ಮಡಿಕೇರಿ, ಅ. ೨೧: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು ಜಿಲ್ಲಾ ಘಟಕ ಹಾಗೂ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ತಾ. ೨೯ ರಂದು ಮೇಕೇರಿಯ ಸತ್ಯಸಾಯಿ ಮಂದಿರದಲ್ಲಿ ರಾಷ್ಟಿçÃಯ ಆಯುರ್ವೇದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನೀಮಾ ಅಧ್ಯಕ್ಷ ಡಾ. ರಾಜಾರಾಮ್ ಮಾಹಿತಿ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ ದಿನದ ಅಂಗವಾಗಿ ತಾ. ೨೧ ರಿಂದ ವಿವಿಧ ಕಾರ್ಯಕ್ರಮಗಳು ಆರಂಭಗೊAಡಿವೆ. ‘ಆಧುನಿಕತೆಯಲ್ಲಿ ಆಯುರ್ವೇದ’ ಎಂಬ ಘೋಷವಾಕ್ಯದೊಂದಿಗೆ ಆಚರಣೆ ನಡೆಸಲಾಗುತ್ತಿದ್ದು, ‘ಹಿತ್ತಲ ಮದ್ದಿನ ಗಿಡಗಳೊಂದಿಗೆ ಸೆಲ್ಫಿ’ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮದ್ದಿನ ಗಿಡದ ಹೆಸರು ಹಾಗೂ ಅದರ ಎದುರು ಸೆಲ್ಫಿ ತೆಗೆದು ೯೮೮೬೨೬೬೧೨೦ ಸಂಖ್ಯೆಗೆ ಕಳುಹಿಸಬಹುದಾಗಿದೆ. ಕಿರಿಯರಿಗೆ, ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಎಂಬ ೪ ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಆಯುರ್ವೇದ ವಿದ್ಯಾರ್ಥಿಗಳಿಗೆ ‘ಎಐ ಹಾಗೂ ಆಯುರ್ವೇದ-ಮುಂದಿನ ಉಜ್ವಲ ಭವಿಷ್ಯ’ ಎಂಬ ವಿಷಯದ ಕುರಿತು ಪ್ರಬಂದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ತಾ. ೨೯ರ ಬೆಳಿಗ್ಗೆ ೮.೩೦ಕ್ಕೆ ಮೇಕೇರಿಯ ಸತ್ಯಸಾಯಿ ಮಂದಿರದಲ್ಲಿ ಧನ್ವಂತರಿ ಹವನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ತಜ್ಞರೊಂದಿಗೆ ಸಂವಾದ, ಹಿರಿಯ ಆಯುರ್ವೇದ ತಜ್ಞರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳು ನಡೆಯಲಿವೆ. ನೀಮಾ ಸಂಘಟನೆ ೨೫ ವರ್ಷದ ಸಂಭ್ರಮದಲ್ಲಿರುವ ಹಿನ್ನೆಲೆ ಒಂದು ವರ್ಷಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದರು.

ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ಅರುಣ್ ಮಾತನಾಡಿ, ಆಯುರ್ವೇದದಿಂದಾಗುವ ಲಾಭ ಹಾಗೂ ಜೀವನ ಕ್ರಮದಲ್ಲಿ ಅನುಸರಿಸುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಕ್ರಮವನ್ನು ವಿವಿಧೆಡೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಆಯುಷ್ ಇಲಾಖೆ ಪ್ರಭಾರ ಅಧಿಕಾರಿ ಡಾ. ಶೈಲಜಾ, ಸತ್ಯ ಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೋಮಣ್ಣ, ಸಂಯೋಜಕ ಗಜರಾಜ್ ನಾಯ್ಡು ಉಪಸ್ಥಿತರಿದ್ದರು.