ಗೋಣಿಕೊಪ್ಪಲು, ಅ. ೧೯: ಕುಂದ-ಈಚೂರು ಗ್ರಾಮದಲ್ಲಿರುವ ಕಾಂಕ್ರೀಟ್, ತಾರ್ ಮಿಶ್ರಣ ಘಟಕದ ದಾಖಲೆಗಳನ್ನು ಕಚೇರಿಗೆ ಸಲ್ಲಿಸಲು ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್ ಎರಡು ದಿನಗಳ ಗಡುವು ನೀಡಿದ್ದಾರೆ.

ಘಟಕ ಹಲವು ವರ್ಷಗಳಿಂದ ಮಾಲಿನ್ಯವನ್ನು ಹೊರಸೂಸುತ್ತಿದೆ ಎಂಬ ಬಗ್ಗೆ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿ, ಘಟಕ ಸ್ಥಗಿತಗೊಳಿಸಲು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು.

ಈ ಬಗ್ಗೆ ಗ್ರಾಮಸ್ಥರು ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಶನಿವಾರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು.

ಗ್ರಾಮಸ್ಥರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮೋಹನ್ ಕುಮಾರ್ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.

ನಂತರ ಸಮೀಪದ ಎನ್‌ಬಿಎನ್ ಘಟಕವನ್ನು ಪರಿಶೀಲಿಸಿ ಸ್ಥಳೀಯರ ಹೋರಾಟ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳನ್ನು ಕಚೇರಿಗೆ ಸೋಮವಾರ ಸಲ್ಲಿಸಲು ಸೂಚನೆ ನೀಡಿದರು.

ಘಟಕ ಆರಂಭದ ಬಗ್ಗೆ ಲಭ್ಯವಿರುವ ಅಗತ್ಯ ದಾಖಲಾತಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಲಿನ್ಯ ಮಂಡಳಿ ಮೂಲಕ ಪಡೆದುಕೊಂಡಿರುವ ಅನುಮತಿ ಸೇರಿದಂತೆ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ಗ್ರಾಮದಲ್ಲಿ ಶಾಂತಿ ಕಾಪಾಡಲು ಎಲ್ಲರ ಸಹಕಾರ ಅಗತ್ಯ ಎಂದರು.

ಸ್ಥಳೀಯರು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು.

ವಾಯುಮಾಲಿನ್ಯದಿಂದ ಗ್ರಾಮದಲ್ಲಿ ರೋಗಗಳು ಹೆಚ್ಚಾಗುತ್ತಿದೆ. ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಯಿತು.

ಮಾಲಿನ್ಯ ಮಂಡಳಿ ಅಧಿಕಾರಿಗಳು ಘಟಕದ ಸಮೀಪದ ಹೊಳೆಯನ್ನು ತೋಡು ಎಂದು ದಾಖಲಿಸಿ ಮಾಲಿನ್ಯ ರಹಿತವಾಗಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಒತ್ತಿನಲ್ಲಿರುವ ಗಿರಿಜನರ ಕಾಲೋನಿ ನಿವಾಸಿಗಳಿಗೆ ಮಾಲಿನ್ಯದಿಂದ ಉಸಿರಾಟದ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಅಧಿಕಾರಿಗಳ ಗಮನ ಸೆಳೆದರು.

ವಾಯುಮಾಲಿನ್ಯದ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳು ಮಳೆಗಾಲದಲ್ಲಿ ಆಗಮಿಸುತ್ತಾರೆ.

ಇದರಿಂದ ಮಳೆಯಲ್ಲಿ ದೂಳು ಸಿಗುವುದಿಲ್ಲ ಎಂದು ಸ್ಥಳೀಯರಾದ ತೀತಮಾಡ ಅಯ್ಯಪ್ಪ ಹೇಳಿದರು.

ಗ್ರಾಮಸ್ಥರನ್ನು ಹೊರಗಿಟ್ಟು ಪರಿಶೀಲನೆ ನಡೆಸುವ ಉದ್ದೇಶದ ಹಿಂದಿನ ಸತ್ಯಾಸತ್ಯತೆ ಬಯಲಾಗಬೇಕು ಎಂದು ಗ್ರಾಮಸ್ಥರು ತಿಳಿಸಿದರು.

ಹಾತೂರು ಗ್ರಾಮ ಪಂಚಾಯಿತಿ ಪಿಡಿಓ ಉಜ್ಮಾ ಜಬೀನ್ ಮತ್ತು ಉಪಾಧ್ಯಕ್ಷ ಕುಲ್ಲಚಂಡ ಚಿಣ್ಣಪ್ಪ ಅವರನ್ನು ಈ ವೇಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಘಟಕದ ಮಾಲೀಕರು ಎರಡು ವರ್ಷಗಳ ಹಿಂದೆ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಜೂನ್ ತಿಂಗಳಲ್ಲಿ ಘಟಕ ಸ್ಥಗಿತಗೊಳಿಸುವುದಾಗಿ ಬರಹದ ಮೂಲಕ ಭರವಸೆ ನೀಡಿದ್ದರು.

ಆದರೆ, ನಿರ್ಣಯಕ್ಕೆ ಸರಿಯಾಗಿ ನಡೆದುಕೊಂಡಿಲ್ಲ. ಗ್ರಾಮ ಪಂಚಾಯಿತಿ ಕೂಡ ಸೂಕ್ತವಾಗಿ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.

ಪಿಡಿಓ ಉಜ್ಮಾ ಜಬೀನ್ ಮಾತನಾಡಿ, ಈ ಬಗ್ಗೆ ಇಓ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಟಾರ್ ಮಿಶ್ರಣ ಘಟಕ ಈಗ ನಡೆಯುತ್ತಿಲ್ಲ. ಕಾಂಕ್ರಿಟ್ ಮಿಶ್ರಣವನ್ನು ನಿಲ್ಲಿಸಲು ಮುಂದೆ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾ.ಪA. ಉಪಾಧ್ಯಕ್ಷ ಕುಲ್ಲಚಂಡ ಚಿಣ್ಣಪ್ಪ ಮಾತನಾಡಿ, ಈ ಬಗ್ಗೆ ಸದಸ್ಯರ ಸಭೆ ಕರೆದು ನಿರ್ಧರಿಸುವುದಾಗಿ ತಿಳಿಸಿದರು. ಸದಸ್ಯ ಗುಮ್ಮಟ್ಟಿರ ದರ್ಶನ್ ಮಾತನಾಡಿ, ಶೀಘದಲ್ಲಿಯೇ ಗ್ರಾಮ ಪಂಚಾಯಿತಿ ವಿಶೇಷ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸಲಾಗುವುದು. ಅಲ್ಲಿಯವರೆಗೂ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ತೀತಮಾಡ ಪೂವಣ್ಣ ಮಾತನಾಡಿ, ಗ್ರಾಮ ಪಂಚಾಯಿತಿ ಘಟಕ ನಿರ್ಮಾಣಕ್ಕೆ ಅನುಮತಿ ನೀಡುವಾಗ ಪರಿಶೀಲನೆ ನಡೆಸಬೇಕಿತ್ತು. ನಿತ್ಯ ಇಲ್ಲಿನ ನಿವಾಸಿಗಳು ಸಮಸ್ಯೆ ಅನುಭವಿಸುವಂತಾಗಿದೆ.

ಗ್ರಾಮಸ್ಥ ಶ್ರೀಮಂತ್ ಮುತ್ತಣ್ಣ ಮಾತನಾಡಿ, ಗ್ರಾಮ ದೇವರಕಾಡು, ಬಫರ್ ಜೋನ್ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿನ ಪರಿಸರ ರಕ್ಷಣೆ, ಕೃಷಿಗೆ ಕಂಠಕವಾಗದAತೆ ಎಚ್ಚರವಹಿಸಬೇಕಿದೆ ಎಂದರು. ಶಾಶ್ವತವಾಗಿ ಇಲ್ಲಿ ಘಟಕ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಕ್ರಮ ಅಗತ್ಯ ಎಂದರು.

ತೀತಿಮಾಡ ಸುಜಿ, ಕೊಕ್ಕಂಡ ರೋಶನ್, ಅಮಿತ್, ಚಂಗಪ್ಪ ಈ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎರಡು ಘಟಕಗಳನ್ನು ತೆರವುಗೊಳಿಸಲು ಮಾಲೀಕರು ಈಗಾಗಲೇ ಮುಂದಾಗಿದ್ದಾರೆ. ಇದರಂತೆ ಎನ್‌ಬಿಎನ್ ಘಟಕ ಕೂಡ ಸ್ಥಳಾಂತರ ಆಗಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಹೋರಾಟವಾಗಿದೆ.

ಗ್ರಾಮದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಮಾಲೀಕರು, ಅಧಿಕಾರಿಗಳು, ಹಾತೂರು ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ಸ್ಥಳೀಯರು ಹೇಳಿದರು.

ಘಟಕದಿಂದ ಸ್ಥಳೀಯ ಹೊಳೆ ತ್ಯಾಜ್ಯದಿಂದ ಮುಕ್ತಿ ಕಾಣದಂತಾಗಿದೆ. ಕಸ, ಪ್ಲಾಸ್ಟಿಕ್ ಎಸೆಯುವ ಪ್ರಕರಣ ಹೆಚ್ಚಾಗುತ್ತಿದೆ. ಘಟಕದ ತ್ಯಾಜ್ಯವನ್ನು ಹೊಳೆಗೆ ಬಿಡುವುದರಿಂದ ಭವಿಷ್ಯದಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ ಎಂಬ ಅರಿವು ಮುಖ್ಯ. ಇದರಿಂದಾಗಿ ಘಟಕದ ಸ್ಥಳಾಂತರ ಅಗತ್ಯ ಎಂದರು.