ಕಣಿವೆ, ಅ. ೧೯: ರೈತರ ಜೀವನಾಡಿ ಹಾರಂಗಿ ಸೇರಿದಂತೆ ಜೀವನದಿ ಕಾವೇರಿ ನದಿಗಳ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಹಾರಂಗಿಯಲ್ಲಿ ಬಾಗಿನ ಅರ್ಪಣೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಹಾರಂಗಿ ಜಲಾಶಯದಿಂದ ಜಿಲ್ಲೆಯ ರೈತರಿಗಿಂತ ನೆರೆಯ ಮೈಸೂರು ಹಾಗೂ ಹಾಸನ ಜಿಲ್ಲೆಗಳ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದರೂ ಕೂಡ ಜಲಾಶಯ ಹಾಗೂ ನದಿಯ ಹಿತದೃಷ್ಟಿಯಿಂದ ಸರ್ಕಾರದಿಂದ ವಿಶೇಷ ಅನುದಾನಗಳನ್ನು ತಂದು ಮುಖ್ಯ ಕಾಲುವೆ, ಉಪಕಾಲುವೆಗಳು ಮತ್ತು ತೂಬುಗಳ ದುರಸ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ನದಿಗೆ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯಗಳನ್ನು ಬಿಸಾಕದಂತೆ ಜಾಗೃತಿ ಮೂಡಿಸುವ ಅಗತ್ಯವಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಇಳಿಕೆಯಾದೊಡನೆ ಹೂಳು ತೆಗೆಯಲಾಗುವುದು. ಈಗಾಗಲೇ ಹಾರಂಗಿಗೆ ಹರಿದು ಬರುವ ಹಟ್ಟಿಹೊಳೆ ವ್ಯಾಪ್ತಿಯಲ್ಲಿನ ಉಪ ನದಿಗಳಂಚಿನಲ್ಲಿ ಕಾಮಗಾರಿ ಭರದಿಂದ ಸಾಗಿದೆ ಎಂದು ಶಾಸಕರು ವಿವರಿಸಿದರು.

ಇನ್ನು ಮುಂದೆ ಪ್ರತೀ ವರ್ಷ ಕಾವೇರಿ ತೀರ್ಥೋದ್ಭವದ ಬಳಿಕ ತಲಕಾವೇರಿಯಿಂದ ಪವಿತ್ರ ಗಂಗಾಜಲ ತಂದು ಹಾರಂಗಿ ಜಲಾಶಯದ ಮುಂಬದಿಯಲ್ಲಿನ ಕಾವೇರಿ ಮಾತೆಗೆ ಅಭಿಷೇಕಗೈದು ಪೂಜಿಸಲಾಗುವುದು.

ಈ ಪೂಜಾ ಕಾರ್ಯಕ್ಕೆ ಅಚ್ಚುಕಟ್ಟು ರೈತರನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲಿ ಬಾಗಿನ ಬಿಟ್ಟು ರೈತರೊಂದಿಗೆ ಸಿಹಿ ಊಟ ಮಾಡುವ ಸೌಭಾಗ್ಯ ದೊರಕಿದ್ದಕ್ಕೆ ಶಾಸಕ ಡಾ. ಮಂತರ್ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭ ವಿಧಾನ ಪರಿಷತ್ತು ಸದಸ್ಯ ಸುಜಾ ಕುಶಾಲಪ್ಪ, ನೀರು ಬಳಕೆದಾರ ಮಹಾಮಂಡಲದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ಕೂಡು ಮಂಗಳೂರು ಗ್ರಾ.ಪಂ. ಅಧ್ಯಕ್ಷ ಭಾಸ್ಕರ ನಾಯಕ್ ಇದ್ದರು.