಾನೆ. ಜಿಲ್ಲಾ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶೆ ಪ್ರಶಾಂತಿ ಜಿ. ಅವರು ತೀರ್ಪು ಪ್ರಕಟಿಸಿದ್ದು, ಸರಕಾರಿ ಅಭಿಯೋಜಕ ಎನ್.ಪಿ. ದೇವೇಂದ್ರ, ಸರಕಾರದ ಪರವಾಗಿ ವಾದ ಮಂಡಿಸಿದ್ದಾರೆ. ಪ್ರಕರಣದ ಕುರಿತು ಅಂದಿನ ವೃತ್ತ ನಿರೀಕ್ಷಕ ಸಿದ್ದಯ್ಯ ಅವರು ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕಳೆದ ೧೯-೩-೨೦೧೯ರಂದು ಕಳಗಿಯವರನ್ನು ಸಿನಿಮೀಯ ರೀತಿಯಲ್ಲಿ ರಸ್ತೆ ಅಪಘಾತ ನಡೆದಂತೆ ಹತ್ಯೆ ಮಾಡಲಾಗಿತ್ತು.