ಸೋಮವಾರಪೇಟೆ, ಅ. ೨೧: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಾಣಗೊಂಡಿರುವ ಸಿಂಥೆಟಿಕ್ ಟರ್ಫ್ ಮೈದಾನದ ರಕ್ಷಣೆಗೆ ತಡೆಗೋಡೆ ನಿರ್ಮಾಣಕ್ಕಾಗಿ ರೂ. ೫೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕಾಮಗಾರಿಗೆ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರಲ್ಲಿ ಕಾಮಗಾರಿಯ ಅವಶಕ್ಯತೆಯ ಬಗ್ಗೆ ಗಮನ ಸೆಳೆದ ಹಿನ್ನೆಲೆ ತಕ್ಷಣ ಅನುದಾನ ಬಿಡುಗಡೆಗೊಳಿಸಿದ್ದು, ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಯಾವ ಹಂತದಲ್ಲಿಯೂ ಕಾಮಗಾರಿ ಕಳಪೆಯಾಗಬಾರದು ಎಂದು ಶಾಸಕರು ಸಂಬAಧಿಸಿದ ಅಭಿಯಂತರರಿಗೆ ಸೂಚನೆ ನೀಡಿದರು.

ಟರ್ಫ್ ಮೈದಾನದ ಒಂದು ಭಾಗದಲ್ಲಿ ಬರೆಯಿದ್ದು, ಮಳೆಗಾಲದಲ್ಲಿ ಕುಸಿದರೆ ಮೈದಾನದ ಭದ್ರತೆಗೆ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಆರಂಭದಲ್ಲಿಯೇ ಮನಗಂಡು ಅನುದಾನ ಒದಗಿಸಲಾಗಿದೆ ಎಂದ ಶಾಸಕರು, ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಕ್ರೀಡೆ ಎಂಬುದು ರಕ್ತಗತವಾಗಿದೆ. ಕ್ರೀಡೆಗಳಿಗೆ ಅವಶ್ಯಕವಿರುವ ಮೈದಾನ ಹಾಗೂ ಕ್ರೀಡಾಪಟುಗಳಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದರು.

ಮೈದಾನದ ಒಂದು ಬದಿಯಲ್ಲಿ ೭೦ ಮೀಟರ್ ಉದ್ದ, ೪.೫ ಮೀಟರ್ ಎತ್ತರದಲ್ಲಿ ತಡೆಗೋಡೆ ನಿರ್ಮಾಣಗೊಳ್ಳಲಿದೆ. ಇದು ಶಾಶ್ವತ ಕಾಮಗಾರಿಯಾಗಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡಿ ಅಚ್ಚುಕಟ್ಟಾಗಿ ನಿರ್ಮಿಸಬೇಕು ಎಂದು ನಿರ್ದೇಶಿಸಿದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್ ಮಾತನಾಡಿ, ಟರ್ಫ್ ಮೈದಾನ ಉದ್ಘಾಟನೆ ಸಂದರ್ಭ ಹಾಕಿಪಟುಗಳು, ತಡೆಗೋಡೆಯ ಅವಶ್ಯಕತೆಯ ಬಗ್ಗೆ ಶಾಸಕರ ಗಮನ ಸೆಳೆದಿದ್ದರು. ತಕ್ಷಣ ಸ್ಪಂದಿಸಿದ ಶಾಸಕರು ಉಸ್ತುವಾರಿ ಸಚಿವರ ಗಮನ ಸೆಳೆದು ರೂ. ೫೦ ಲಕ್ಷ ಬಿಡುಗಡೆಗೊಳಿಸಿದ್ದು, ಕ್ರೀಡಾಪಟುಗಳ ಆಶಯ ಈಡೇರಿದಂತಾಗಿದೆ ಎಂದರು.

ಈ ಸಂದರ್ಭ ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಕುಮಾರಸ್ವಾಮಿ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿ ವಿಸ್ಮಯಿ, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಪ್ರಮುಖರಾದ ಚಂಗಪ್ಪ, ಸಿ.ಇ. ಚೇತನ್, ಜನಾರ್ದನ್, ಮಂಜುಳಾ ಹರೀಶ್, ಎಂ.ಎ. ರುಬೀನಾ, ಮೀನಾಕುಮಾರಿ, ಜಮೀರ್‌ಖಾನ್, ಗೌಡಳ್ಳಿ ಮಹೇಶ್, ಕೂಗೂರು ಸುಮಂತ್, ಭುವನೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.