ಡಾ. ಮಂತರ್ ಗೌಡ ಬಣ್ಣನೆ

ಕುಶಾಲನಗರ, ಅ ೧೯: ರಾಮಾಯಣ ಕೃತಿ ಭಾರತೀಯರ ಜೀವನ ಚರಿತ್ರೆಯನ್ನು ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯ ಎಂದು ಶಾಸಕ ಡಾ. ಮಂತರ್ ಗೌಡ ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಹಾರಂಗಿ ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಹುಟ್ಟು-ಸಾವು ನಡುವಿನ ಜೀವನದಲ್ಲಿ ನಾವು ಇತರರು ಗುರುತಿಸುವಂತಹ, ಸದಾ ನೆಲೆನಿಲ್ಲುವ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕಿದೆ. ಸಾಧನೆಗೆ ಅಡ್ಡಿ ಬರುವ ಅಡೆತಡೆಗಳನ್ನು ಸವಾಲಾಗಿ ಎದುರಿಸಬೇಕಿದೆ. ಕೆಟ್ಟ ಚಿಂತನೆಗಳಿಗೆ ಅವಕಾಶ ನೀಡದಂತೆ ನಮ್ಮ ಮನಸ್ಸು ನಿಯಂತ್ರಿಸಲು ಕಲಿಯಬೇಕಿದೆ ಎಂದರು.

ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮಚಂದ್ರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಹಾಕವಿ ವಾಲ್ಮೀಕಿ ಅವರ ಆದರ್ಶ, ವ್ಯಕ್ತಿತ್ವ ಹಾಗೂ ಗುಣಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ರಾಮಾಯಣ ಒಂದಾಗಿದೆ. ಹಿಂದೂ ಮಹಾಕಾವ್ಯದಲ್ಲಿ ವಾಲ್ಮೀಕಿ ಬರೆದ ರಾಮಾಯಣವು ೨೪,೦೦೦ ಶ್ಲೋಕಗಳನ್ನು ಒಳಗೊಂಡಿದೆ.

ವಾಲ್ಮೀಕಿ ಮನುಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ, ಸಾಧಕರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ಇದರಿಂದ ನೈತಿಕತೆ, ಧೈರ್ಯ, ಶ್ರದ್ಧೆ, ಭಕ್ತಿಯನ್ನು ಕಲಿಯಲು ಸ್ಫೂರ್ತಿಯಾಗಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಭಾರತದ ಮೊದಲ ಆದಿಕವಿ ವಾಲ್ಮೀಕಿಯಾಗಿದ್ದಾರೆ. ವಾಲ್ಮೀಕಿ ಮಹರ್ಷಿ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ರಾಮಾಯಣದಂತಹ ಮಹಾಕಾವ್ಯವನ್ನು ರಚಿಸಿದವರು. ಪ್ರಸಕ್ತ ರಾಮನಾಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬೇಸರದ ಸಂಗತಿ ಎಂದರು. ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಉಪನ್ಯಾಸಕ ಬಂಡಳ್ಳಿ ಕುಮಾರ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ, ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರು ಕೃತಿಯನ್ನು ರಚಿಸಿದ ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯ ದಾರ್ಶನಿಕರಾಗಿದ್ದಾರೆ ಎಂದು ಬಣ್ಣಿಸಿದರು.

ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಮುಖಂಡ ಡಿ.ಆರ್. ಪ್ರಭಾಕರ್ ಮಾತನಾಡಿದರು. ಈ ಸಂದರ್ಭ ಕುಶಾಲನಗರ ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷö್ಮಮ್ಮ, ಸದಸ್ಯರಾದ ಸುರಯ್ಯಬಾನು, ಪದ್ಮಾವತಿ, ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಮಧುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಕುಶಾಲನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಸ್ವಾತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀದೇವಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಷ್ಪಾ, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ವರ್ಗದ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅಶೋಕ್, ಯುವ ಘಟಕದ ಅಧ್ಯಕ್ಷ ಚಂದನ್, ಮುಖಂಡ ಪರಮೇಶ್, ವಿವಿಧ ಸಂಘಟನೆಗಳ ಮುಖಂಡರಾದ ನಿರ್ವಾಣಪ್ಪ, ಹೊನ್ನಪ್ಪ, ದಾಮೋದರ್, ಪ್ರಭಾಕರ್, ಯೋಗೇಂದ್ರ ನಾಯಕ್ ಪಾಲ್ಗೊಂಡಿದ್ದರು.

ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳು, ಹಾಗೂ ಸಾಧಕರನ್ನು ಶಾಸಕ ಡಾ. ಮಂತರ್ ಗೌಡ ಅವರು ಸನ್ಮಾನಿಸಿ, ಗೌರವಿಸಿದರು.