ಸೋಮವಾರಪೇಟೆ, ಅ. ೨೦: ತಾಲೂಕು ಕಂದಾಯ ಇಲಾಖೆಯಿಂದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಸ್ಪಂದನ ಲಭಿಸದ ಹಿನ್ನೆಲೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಪ್ರಮುಖರು ತಾಲೂಕು ತಹಶೀಲ್ದಾರ್‌ರನ್ನು ಭೇಟಿ ಮಾಡಿ ಚರ್ಚಿಸಿದರು.

ಪ್ರಮುಖವಾಗಿ ಭೂ ದಾಖಲೆ ಗಳಿಗೆ ಸಂಬAಧಿಸಿದAತೆ ಹಲವಷ್ಟು ಕಡತಗಳು ತಾಲೂಕು ಕಚೇರಿಗೆ ಸಲ್ಲಿಕೆಯಾಗಿದ್ದರೂ ಸಹ ಈವರೆಗೆ ವಿಲೇವಾರಿಯಾಗಿಲ್ಲ. ಇದರೊಂದಿಗೆ ಸಿ ಮತ್ತು ಡಿ ಜಾಗ ಸಮಸ್ಯೆ, ಕಂದಾಯ ಭೂಮಿಗೆ ದಾಖಲೆ ನೀಡದೇ ಎದುರಾಗಿರುವ ಸಮಸ್ಯೆಗಳು, ಬಗರ್ ಹುಕುಂ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ, ಪೋಡಿ, ದುರಸ್ತಿ ಸೇರಿದಂತೆ ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಂದಾಯ ಇಲಾಖೆಯಿಂದ ಯಾವುದೇ ಸ್ಪಂದನ ಲಭಿಸುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಗಮನ ಸೆಳೆದರು.

ಸಿ ಮತ್ತು ಡಿ ಜಾಗಕ್ಕೆ ಸಂಬAಧಿಸಿದAತೆ ಸ್ಥಳೀಯವಾಗಿ ಕಂದಾಯ ಇಲಾಖೆಯಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಇಲಾಖೆಯ ಮೇಲಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಯಬೇಕಿದೆ. ಸರ್ಕಾರದ ನಿಯಮಗಳನ್ನು ಸ್ಥಳೀಯವಾಗಿ ನಾವು ಪಾಲಿಸುತ್ತಿದ್ದೇವೆ ಎಂದು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಹೇಳಿದರು.

ಸರ್ಕಾರಿ ಪೈಸಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿರುವ, ಮನೆ ನಿರ್ಮಿಸಿಕೊಂಡಿರುವ ಫಲಾನುಭವಿ ಗಳಿಗೆ ಬಗರ್ ಹುಕುಂ ಅಡಿಯಲ್ಲಿ ದಾಖಲೆಗಳನ್ನು ನೀಡಲಾಗುವುದು. ಇದಕ್ಕೆ ಯಾವುದೇ ಅಡ್ಡಿಯಿಲ್ಲ. ಕಾನೂನು ತೊಡಕಿಲ್ಲದ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು. ಕೆಲವೊಂದು ದಾಖಲಾತಿಗಳು ತಾಲೂಕು ಕಚೇರಿಯಲ್ಲಿ, ಇನ್ನು ಕೆಲವೊಂದು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿದ್ದು, ಎಲ್ಲವನ್ನೂ ಒಟ್ಟುಗೂಡಿಸಿ ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಾಂತಳ್ಳಿ ಹೋಬಳಿ ನಾಡಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಹಲವಷ್ಟು ಕಚೇರಿಗಳಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ. ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ. ತಮ್ಮಿಷ್ಟಕ್ಕೆ ಕಚೇರಿಗೆ ಬರುವುದು-ಹೋಗುವುದನ್ನು ಮಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಗ್ರಾಮೀಣ ಪ್ರದೇಶದ ಜನರು ಸರ್ಕಾರಿ ಕಚೇರಿಗಳಿಗೆ ವೃಥಾ ಅಲೆಯುವುದು ತಪ್ಪಿಲ್ಲ ಎಂದು ಪದಾಧಿಕಾರಿಗಳು ಆರೋಪಿಸಿದರು.

ತಾಲೂಕು ಕಚೇರಿಯನ್ನೂ ಒಳಗೊಂಡAತೆ ಕಂದಾಯ ಇಲಾಖೆಯ ಇತರ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಬೇಕು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂಬ ನಿಯಮವನ್ನು ಸರ್ಕಾರ ಅಳವಡಿಸಿದ್ದರೂ ಹಲವಷ್ಟು ಅಧಿಕಾರಿಗಳು ಸೋಮವಾರಪೇಟೆಯಲ್ಲಿ ನೆಲೆಸಿಲ್ಲ ಎಂದು ದೂರಿದರು.

ಇದರೊಂದಿಗೆ ಕಂದಾಯ ಇಲಾಖೆಯಲ್ಲಿ ಕಳೆದ ೮ ರಿಂದ ೧೦ ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳನ್ನು ತಕ್ಷಣ ಬೇರೆಡೆಗೆ ವರ್ಗಾವಣೆ ಮಾಡಬೇಕು. ನೂತನ ಸಿಬ್ಬಂದಿಗಳನ್ನು ನೇಮಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಸಾರ್ವಜನಿಕ ಕೆಲಸ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸಬೇಕು ಎಂದು ಪದಾಧಿಕಾರಿ ಗಳು ಒತ್ತಾಯಿಸಿದರು.

ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬAಧಿಸಿದ ಇಲಾಖಾಧಿಕಾರಿಗಳಿಗೆ ತಾಲೂಕು ಕಚೇರಿಯಿಂದ ಸೂಚಿಸಬೇಕು ಎಂದು ಸದಸ್ಯರುಗಳು ತಹಶೀಲ್ದಾರ್‌ರ ಗಮನ ಸೆಳೆದರು.

ಪದಾಧಿಕಾರಿಗಳ ಬೇಡಿಕೆಗಳನ್ನು ಆಲಿಸಿದ ತಹಶೀಲ್ದಾರ್ ಶ್ರೀಧರ್ ಅವರು, ತಾನು ಅಧಿಕಾರ ಸ್ವೀಕರಿಸಿದ ನಂತರ ತಾಲೂಕು ಕಚೇರಿಯಲ್ಲಿ ಹಲವಷ್ಟು ಸುಧಾರಣೆ ಮಾಡಲಾಗಿದೆ. ಕಚೇರಿಯಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗುವುದು. ಅರ್ಜಿಗಳನ್ನು ತನ್ನ ಹಂತದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು. ಸಿಬ್ಬಂದಿಗಳ ಕೊರತೆಯ ನಡುವೆಯೂ ಆಡಳಿತಕ್ಕೆ ವೇಗ ನೀಡಲಾಗುವುದು. ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಹೂವಯ್ಯ ಮಾಸ್ಟರ್, ಮಂಜೂರು ತಮ್ಮಣ್ಣಿ, ಸುಲೈಮಾನ್, ನ.ಲ. ವಿಜಯ, ತ್ರಿಶೂಲ್, ಅನಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.