ಸೋಮವಾರಪೇಟೆ, ಅ. ೨೦: ಕೊಡಗು ಮಕ್ಕಳ ಗ್ರಂಥಾಲಯ, ಕೊಡಗು ಮಕ್ಕಳ ಹಕ್ಕುಗಳ ಕ್ಲಬ್, ನಾವು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಬಾಲ್ಯ ಕಟ್ಟುವ ಮಕ್ಕಳ ಹಬ್ಬ’ ಶಿಬಿರವು ಮಹಿಳಾ ಸಮಾಜದಲ್ಲಿ ಸಮಾರೋಪಗೊಂಡಿತು.

ಮುಖ್ಯ ಅತಿಥಿಗಳಾಗಿ ಶಿಬಿರಾರ್ಥಿಗಳ ಪಾಲಕರು ಉಪಸ್ಥಿತರಿದ್ದು, ತಮ್ಮ ಮಕ್ಕಳ ಕಲಿಕೆ, ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಶಿಬಿರದಲ್ಲಿ ಭಾಗವಹಿಸಿರುವುದರಿಂದ ಗ್ರಾಮೀಣ ಕಲೆಯ ಹಳೆಯ ಆಟಗಳನ್ನು ಕಲಿತಿದ್ದಾರೆ. ಪೊಲೀಸರು, ಪತ್ರಕರ್ತರೊಂದಿಗೆ ಸಂವಾದ ನಡೆಸಿ ಕೆಲವೊಂದು ವಿಷಯಗಳನ್ನು ಮನೆಯವರೊಂದಿಗೆ ಹಂಚಿ ಕೊಂಡಿದ್ದಾರೆ ಎಂದು ತಿಳಿಸಿದರು.

ಶಿಬಿರಾರ್ಥಿಗಳಾದ ದಕ್ಷ್ ನಿರಂಜನ್, ತನೀಷಾ, ನಿಶ್ಮಿತ್, ಶಶಿ ಕುಮಾರ್, ಯಶ್ಮಿತಾ, ಭಾರ್ಗವಿ, ಕಲ್ಪನಾ, ಶ್ರೇಯಾ ಅವರು ತಾವೇ ಬರೆದ ಕವಿತೆಗಳನ್ನು ವಾಚಿಸಿದರು. ಕತೆಗಳನ್ನು ಹೇಳಿ ಎಲ್ಲರ ಗಮನ ಸೆಳೆದರು.

ದಿನಕ್ಕೊಂದು ಕಥೆ, ಅಜ್ಜಿಮನೆ, ಹಳೆ ಆಟಗಳಾದ ಅಳಿ ಗುಳಿ ಮನೆ, ಪಗಡೆ, ಚೌಕಾಬಾರ, ಗೋಲಿ, ಚಿನ್ನಿ ದಾಂಡು, ಕುಂಟೆಬಿಲ್ಲೆ, ಕಡ್ಡಿ ಆಟ ಮತ್ತಿತರ ಹಳೆ ಆಟಗಳು, ಪರಿಸರ ಚಟುವಟಿಕೆಗಳಾದ ಬೀಜದುಂಡೆ ತಯಾರಿಕೆ, ಪ್ಲಾಸ್ಟಿಕ್ ಬ್ರಿಕ್ಸ್ ತಯಾರಿಕೆ, ಚಿತ್ರ ನೋಡಿ ಕವನ ಬರೆಯೋದು, ಕಥೆ ಕಟ್ಟೋದು, ಮಕ್ಕಳ ಹಕ್ಕು ಮತ್ತು ಕಾನೂನು, ಆರ್ಥಿಕ ಸಾಕ್ಷರ ಪ್ರೇಮ ಇವುಗಳನ್ನು ಕಲಿಸಿಕೊಡಲಾಯಿತು.

ಮಹಿಳಾ ಸಮಾಜದ ಅಧ್ಯಕ್ಷರಾದ ಸುಮಾ ಸುದೀಪ್, ಸಂಪನ್ಮೂಲ ವ್ಯಕ್ತಿಗಳಾದ ಪದ್ಮಾವತಿ, ಮೋನಿಕಾ ಹಾಗೂ ಬಶೀರಾ ರಶೀದ್, ನಾವು ಪ್ರತಿಷ್ಠಾನದ ಗೌತಮ್, ವಿಕ್ರಮ್ ಸಾಗರ್, ಕಾರ್ತಿಕ್ ಮತ್ತು ಶಿಬಿರದ ನಿರ್ವಾಹಕಿ ಸುಮನ್ ಮ್ಯಾಥ್ಯೂ ವೇದಿಕೆಯಲ್ಲಿ ಇದ್ದರು.

ಶಿಬಿರಾರ್ಥಿಗಳಾದ ಚಾಲುಕ್ಯ ಪ್ರಧಾನ್ ಸ್ವಾಗತಿಸಿ, ಪ್ರತಾಪ್ ಪದ್ಮನಾಭ ನಿರೂಪಿಸಿ, ಸ್ಮಿತಾ ಸುನೀಲ್ ಪ್ರಾರ್ಥಿಸಿ, ಯಶ್ವಿತ್ ಶಶಿಕುಮಾರ್ ವಂದಿಸಿದರು. ಮಕ್ಕಳಿಂದ ಕಲಿಕಾ ಪ್ರದರ್ಶನ ನಡೆಯಿತು.