ಮಡಿಕೇರಿ, ಅ. ೨೦: ಆಗಸ್ಟ್ ೨೦ ರಿಂದ ಸೆಪ್ಟೆಂಬರ್ ೨೨ ರವರೆಗೆ ಆನ್‌ಲೈನ್ ಮುಖಾಂತರ ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ನಡೆದಿದ್ದು, ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಕಾದು ಕುಳಿತಿದ್ದಾರೆ.

ಐವೈಸಿ ಆ್ಯಪ್ ಮೂಲಕ ಒಂದು ತಿಂಗಳ ಕಾಲ ನಡೆದ ಯುವ ಕಾಂಗ್ರೆಸ್ ಚುನಾವಣೆಯು ಈ ಬಾರಿ ಕೊಡಗು ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.

ಇದೀಗ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕಿರೀಟ ಯಾರ ಪಾಲಾಗಲಿದೆ ಎಂಬುದು ಕುತೂಹಲವಾಗಿದೆ.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಟ್ಟು ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದರು.ಆದರೆ ಕೇವಲ ಇಬ್ಬರ ನಡುವೆ ಮಾತ್ರ ಚುನಾವಣಾ ಪೈಪೋಟಿ ಕಂಡುಬAದಿತ್ತು. ಉಳಿದ ಐದು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಿಂದ ದೂರ ಸರಿದಿದ್ದರು. ಮೈಸಿ ಕತ್ತಣಿರ ಹಾಗೂ ಜಮ್ಮಡ ಸೋಮಣ್ಣ ನಡುವೆ ನಡೆದ ನೇರ ಹಣಾಹಣಿಯಲ್ಲಿ ವಿಜಯದಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದೇ ಕುತೂಹಲ.

ಐವೈಸಿ ಆ್ಯಪ್ ಮೂಲಕ ಯುವ ಕಾಂಗ್ರೆಸ್ ಸದಸ್ಯತ್ವ ಪಡೆದ ೧೮ ವರ್ಷದಿಂದ ೩೫ ವರ್ಷದೊಳಗಿನ ಯುವಕ ಯುವತಿಯರಿಗೆ ಸದಸ್ಯತ್ವ ಪಡೆದ ಕ್ಷಣದಿಂದ ಮತದಾನ ಮಾಡುವ ಅವಕಾಶ ಮಾಡಿಕೊಡಲಾಗಿತ್ತು.

ಮತದಾನ ಮಾಡುವವರು ಐವತ್ತು ರೂ ಪಾವತಿ ಮಾಡಿದರೆ ಮಾತ್ರ ವೋಟಿಂಗ್ ಪೂರ್ಣಗೊಳ್ಳುವುದು.

ಜಿಲ್ಲಾಧ್ಯಕ್ಷ,ಪ್ರಧಾನ ಕಾರ್ಯದರ್ಶಿ, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಈ ಬಾರಿಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂಬ ಮಾತೂ ಇದೆ.

ಅದಲ್ಲದೇ ಸಂಘಸAಸ್ಥೆಗಳು, ಕ್ರೀಡಾ ಸಂಸ್ಥೆಗಳಿಗೆ ಡೊನೇಶನ್ ಮಾಡುವುದರ ಮೂಲಕ ಕೂಡ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ದೊಡ್ಡ ಮಟ್ಟದ ಲಾಭಿ ನಡೆದಿತ್ತು.

ಎಲ್ಲಾ ಪಕ್ಷದ ಕಾರ್ಯಕರ್ತರಿಂದಲೂ ಯುವ ಕಾಂಗ್ರೆಸ್ ಸದಸ್ಯತ್ವ!

ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯೂ, ಸಾರ್ವತ್ರಿಕ ಚುನಾವಣೆಯಂತೇ ಜಿಲ್ಲೆಯಲ್ಲಿ ಒಂದು ತಿಂಗಳು ಸದ್ದು ಮಾಡಿತ್ತು.

೧೮ ವರ್ಷದಿಂದ ೩೫ ವರ್ಷದೊಳಗಿನ ಕಾಂಗ್ರೆಸ್ ಕಾರ್ಯಕರ್ತರಲ್ಲದೆ,ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್,ಕಾರ್ಯಕರ್ತರು ಕೂಡ ಯುವ ಕಾಂಗ್ರೆಸ್ ಸದಸ್ಯತ್ವ ಪಡೆದು,ವೋಟಿಂಗ್ ಮಾಡಿದ್ದಾರೆ.

ಆನ್‌ಲೈನ್ ಮೂಲಕ ಮತ ಚಲಾಯಿಸಬೇಕಾಗಿರುವುದರಿಂದ ಅಭ್ಯರ್ಥಿಗಳು ಎಲ್ಲಾ ಪಕ್ಷದ ಯುವ ಕಾರ್ಯಕರ್ತರ ಕದತಟ್ಟಿ, ವೋಟಿಂಗ್ ಮಾಡಿಸಿದ್ದಾರೆ.

ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಕೆಲವೊಂದು ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗಿಂತ ಆಸಕ್ತಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಕಂಡುಬAದದ್ದು ವಿಶೇಷವಾಗಿತ್ತು.

ಜಿಲ್ಲೆಯ ಕೆಲವು ಕಾಲೇಜುಗಳಲ್ಲಿ ಕೂಡ ಯುವ ಕಾಂಗ್ರೆಸ್ ಚುನಾವಣೆಯ ಭರಾಟೆ ಜೋರಾಗಿಯೇ ಇತ್ತು. ವಿದ್ಯಾರ್ಥಿಗಳನ್ನು ಕಾಲೇಜುಗಳಲ್ಲಿ ಏಜೆಂಟರಾಗಿ ನೇಮಿಸಿ, ಅಭ್ಯರ್ಥಿಗಳು ವೋಟ್ ಮಾಡಿಸಿದ್ದರು.

ಮತದಾನದ ೫೦ ರೂ. ಗಳನ್ನು ಅಭ್ಯರ್ಥಿಗಳೇ ಪಾವತಿಸಿ, ಮತಚಲಾಯಿಸಿದರವರ ಮೊಬೈಲ್ ಸಂಖ್ಯೆಯನ್ನು ಪಡೆದು, ಒಟಿಪಿ ಮೂಲಕ ಯಾರಿಗೆ ಮತ ಹಾಕಿದ್ದಾರೆ ಎಂದು ಖಚಿಪಡಿಸಿಕೊಳ್ಳುತ್ತಿದ್ದರು.

ಕಾಂಗ್ರೆಸ್ ಹಿರಿಯ ಮುಖಂಡರು ಬಹಿರಂಗವಾಗಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ತೆರೆಮರೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕಾರ್ಯನಿರ್ವಹಿಸಿದ್ದಾರೆ.

ಮತ್ತೊಂದು ವಿಶೇಷವೇನೆಂದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಾರ್ವತ್ರಿಕ ಚುನಾವಣೆಗಿಂತ ಆಸಕ್ತಿಯಿಂದ ಅಭ್ಯರ್ಥಿಗಳು, ಯುವ ಕಾಂಗ್ರೆಸ್ ಕಾರ್ಯಕರ್ತರು, ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು.

ಎಲ್ಲಾ ಚುನಾವಣೆಯಲ್ಲಿ ಕೇಳಿ ಬರುವ, ಧರ್ಮ ರಾಜಕೀಯ, ಜಾತಿ ರಾಜಕೀಯ ಎಲ್ಲವೂ ಕೂಡ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಕೂಡ ಕಂಡುಬAದಿದೆ ಎನ್ನಲಾಗಿದೆ.

ಮಗನ ಗೆಲುವು ಇಬ್ಬರಿಗೆ ಪ್ರತಿಷ್ಠೆ!!

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸ್ಥಾನಕ್ಕೆ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವೀರಾಜಪೇಟೆ ಪುರಸಭೆ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಅವರ ಮಗ ರಕ್ಷಿತ್ ಸ್ಪರ್ಧಿಸಿದ್ದರು.

ಇವರ ಪ್ರತಿಸ್ಪರ್ಧಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನಾಮೇರ ಅಂಕಿತ್ ಪೊನ್ನಪ್ಪ ಅವರು ಪ್ರಬಲ ಪೈಪೋಟಿ ನೀಡಿದ್ದರು. ತಮ್ಮ ಮಗನ ಗೆಲುವಿಗಾಗಿ ಪಟ್ಟಡ ರಂಜಿ ಪೂಣಚ್ಚ ಅವರು ಸ್ವತಃ ಮತ ಬೇಟೆ ನಡೆಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಒಟ್ಟು ಐವರು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಎಂ. ಲತೀಫ್ ಅವರ ಪುತ್ರ ಪಿ.ಎಲ್. ಮೊಹಮ್ಮದ್ ಹರ್ಷದ್ ಸ್ಪರ್ಧಿಸಿದ್ದರು.ಆದರೆ ಸುಲಭದ ಗೆಲುವಿನ ನಿರೀಕ್ಷೆಯಲ್ಲಿದ್ದ ಹರ್ಷದ್‌ಗೆ ಸುಂಟಿಕೊಪ್ಪ ಮೊಹಮ್ಮದ್ ಹಕೀಮ್ ಎದುರಾಳಿ ಯಾಗಿದ್ದಾರೆ. ಆದರೆ ಇಬ್ಬರಿಗೆ ಕೂಡ ಗೆಲುವಿನ ಖಚಿತತೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಮಗನ ರಾಜಕೀಯ ಭವಿಷ್ಯ ಭದ್ರಗೊಳಿಸಲು ಪಟ್ಟಡ ರಂಜಿ ಪೂಣಚ್ಚ ಹಾಗೂ ಪಿ.ಎಂ ಲತೀಫ್ ಅವರಿಗೆ ತಮ್ಮ ಮಗನ ಗೆಲುವು ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ