ಕೂಡಿಗೆ, ಅ. ೧೯: ಕೂಡಿಗೆ ಗ್ರಾಮ ಪಂಚಾಯಿತಿಗೆ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಉಪಾಧ್ಯಕ್ಷರಿಗೆ ಕೊಠಡಿ ವ್ಯವಸ್ಥೆ ಇದುವರೆಗೂ ದೊರೆತಿಲ್ಲ ಎಂದು ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ಅಸಮಾಧಾನವನ್ನು ಹೊರಹಾಕಿದ್ದಾರೆ.

ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಅವರಿಗೆ ವಿಷಯ ತಿಳಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಉಪಾಧ್ಯಕ್ಷೆ ಜಯಶ್ರೀ ಕಳೆದ ಒಂದು ವರ್ಷಗಳಿಂದಲೂ ಗ್ರಾಮ ಪಂಚಾಯಿತಿಯ ಸಭೆಗಳಲ್ಲಿ ವೇದಿಕೆಯಲ್ಲಿ ಕುಳಿತುಕೊಳ್ಳದೇ ಸದಸ್ಯರೊಂದಿಗೆ ಕುಳಿತುಕೊಳ್ಳುತ್ತಿದ್ದಾರೆ.

ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಿಗೆ ಅಭಿವೃದ್ಧಿ ಅಧಿಕಾರಿ ಕಾರ್ಯಾಲಯ ಪಕ್ಕದಲ್ಲಿ ಕೋಣೆ ಸಿದ್ದಪಡಿಸಿ ನೀಡಲಾಗಿತ್ತು. ಅಧ್ಯಕ್ಷರ ಕೊಠಡಿಯ ಸಮೀಪದಲ್ಲಿರುವ ಗ್ರಂಥಾಲಯದ ಕೊಠಡಿಯಲ್ಲಿ ವ್ಯವಸ್ಥೆ ಮಾಡಿ ಎಂದು ಹಾಲಿ ಉಪಾಧ್ಯಕ್ಷರು ಹೇಳುತ್ತಾರೆ.

ಅದರೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈ ಕೊಠಡಿಯನ್ನು ವಿಸ್ತರಿಸಿ ಗ್ರಂಥಾಲಯದ ಕೊಠಡಿಯಾಗಿ ಉದ್ಘಾಟನೆ ಮಾಡಿದ್ದಾರೆ. ಕಳೆದ ಸಾಲಿನ ಉಪಾಧ್ಯಕ್ಷರಿಗೆ ಸಿದ್ಧಪಡಿಸಿದ ಕೊಠಡಿ ವ್ಯವಸ್ಥೆ ಇದ್ದರೂ ಅದು ಬೇಡ ಎನ್ನುತ್ತಿದ್ದಾರೆ ಎಂದು ಅಭಿವೃದ್ಧಿ ಅಧಿಕಾರಿ ಮಂಜುಳಾ ತಿಳಿಸಿದ್ದಾರೆ.

ಇದಕ್ಕೆ ಸಂಬAಧಿಸಿದAತೆ ಅಧ್ಯಕ್ಷ ಕೆ.ಟಿ ಗಿರೀಶ್ ಮಾತನಾಡುತ್ತಾ ಕಳೆದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕೊಠಡಿಗಳ ನವೀಕರಣ ಮಾಡಿ ವ್ಯವಸ್ಥೆ ಮಾಡಲಾಗಿದೆ. ಅದರ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ