ಮಡಿಕೇರಿ, ಅ. ೨೧: ಪಿಗ್ಮಿ ಕಟ್ಟಿದ ಹಣವನ್ನು ಹಿಂತಿರುಗಿಸದೆ ವಂಚಿಸಿರುವ ಆರೋಪದಡಿ ಖಾಸಗಿ ಹಣಕಾಸು ಸಂಸ್ಥೆಯೊAದರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಂಡಿನಪೇಟೆ ಯಲ್ಲಿರುವ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಬೈಲುಕುಪ್ಪೆ ನಿವಾಸಿ ಚಂದ್ರಹಾಸ ಕೆ.ಟಿ. (೫೨) ಎಂಬವರು ತಾ. ೦೧.೦೬.೨೦೨೩ ರಿಂದ ೨೦೨೪ನೇ ಸಾಲಿನ ಫೆಬ್ರವರಿ

(ಮೊದಲ ಪುಟದಿಂದ) ತಿಂಗಳವರೆಗೆ ರೂ.೯೯,೫೦೦ಗಳ ಪಿಗ್ಮಿ ಹಣವನ್ನು ಕಟ್ಟಿದ್ದಾರೆ. ಆದರೆ, ಆ ಹಣವನ್ನು ಸೊಸೈಟಿಯವರು ಹಿಂತಿರುಗಿಸದೆ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಿನಿAದ ಸೊಸೈಟಿ ಕಚೇರಿಯನ್ನು ಮುಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಮುಖ್ಯಸ್ಥ ರಾಹುಲ್ ಚಕ್ರಪಾಣಿ ಹಾಗೂ ಸಿಇಓ ಆದ ಸನ್ನಿ ಅಬ್ರಹಾಂ ಹಾಗೂ ಇತರರು ಸೇರಿ ವಂಚನೆ ಮಾಡಿರುವ ಆರೋಪದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗೋಣಿಕೊಪ್ಪ, ವೀರಾಜಪೇಟೆ ಹಾಗೂ ಕುಶಾಲನಗರದಲ್ಲಿ ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ತೆರೆದು ಸುತ್ತಮುತ್ತಲಿನ ಹಲವು ಗ್ರಾಹಕರಿಂದ ಪಿಗ್ಮಿ ಕಲೆಕ್ಷನ್, ಆರ್.ಡಿ. ಹಾಗೂ ಬಾಂಡ್ ಮುಖಾಂತರ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹಣ ಹಿಂತಿರುಗಿಸದೆ ಕಚೇರಿಯನ್ನು ಮುಚ್ಚಿ ಸಾರ್ವಜನಿಕರಿಗೆ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಕುರಿತು ಗೋಣಿಕೊಪ್ಪ, ವೀರಾಜಪೇಟೆ ನಗರ ಹಾಗೂ ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಮಲಬಾರ್ ಮಲ್ಟಿಸ್ಟೇಟ್ ಆಗ್ರೋ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ ಹಣವನ್ನು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಲ್ಲಿ ದಾಖಲಾತಿಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.