ಸೋಮವಾರಪೇಟೆ, ಅ. ೨೧: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಜಾನುವಾರುಗಳ ಕಾಲುಬಾಯಿ ರೋಗದ ಹತೋಟಿಗೆ ನಿರಂತರವಾಗಿ ಲಸಿಕಾಕರಣ ನಡೆಯಬೇಕು. ಆ ಮೂಲಕ ಪಶು ಸಂಪತ್ತಿನ ರಕ್ಷಣೆಯಾಗಬೇಕು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.

ಪಶು ವೈದ್ಯಕೀಯ ಇಲಾಖೆ ವತಿಯಿಂದ ತಾಲೂಕಿನಲ್ಲಿ ಪಶುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಟ್ಟಣದ ನ್ಯಾಯಾಲಯ ಮುಂಭಾಗವಿರುವ ಮಲ್ಲಣ್ಣ ಅವರ ಮನೆಯಲ್ಲಿ ೮ ಹಸುಗಳಿಗೆ ಲಸಿಕೆ ಹಾಕುವ ಮೂಲಕ ತಾಲೂಕಿನಾದ್ಯಂತ ಜರುಗುವ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕರು, ಸೋಮವಾರಪೇಟೆ ತಾಲೂಕಿನಾದ್ಯಂತ ೧೯ ಸಾವಿರ ಪಶುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಜಾನುವಾರುಗಳ ಮಾಲೀಕರು ತಪ್ಪದೇ ತಮ್ಮ ಪಶುಗಳಿಗೆ ಲಸಿಕೆ ಹಾಕಿಸಬೇಕು. ಒಂದರಿAದ ಮತ್ತೊಂದು ಪಶುಗೆ ಈ ರೋಗ ಹರಡದಂತೆ ಕ್ರಮ ವಹಿಸಬೇಕೆಂದು ಕಿವಿಮಾತು ಹೇಳಿದರು.

ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು, ಜಾನುವಾರುಗಳ ಮಾಲೀಕರು ಉದಾಸೀನತೆ ತೋರಬಾರದು. ಪಶುಗಳ ಆರೋಗ್ಯದ ರಕ್ಷಣೆ ಹಾಗೂ ಭದ್ರತೆಯೂ ನಮ್ಮ ಕರ್ತವ್ಯವಾಗಿದ್ದು, ಒಂದು ಪಶುವಿದ್ದರೂ ಸಹ ಅದಕ್ಕೆ ಲಸಿಕೆ ಹಾಕಿಸಬೇಕು. ಆ ಮೂಲಕ ಗುರಿ ಸಾಧನೆಯಾಗಬೇಕೆಂದು ಸಲಹೆ ನೀಡಿದರು,

ತಾ. ೨೧ರಿಂದ ನ. ೨೨ ರವರೆಗೆ ಅಭಿಯಾನ ಜರುಗಲಿದ್ದು, ೧೯ ಮಂದಿಯ ತಂಡವನ್ನು ರಚಿಸಲಾಗಿದೆ. ಪ್ರತಿದಿನ ಕನಿಷ್ಟ ೧೦೦ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು. ಲೆಕ್ಕಕ್ಕಾಗಿ ಲಸಿಕೆಯಲ್ಲ; ಪ್ರಾಮಾಣಿಕ ಸೇವೆಗಾಗಿ ಲಸಿಕೆ ಹಾಕಬೇಕೆಂದು ಸಿಬ್ಬಂದಿಗಳಿಗೆ ಸೂಚಿಸಿದರು.

ಲಸಿಕೆ ನಂತರ ಒಂದು ವೇಳೆ ಅಡ್ಡ ಪರಿಣಾಮ ಕಂಡು ಬಂದರೆ ತಕ್ಷಣ ಚಿಕಿತ್ಸೆ ನೀಡಲು ವೈದ್ಯರು ಸಿದ್ಧರಿದ್ದಾರೆ. ಪಶುಗಳು ಎಲ್ಲೇ ಇದ್ದರೂ ಅಲ್ಲಿಗೆ ತೆರಳಿ ಲಸಿಕೆ ನೀಡಲಾಗುವುದು. ಜಾನುವಾರುಗಳ ಮಾಲೀಕರೂ ಸಹ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು. ಸರ್ಕಾರ ಉಚಿತವಾಗಿ ಯೋಜನೆ ಜಾರಿಗೆ ತಂದಿದ್ದು, ಪಶುಗಳ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಈ ಸಂದರ್ಭ ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್ ಸೇರಿದಂತೆ ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.