ವೀರಾಜಪೇಟೆ, ಅ. ೨೦: ಪಟ್ಟಣದಲ್ಲಿ ನಡೆದ ವೀರಾಜಪೇಟೆ ಕ್ರಿಕೆಟ್ ಉತ್ಸವದಲ್ಲಿ (ವಿ.ಸಿ.ಎಫ್) ಲ್ಯಾಂಪೈರಿಡ್ ತಂಡವು ಫೈನಲ್‌ನಲ್ಲಿ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಐ.ಪಿ.ಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲ್ಯಾಂಪೈರಿಡ್ ತಂಡ ೧೧ ರನ್‌ಗಳಿಂದ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡವನ್ನು ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲ್ಯಾಂಪೈರಿಡ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೭೦ ರನ್ ಗಳಿಸಿತು. ಪ್ರಶಸ್ತಿ ಪಡೆಯಲು ೭೧ ರನ್‌ಗಳ ಗುರಿ ಪಡೆದ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡ ನಿಗದಿತ ೧೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೫೯ ರನ್ ಗಳಿಸಲಷ್ಟೆ ಶಕ್ತವಾಯಿತು.

ಲ್ಯಾಂಪೈರಿಡ್ ತಂಡದ ಪರವಾಗಿ ಶಾರುಖ್ ೨೦, ಮನು ೧೯ ಹಾಗೂ ಮಹೇಶ್ ೧೪ ರನ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಶಾರುಖ್ ೩ ಹಾಗೂ ಜುನೈದ್ ೨ ವಿಕೆಟ್ ಪಡೆದರೆ, ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡದ ಪರವಾಗಿ ಹರ್ಷದ್ ೨೮ ಹಾಗೂ ನೀತು ಆಳ್ವ ೧೦ ರನ್ ಹಾಗೂ ಬೌಲಿಂಗ್ ವಿಭಾಗದಲ್ಲಿ ರಜಾಕ್೨ ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ಪ್ರಶಸ್ತಿ ಪಡೆದ ಲ್ಯಾಂಪೈರಿಡ್ ತಂಡ ಆಕರ್ಷಕ ಟ್ರೋಫಿ ಹಾಗೂ ೧ ಲಕ್ಷ ರೂ ನಗದು ಮತ್ತು ದ್ವಿತೀಯ ಸ್ಥಾನ ಪಡೆದ ಲೀಲಾಕಾನ್ ಮಿಸ್ಟಿಲ್ಯಾಂಡ್ ತಂಡ ಆಕರ್ಷಕ ಟ್ರೋಫಿ ಹಾಗೂ ೬೦ ಸಾವಿರ ರೂ ನಗದು ಬಹುಮಾನವನ್ನು ಪಡೆದುಕೊಂಡಿತು. ಲೀಗ್‌ನಲ್ಲಿ ಗ್ಲೋಬಲ್ ಪೈರೆಟ್ಸ್, ತ್ರಿಸ್ಟಾರ್, ಟೀಂ ಮಹಾಮೇಳ, ಟೀಂ ಎಕ್ಯೂಬ್, ಟೀಂ ಇ.ಎಸ್.ಪಿ.ಎನ್, ಸುಶಾಂತ್ ಫ್ರೆಂಡ್ಸ್, ಟೀಂ ಮೆಟ್ರೊ, ಆರ್.ಸಿ.ವಿ ರಾಯಲ್ ಚಾಲೆಂರ‍್ಸ್, ಲಿಥಿನ್ ಕ್ರಿಕೆರ‍್ಸ್, ಟೀಂ ಎನ್.ವೈ.ಸಿ ಸೇರಿದಂತೆ ಒಟ್ಟು ೧೨ ತಂಡಗಳು ಭಾಗವಹಿಸಿದ್ದವು.

ಅಂತಿಮ ನಾಲ್ಕರ ಘಟ್ಟಕ್ಕೆ ಲ್ಯಾಂಪೈರಿಡ್, ಲೀಲಾಕಾನ್ ಮಿಸ್ಟಿಲ್ಯಾಂಡ್, ಗ್ಲೋಬಲ್ ಪೈರೆಟ್ಸ್ ಹಾಗೂ ಟೀಂ ಮೆಟ್ರೊ ತಂಡ ಪ್ರವೇಶ ಪಡೆದಿತ್ತು. ಸಮಾರೋಪ ಸಮಾರಂಭ ದಲ್ಲಿ ಪಿ. ಮುತ್ತಪ್ಪ, ಪುರಸಭೆಯ ಸದಸ್ಯರಾದ ಮಹಮ್ಮದ್ ರಾಫಿ, ಡಿ.ಪಿ. ರಾಜೇಶ್, ಶಶಿ ಕುಮಾರ್, ರಜತ್, ಟೂರ್ನಿಯ ಆಯೋಜಕರಾದ ಮಾದಂಡ ತಿಮ್ಮಯ್ಯ, ಪುರಸಭೆಯ ನಾಮನಿರ್ದೇಶಿತ ಸದಸ್ಯ ಅತೀಫ್ ಮನ್ನ ಹಾಗೂ ನಿತಿನ್ ಲೇಪು ಮತ್ತಿತರರು ಉಪಸ್ಥಿತರಿದ್ದರು.

ಸರಣಿ ಶ್ರೇಷ್ಠ ಹಾಗೂ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಲ್ಯಾಂಪೈರಿಡ್ ತಂಡದ ಶಾರುಖ್ ಪಡೆದರೆ, ಉತ್ತಮ ಬ್ಯಾಟ್ಸ್ಮೆನ್ ಸುದೀಶ್, ಉತ್ತಮ ಬೌಲರ್ ಯಾಸಿರ್, ಉತ್ತಮ ಆಲ್‌ರೌಂಡರ್ ಭರತ್, ಹೆಚ್ಚು ರನ್ ನಾಸರ್, ಹೆಚ್ಚು ವಿಕೆಟ್ ಶಾರುಖ್, ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಭರತ್, ವಿಕೆಟ್ ಕೀಪರ್ ಪ್ರಶಸ್ತಿಯನ್ನು ಗಿರೀಶ್, ಉತ್ತಮ ಸಿಕ್ಸ್ ಉತ್ತಪ್ಪ, ಹೆಚ್ಚು ಬೌಂಡರಿ ಅಜಿತ್, ಹೆಚ್ಚು ಸಿಕ್ಸರ್ ನಾಸರ್, ಉತ್ತಮ ಹಿರಿಯ ಆಟಗಾರ ಪ್ರಶಸ್ತಿಯನ್ನು ಸುಬ್ಬಯ್ಯ, ಉದಯೋನ್ಮುಖ ಆಟಗಾರ ಅಫ್ತಾಜ್, ಉತ್ತಮ ತಂಡ ಪ್ರಶಸ್ತಿ ಗ್ಲೋಬಲ್ ಪೈರೆಟ್ಸ್ ತಂಡ ಪಡೆದುಕೊಂಡಿತು.