ಕೂಡಿಗೆ, ಅ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಸಭೆಯಲ್ಲಿ ಸದಸ್ಯರು ಚರ್ಚೆ ಮಾಡಿದ ಸವಿಸ್ತಾರವಾದ ವರದಿಯನ್ನು, ಸಮರ್ಪಕವಾಗಿ ವರದಿ ಮಾಡದಿರುವ ಬಗ್ಗೆ ಉಪಾಧ್ಯಕ್ಷೆ ಜಯಶ್ರೀ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗವನ್ನು ಇತರರು ಒತ್ತುವರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಮದ ಅಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಜಾಗವನ್ನು ಸಂರಕ್ಷಣೆ ಮಾಡುವಂತೆ ಸಭೆಯಲ್ಲಿ ಹಾಜರಿದ್ದ ಸದಸ್ಯರು ತಿಳಿಸಿದರು. ಅಲ್ಲದೆ ಹಾರಂಗಿ ಮುಖ್ಯ ನಾಲೆಯ ಸಮೀಪದಲ್ಲಿರುವ ಹೋಂಸ್ಟೇ ಮಾಲೀಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಲ್ಪಟ್ಟಿರುವ ೯ ಹಾಗೂ ೧೧ನೇ ನಮೂನೆ ದಾಖಲೆಯನ್ನು ರದ್ದುಪಡಿಸುವಂತೆ ಸಭೆಯಲ್ಲಿ ಹಾಜರಿದ್ದ ಸದಸ್ಯ ಶಿವಕುಮಾರ್ ಮತ್ತು ಅನಂತ ಒತ್ತಾಯಿಸಿದರು.

ನಂತರ ಸಭೆಯಲ್ಲಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಮತ್ತು ೧೫ನೇ ಹಣಕಾಸಿನ ಕಾಮಗಾರಿಯನ್ನು ಆಧ್ಯತೆಯ ಅನುಗುಣವಾಗಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚೆ ನಡೆದವು. ಅಧ್ಯಕ್ಷತೆ ವಹಿಸಿದ್ದ ಕೆ.ಟಿ. ಗಿರೀಶ್ ಕುಮಾರ್ ಮಾತನಾಡಿ, ಮಾಸಿಕಸಭೆಯ ತೀರ್ಮಾನದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ, ಬೀದಿದೀಪಗಳ ದುರಸ್ತಿ ಕ್ರಮವನ್ನು ಕೈಗೊಳ್ಳಲಾಗಿದೆ. ಅದರಂತೆಯೇ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲು ಸದಸ್ಯರ ಸಹಕಾರ ಮುಖ್ಯ ಎಂದರು.

ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಸಹಕಾರ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭ ಸದಸ್ಯರಾದ ಟಿ.ಪಿ. ಹಮೀದ್, ಮಂಗಳ, ಮೋಹಿನಿ, ಅನಂತ, ಕೆ.ಎಸ್. ಶಿವಕುಮಾರ್, ಚಂದ್ರು, ಜಯಶೀಲಾ, ಹೆಚ್.ಎಸ್. ರವಿ, ಲಕ್ಷಿ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.