ಮಡಿಕೇರಿ, ಅ. ೧೯: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ, ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಪಾಜೆ ಗ್ರಾಮದ ಬಾಲಚಂದ್ರ ಕಳಗಿ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದ್ದು, ಇಲ್ಲಿನ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿಗಳಿಗೆ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಂಪಾಜೆಯ ಹರಿಪ್ರಸಾದ್, ಸಂಪತ್‌ಕುಮಾರ್(ಮೃತ ಆರೋಪಿ) ಹಾಗೂ ಮಡಿಕೇರಿಯ ಲಾರಿ ಚಾಲಕ ಜಯನ್ ಅಪರಾಧಿಗಳೆಂದು ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ತಾ. ೧೯ರಂದೇ ಶಿಕ್ಷೆ ವಿಧಿಸಿತ್ತಾದರೂ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಲಾಗಿತ್ತು. ಇಂದು ನ್ಯಾಯಾಧೀಶರಾದ ಪ್ರಶಾಂತಿ ಜಿ. ಅವರು; ಕೊಲೆ ಮಾಡಿದ ಹಾಗೂ ಕೊಲೆ ಮಾಡಲು ಸಂಚು ರೂಪಿಸಿದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ಸಾಕ್ಷö್ಯ ನಾಶಕ್ಕಾಗಿ ಮೂರು ವರ್ಷಗಳ ಶಿಕ್ಷೆ ಮತ್ತು ರೂ. ೪೪ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಸೂಲಾಗುವ ದಂಡದ ಹಣವನ್ನು ಬಾಲಚಂದ್ರ ಕಳಗಿಯವರ ಪತ್ನಿ ರಮಾದೇವಿಯವರಿಗೆ ಪಾವತಿಸುವಂತೆ, ಅಲ್ಲದೆ, ಕಾನೂನು ಸೇವೆಗಳ ಪ್ರಾಧಿಕಾರ ರಮಾದೇವಿಯವರಿಗೆ ಸೂಕ್ತ ಪರಿಹಾರ ನಿರ್ಧರಿಸಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸ್ವಾಸ್ಥö್ಯ ಸಮಾಜದ ಕನಸಿನೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಚಂದ್ರ ಕಳಗಿಯಂತಹ ವ್ಯಕ್ತಿಗಳನ್ನು ಅಕ್ರಮ ಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುವ ವ್ಯಕ್ತಿಗಳಿಂದ ರಕ್ಷಿಸುವ ಹೊಣೆಗಾರಿಕೆ ವ್ಯವಸ್ಥೆಯ ಮೇಲಿರುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ದೇವೇಂದ್ರ ಎನ್.ಪಿ. ವಾದ ಮಂಡಿಸಿದ್ದರು.

೨೦೧೯ರಲ್ಲಿ ಹತ್ಯೆ..!

ಸಂಪಾಜೆ ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ವಿವಿಧ ಅವಧಿಗಳಲ್ಲಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ,

(ಮೊದಲ ಪುಟದಿಂದ) ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿ ಅವರನ್ನು ಕಳೆದ ೧೯-೩-೨೦೧೯ರಂದು ಸಿನಿಮೀಯ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಅಪಘಾತವೆಂದು ಬಿಂಬಿಸಲಾಗಿತ್ತು. ನಂತರದಲ್ಲಿ ಪೊಲೀಸರ ಉನ್ನತ ತನಿಖೆಯಿಂದ ಕೊಲೆ ಪ್ರಕರಣ ಬಯಲಾಗಿ ಆರೋಪಿಗಳನ್ನು ಹತ್ತು ದಿನಗಳ ಬಳಿಕ ೨೯-೩-೨೦೧೯ರಂದು ಬಂದಿಸಿ ನ್ಯಾಯಾಂಗ ವಶಕ್ಕೊಪ್ಪಿಸಲಾಗಿತ್ತು.

ಅಕ್ರಮ ಚಟುವಟಿಕೆಗಳಿಗೆ ತಡೆ ಕಾರಣ..!?

ಕಳಗಿಯವರು ಪಂಚಾಯ್ತಿ ಅಧ್ಯಕ್ಷರಾಗಿದ್ದ ಸಂದರ್ಭ ಹರಿಪ್ರಸಾದ್ ಹಾಗೂ ಸಂಪತ್‌ಕುಮಾರ್ ಅವರುಗಳು ಅಕ್ರಮವಾಗಿ ಸುಳ್ಯ, ಮಂಗಳೂರು ಕಡೆಗಳಿಂದ ಮರಳು, ಚೆತ್ತು ಕಲ್ಲು, ಜೆಲ್ಲಿಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ವಿರೋಧಿಸಿದ್ದರು. ಅಲ್ಲದೆ, ಸಂಪಾಜೆಯಲ್ಲಿ ಮದ್ಯದಂಗಡಿ ಮತ್ತು ಕ್ಲಬ್ ತೆರೆಯಲು ಪಂಚಾಯ್ತಿಯಿAದ ನಿರಾಪೇಕ್ಷಣಾ ಪತ್ರ ಒದಗಿಸಿಕೊಡುವಂತೆ ಇದೇ ಆರೋಪಿಗಳು ಕಳಗಿಯವರಲ್ಲಿ ಕೇಳಿದ್ದರು. ಇದನ್ನು ನಿರಾಕರಿಸಿದ ಕಳಗಿಯವರು ೨೮-೬-೨೦೧೭ರಂದು ಗ್ರಾಮ ಪಂಚಾಯ್ತಿ ಸಭೆಯಲ್ಲಿ ಸಂಪಾಜೆ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡುವ ನಿಟ್ಟಿನಲ್ಲಿ ನಿರ್ಣಯ ಕೈಗೊಂಡಿದ್ದರು. ಇದರಿಂದಾಗಿ ಶೀಘ್ರದಲ್ಲೇ ಚುನಾವಣೆ ಕೂಡ ಇರುವದರಿಂದ ತಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಾರೆ ಎಂಬ ದುರುದ್ದೇಶದಿಂದ ಕಳಗಿಯವರನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

೨೦೧೯ರಲ್ಲಿ ಸಂಚು..!

ಕಳಗಿಯವರನ್ನು ಕೊಲೆ ಮಾಡಲು ನಿರ್ಧರಿಸಿದ ಹರಿಪ್ರಸಾದ್ ಹಾಗೂ ಸಂಪತ್‌ಕುಮಾರ್ ಅವರುಗಳು ತಮಗೆ ಪರಿಚಿತನಾಗಿರುವ ಗುಡ್ಡೆಹೊಸೂರು ಬಳಿಯ ಬೊಳ್ಳೂರು ಗ್ರಾಮ ನಿವಾಸಿ, ಮಡಿಕೇರಿಯಲ್ಲಿ ಲಾರಿ ಚಾಲಕನಾಗಿರುವ ಜಯನ್‌ನನ್ನು ಸಂಪರ್ಕಿಸುತ್ತಾರೆ. ಕಳಗಿಯವರನ್ನು ಕೊಲೆ ಮಾಡಲು ಸುಪಾರಿ ನೀಡುವದರೊಂದಿಗೆ ಸುಪಾರಿಯ ಫಲವಾಗಿ ಜಯನ್ ಲಾರಿಯ ಮೇಲಿದ್ದ ಸಾಲವನ್ನು ತೀರಿಸುವದಲ್ಲದೆ, ನ್ಯಾಯಾಲಯದ ಖರ್ಚು, ವೆಚ್ಚಗಳನ್ನು ಭರಿಸುವದಾಗಿ ಆತನನ್ನು ಒಪ್ಪಿಸುತ್ತಾರೆ. ತಾ.೧೪-೩-೨೦೧೯ರಂದು ಮೂವರು ಆರೋಪಿಗಳು ಮಡಿಕೇರಿಯ ಮಹದೇವಪೇಟೆಯಲ್ಲಿ ಸೇರಿ ಸಂಚು ರೂಪಿಸುತ್ತಾರೆ.

ಚಿಕ್ಕಪೇಟೆಯಲ್ಲಿ ಭೇಟಿ..!

ಆ ಬಳಿಕ ತಾ. ೧೬-೩-೨೦೧೯ರಂದು ಮಡಿಕೇರಿಯ ಚಿಕ್ಕಪೇಟೆಯಲ್ಲಿರುವ ಮುದ್ದು ಕಾಂಪ್ಲೆಕ್ಸ್ ಬಳಿ ಸೇರಿ ಪ್ಲಾನ್ ಮಾಡಿದ್ದಾರೆ. ಹರಿಪ್ರಸಾದ್ ತನ್ನ ಹೆಸರಿನಲ್ಲಿದ್ದ ೮೭೬೨೧೪೨೧೩೨ ಸಿಮ್ ಮತ್ತು ಹಳೆಯ ಮೊಬೈಲ್, ಸಂಪತ್‌ಕುಮಾರ್ ತನ್ನ ಹೆಸರಿನಲ್ಲಿದ್ದ ೭೦೨೨೩೪೧೮೨೩ ಸಿಮ್ ಅನ್ನು ಜಯನ್‌ಗೆ ನೀಡಿ ಇದನ್ನು ಕೊಲೆ ಮಾಡುವ ಸಂದರ್ಭದಲ್ಲಿ ಮಾತ್ರ ಉಪಯೋಗಿಸಬೇಕು. ನಂತರ ಸಿಮ್ ಹಾಗೂ ಮೊಬೈಲನ್ನು ಹಿಂತಿರುಗಿಸುವAತೆ ಸೂಚನೆ ನೀಡಿದ್ದರು.

ಚಲನ ವಲನ ಗಮನ..!

ನಂತರದಲ್ಲಿ ತಾ.೧೮-೩-೨೦೧೯ರಂದು ಮೂವರು ಮಡಿಕೇರಿಯ ಜಲಾಶ್ರಯ ಬಡಾವಣೆಯಲ್ಲಿ ಸೇರಿ ಮರುದಿನವೇ ಕಳಗಿಯನ್ನು ಕೊಲೆ ಮಾಡಲು ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಕಳಗಿಯವರ ಚಲನ ವಲನಗಳ ಬಗ್ಗೆ ಸಮಯ ಸಂದರ್ಭ ನೋಡಿಕೊಂಡು ಮಾಹಿತಿ ನೀಡಲಿದ್ದು, ಲಾರಿಯಲ್ಲಿ ಕಳಗಿಯವರ ವಾಹನಕ್ಕೆ ಗುದ್ದಿ ಕೊಲೆ ಮಾಡುವಂತೆ ಜಯನ್‌ಗೆ ಈರ್ವರು ಆರೋಪಿಗಳು ತಿಳಿಸಿದ್ದರು.

ಮೇಕೇರಿಯಲ್ಲಿ ಕೊಲೆ..!

ತಾ.೧೯-೩-೨೦೧೯ರಂದು ಬೆಳಿಗ್ಗೆ ೯.೩೦ ಗಂಟೆಗೆ ತಮ್ಮ ಮಾರುತಿ ವ್ಯಾನ್ (ಕೆ.ಎ.೧೨-ಎನ್-೪೦೮೫)ರಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿರುವುದನ್ನು ಗಮನಿಸಿದ ಸಂಪತ್‌ಕುಮಾರ್, ಹರಿಪ್ರಸಾದ್ ಜಯನ್‌ಗೆ ಮಾಹಿತಿ ನೀಡಿದ್ದಾರೆ. ಹಿಂಬಾಲಿಸಿಕೊAಡು ಬಂದು ಕಳಗಿಯವರು ಮೂರ್ನಾಡು ಕಡೆಗೆ ತೆರಳುವುದನ್ನು ಖಚಿತಪಡಿಸಿಕೊಂಡು ಮತ್ತೆ ಮಾಹಿತಿ ನೀಡಿದ್ದಾನೆ. ದೊರೆತ ಮಾಹಿತಿಯ ಮೇರೆಗೆ ಜಯನ್ ತನ್ನ ಲಾರಿ (ಕೆ.ಎ. ೧೨-ಎ-೬೨೫೩ರಲ್ಲಿ ತಾಳತ್‌ಮನೆ-ಮೇಕೇರಿ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದಾನೆ. ಸಂಜೆ ೬.೧೫ರ ವೇಳೆÀಗೆ ಅದೇ ರಸ್ತೆಯಲ್ಲಿ ಬಂದ ಕಳಗಿಯವರು ಚಾಲಿಸುತ್ತಿದ್ದ ಮಾರುತಿ ವ್ಯಾನ್‌ಗೆ ಡಿಕ್ಕಿಪಡಿಸಿ ಕೊಲೆ ಮಾಡಿದ್ದಾನೆ. ಈ ಕೃತ್ಯವನ್ನು ಒಂದು ಅಪಘಾತವೆಂಬAತೆ ಬಿಂಬಿಸಿ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ಸಿಮ್‌ಕಾರ್ಡ್ಗಳನ್ನು ಪುಡಿಮಾಡಿ ಪ್ರಪಾತಕ್ಕೆ ಎಸೆದು ಸುಮ್ಮನಾಗಿದ್ದಾರೆ.

ತನಿಖೆಯಿಂದ ಬಹಿರಂಗ..!

ಕಳಗಿ ಸಾವಿನ ಬಗ್ಗೆ ಸಂಶಯಗೊAಡ ಕಳಗಿ ಕುಟುಂಬಸ್ಥರು ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪಣ್ಣೇಕರ್ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಕೆ.ಎಸ್. ಸುಂದರ್‌ರಾಜ್ ನೇತೃತ್ವದಲ್ಲಿ ಗ್ರಾಮಾಂತರ ವಿಭಾಗದ ವೃತ್ತ ನಿರೀಕ್ಷಕ ಹೆಚ್.ಎನ್. ಸಿದ್ಧಯ್ಯ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂದಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ತೀರ್ಪು ನೀಡಿ ಆದೇಶಿಸಿದೆ. -ಸಂತೋಷ್