ಮಡಿಕೇರಿ, ಅ. ೧೯ : ಟೆಂಪೊ ಟ್ರಾವೆಲರ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಸ್ಕೂಟಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಕೆಳಗಿನ ಗೌಡ ಸಮಾಜದಲ್ಲಿ ಮದುವೆ ಚಪ್ಪರ ಮುಗಿಸಿ ಸ್ಕೂಟಿಯಲ್ಲಿ (ಕೆಎ೧೨-ಕ್ಯೂ೩೫೭೩) ಮನೆಗೆ ತೆರಳುತ್ತಿದ್ದ ಭಾಗಮಂಡಲ ಕೊಳಗದಾಳು ಗ್ರಾಮದ ಗಜೇಶ್ವರ (೪೨) ಎಂಬವರ ಸ್ಕೂಟಿಗೆ ಚೈನ್‌ಗೇಟ್ ಬಳಿ ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ನಂದೀಶ್ ಎಂಬವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್ (ಕೆಎ ೪೧-ಬಿ ೪೩೬೩) ಎದುರಿನಿಂದ ಬಂದು ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಚಾಲಕ ಗಜೇಶ್ವರ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಕಿಶೋರ್ ಎಂಬವರುಗಳು ಗಂಭೀರ ಗಾಯಗೊಂಡಿದ್ದಾರೆ. ಗಜೇಶ್ವರ ಅವರನ್ನು ಮೈಸೂರು ಆಸ್ಪತ್ರೆಗೆ ಚಿಕಿತ್ರೆಗೆ ಸಾಗಿಸುವ ವೇಳೆ ಗುಡ್ಡೆಹೊಸೂರು ಸಮೀಪ ಅವರು ಕೊನೆಯುಸಿರೆಳೆದಿದ್ದಾರೆ. ಕಿಶೋರ್ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಮಡಿಕೇರಿ ನಗರ ಸಂಚಾರಿ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.