ವೀರಾಜಪೇಟೆ, ಅ. ೧೯: ಹೃದಯಾಘಾತದ ಚಿಕಿತ್ಸಾ ವಿಧಾನಗಳಲ್ಲಿ ಒಂದಾದ ಸಿಪಿಆರ್ ಚಿಕಿತ್ಸಾ ವಿಧಾನದ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು ಎಂದು ವೀರಾಜಪೇಟೆ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅಭಿಪ್ರಾಯಪಟ್ಟರು.

ಸಂತ ಅನ್ನಮ್ಮ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಹಾಗೂ ಎನ್.ಎಸ್.ಎಸ್. ಘಟಕಗಳ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಿ.ಪಿ.ಆರ್. (ಹೃದಯ ಶ್ವಾಸÀಕೋಶದ ಪುನರ್ ಜೀವನ ಚಿಕಿತ್ಸಾ ಕ್ರಮದ) ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತದ ಜೀವನ ಶೈಲಿಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು ಅದರ ಚಿಕಿತ್ಸಾ ವಿಧಾನದ ಬಗ್ಗೆ ಜಾಗೃತಿ ಅವಶ್ಯಕ. ಸಿ.ಪಿ.ಆರ್. ಸಹಾಯದಿಂದ ಹೃದಯಾಘಾತ ತಡೆಗಟ್ಟಲು ಸಾಧ್ಯ. ಉತ್ತಮ ದೈಹಿಕ ವ್ಯಾಯಾಮ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈಸೂರು ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವೈದ್ಯರಾದ ಡಾ. ಆದರ್ಶ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಿಯಮಿತ ಆಹಾರ, ವ್ಯಾಯಾಮ, ಯೋಗ, ದೈಹಿಕ ಚಟುವಟಿಕೆಗಳಿಂದ ಉತ್ತಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು. ಹೃದಯಾಘಾತ ಸಂಭವಿಸುವ ಸಂದರ್ಭದಲ್ಲಿ ಸಿ.ಪಿ.ಆರ್. ಮಾಡುವುದರಿಂದ ವ್ಯಕ್ತಿ ಯನ್ನು ಬದುಕಿಸಲು ಸಾಧ್ಯ ಎಂದರು. ಸಭಾ ಕಾರ್ಯಕ್ರಮದ ಬಳಿಕ ಸಿ.ಪಿ.ಆರ್. ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಮೈಸೂರು ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ವೈದ್ಯರುಗಳಾದ ಡಾ. ಆದರ್ಶ್, ಡಾ. ನಯನ್ ಡಾ. ಅರ್ಪಿತಾ ಸಿ.ಪಿ.ಆರ್. ಚಿಕಿತ್ಸಾ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು. ಮತ್ತು ಚಿಕಿತ್ಸಾ ಸಮಯ, ಅನುಸರಿಸಬೇಕಾದ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.

ಬೆಂಗಳೂರಿನ ಕ್ಯಾಡರ್ ಇಂಟರ್‌ನ್ಯಾಷನಲ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎಕ್ಮೊ ಸ್ಪೆಷಲಿಸ್ಟ್ ಡಾ. ನಿರಂಜನ್ ವಿದ್ಯಾರ್ಥಿಗಳಿಗೆ ಸಿ.ಪಿ.ಆರ್. ಬಗ್ಗೆ ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕಿ ಹೇಮ, ಎನ್.ಎಸ್.ಎಸ್. ಅಧಿಕಾರಿ ಬಿ. ಎನ್. ಶಾಂತಿಭೂಷಣ್, ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.