ಮರಗೋಡು, ಅ. ೧೯: ಮರಗೋಡು-ಹೊಸ್ಕೇರಿ, ಮರಗೋಡು-ಕಟ್ಟೆಮಾಡು, ಮರಗೋಡು-ಹುಲಿತಾಳ ರಸ್ತೆಗಳು ತೀವ್ರ ಹದಗಟ್ಟಿದ್ದು, ಸಂಚಾರಕ್ಕೆ ಸಂಚಾಕಾರ ವಾಗಿದೆ. ಮರಗೋಡು-ಹೊಸ್ಕೇರಿ ರಸ್ತೆಯ ಸುಮಾರು ೩ ಕಿ.ಮೀ. ನಷ್ಟು ಮಾರ್ಗದಲ್ಲಿ ಪ್ರಪಾತ ಗಳಂತೆ ಚರಂಡಿ ಉದ್ಭವ ವಾಗಿ ರಸ್ತೆ ಹಾಗೂ ಚರಂಡಿ ನಡುವೆ ಯಾವುದೇ ರೀತಿಯ ವ್ಯತ್ಯಾಸಗಳು ಕಂಡು ಬರುತ್ತಿಲ್ಲ.

ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಚಲಿಸುತ್ತಿದ್ದು, ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ಚಿಂತೆಯೇ ಇಲ್ಲದಂತೆ ಕಾಣುತ್ತಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಮರಗೋಡುವಿನಿಂದ ಕತ್ತಲೆಕಾಡು ಮುಖಾಂತರ ಮಡಿಕೇರಿಗೆ ತೆರಳುವ ರಸ್ತೆಯಲ್ಲಿ ತಮ್ಮ ವಾಹನಗಳನ್ನು ಚಲಿಸುವ ಜನರು ಮನೆ ತಲುಪಲೂ ಹರಸಾಹಸ ಪಡಬೇಕಾಗಿದೆ. ಸುಮಾರು ೧ ಅಡಿಯಷ್ಟು ಗುಂಡಿಗಳು ಸೃಷ್ಟಿಯಾಗಿದ್ದು ಹಲವಾರು ಅಪಘಾತಗಳು ಸಂಭವಿಸಿವೆ. ಮರಗೋಡು-ಕೊಂಡAಗೇರಿ ರಸ್ತೆಯೂ ಸವಾರರಿಗೆ ನರಕಸದೃಶ್ಯವನ್ನು ತೋರಿಸುತ್ತಿದ್ದು, ಜನಪ್ರತಿನಿಧಿಗಳು, ಲೋಕೋಪಯೋಗಿ ಇಲಾಖೆಯವರು ಇತ್ತ ಗಮನಹರಿಸಿ ರಸ್ತೆ-ಚರಂಡಿ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಸಾರ್ವಜನಿಕರ ಆಗ್ರಹವಾಗಿದೆ.

- ಐ.ಸಿ. ಲವಕುಮಾರ್