ಗೋಣಿಕೊಪ್ಪಲು, ಅ. ೨೦: ಸಂಘವು ೨೮ ಲಕ್ಷ ಲಾಭಾಂಶದೊAದಿಗೆ ಮುಂದುವರೆಯುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಸದಸ್ಯರಿಗೆ ಶೇ.೮.೫ ಡಿವಿಡೆಂಟ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಎಂ.ಮುತ್ತಪ್ಪ ಪ್ರವೀಣ್ ತಿಳಿಸಿದರು.

ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ೨೦೨೪-೨೫ನೇ ಸಾಲಿನ ಕಾರ್ಯಸೂಚಿಯಂತೆ ಒಟ್ಟು ೨೮ ಕೋಟಿ ೯೦ ಲಕ್ಷ ಸಾಲ ವಿತರಿಸಲು ಗುರಿ ನಿಗದಿ ಪಡಿಸಿದ್ದು, ಇದರಲ್ಲಿ ಕೃಷಿ ಕ್ಷೇತ್ರಕ್ಕೆ ೧೨ ಕೋಟಿ ೫೦ ಲಕ್ಷ ಮತ್ತು ಕೃಷಿಯೇತರ ಸಾಲಕ್ಕೆ ೧೬ ಕೋಟಿ ೫೦ ಲಕ್ಷ ವಿತರಿಸಲು ಗುರಿ ನಿಗದಿಪಡಿಸಲಾಗಿದೆ. ಹಾಗೂ ೩೦ ಕೋಟಿ ೧೦ ಲಕ್ಷ ಠೇವಣಿ ಸಂಗ್ರಹಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

೭ ಕೋಟಿ ಹೂಡಿಕೆ ಮಾಡಲು ಯೋಜನೆ ರೂಪಿಸಿದ್ದು ವರ್ಷಾಂತ್ಯದಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ತೋಟದ ಮನೆ ಸಾಲ ಮತ್ತು ಕಾಫಿ ಈಡಿನ ಸಾಲವನ್ನು ನೀಡಲಾಗುತ್ತದೆ ಎಂದು ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸರ್ವ ಸದಸ್ಯರ ಸಹಕಾರ ಅಗತ್ಯವಿದೆ. ಪ್ರತಿ ಸದಸ್ಯನ ಬೇಡಿಕೆಗಳನ್ನು ಪೂರೈಸುವುದು ಸಂಘದ ಮೂಲ ಉದ್ದೇಶವಾಗಿದೆ. ರೈತರು ತಮ್ಮ ಸಂಘದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕು. ಸಂಘದ ಬೆಳವಣಿಗೆಗೆ ಇದು ಅನುಕೂಲವಾಗಲಿದೆ. ಸಂಘದ ಆಡಳಿತ ಮಂಡಳಿ ಸದಸ್ಯರ ಹಿತ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ನಡೆದುಕೊಳ್ಳಲಿದೆ. ಸದಸ್ಯರಿಗೆ ಅಗತ್ಯವಿರುವ ಸಾಲಗಳನ್ನು ಸಕಾಲದಲ್ಲಿ ಮಂಜೂರು ಮಾಡಲು ಸದಾ ಸಿದ್ದರಿದ್ದೇವೆ. ಸಂಘದ ಸಹಕಾರ ಪಡೆದು ಎಲ್ಲಾ ರೈತರು ಆರ್ಥಿಕವಾಗಿ ಮುಂದೆ ಬರುವಂತೆ ಸದಸ್ಯರಿಗೆ ಕರೆ ನೀಡಿದರು.

ಸಂಘದ ಅಭಿವೃದ್ದಿಗೆ ಹಿರಿಯ ಸದಸ್ಯರುಗಳು ಹಲವು ಸಲಹೆಗಳನ್ನು ಈ ಸಂದರ್ಭ ನೀಡಿದರು. ಸಂಘದ ಅಭಿವೃದ್ಧಿಗೆ ಕಠಿಬದ್ದವಾಗಿ ಆಡಳಿತ ಮಂಡಳಿಯು ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಮತ್ರಂಡ ಎಂ.ತಮ್ಮಯ್ಯ ವರದಿ ವಾಚಿಸಿದರು. ಮಹಾಸಭೆಯಲ್ಲಿ ಹಲವು ಸದಸ್ಯರು ಸಂಘದ ಅಭಿವೃದ್ದಿಯ ಬಗ್ಗೆ ಹಲವು ಸಲಹೆಗಳನ್ನು ನೀಡಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮೇಲತಂಡ ಎ.ರಮೇಶ್, ನಿರ್ದೇಶಕರುಗಳಾದ ಚೇಂದಿರಡಿ ತಿಮ್ಮಯ್ಯ, ಕೋಳೆರ ಎಸ್.ನರೇಂದ್ರ, ಮಿದೇರಿರ ನವೀನ್, ಅಜ್ಜಿಕುಟ್ಟಿರ ಎ.ಬೋಪಣ್ಣ, ಕಿರಿಯಮಾಡ ಕೆ.ಮಂದಣ್ಣ, ಹೆಚ್.ಕೆ. ರಾಜಪ್ಪ, ತೀತಿರ ಎಸ್.ಊರ್ಮಿಳ, ಕಳ್ಳೇಂಗಡ ಪಿ.ಗಾಯತ್ರಿ, ಜೆ.ಬಿ. ಗಂಗು, ಮತ್ರಂಡ ಎಂ.ತಮ್ಮಯ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು.